ದ್ವೇಷ ಮತ್ತು ಅಸೂಯೆ ಇಲ್ಲದೆ ಜಾತಿ,ಮತ,ಧರ್ಮ, ಬೇದವನ್ನು ಮರೆತು ಸಾಗಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಗಣ್ಯರ ಮಾತು
ಪೈಂಬೆಚಾಲು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಎಸ್ ಬಿ ಎಸ್ ವತಿಯಿಂದ ಇಂದು ಸ್ವತಂತ್ರೋತ್ಸವದ ಪ್ರಯುಕ್ತ ಭಾವೈಕ್ಯತ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.ಪೈಂಬೆಚಾಲು ಎಚ್ ಐ ಎಂ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರುಗಳು ಭಾಗವಹಿಸಿದ್ದರು.
ಪೈಂಬೆಚಾಲು ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಬಿ ಎಂ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಸ್ಸಯ್ಯಿದ್ ಉಮರ್ ಜಿಫ್ರಿ ಅಲ್ ಹನೀಫಿ ಕುಂಬಕ್ಕೋಡು ರವರು ಪ್ರಾರ್ಥನೆ ನೆರವೇರಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.ಈ ವೇದಿಕೆಯಲ್ಲಿ ವಿವಿಧ ಧರ್ಮಗಳ ಮುಖಂಡರುಗಳು ಮಾತನಾಡಿ ‘ದ್ವೇಷ ಮತ್ತು ಅಸೂಯೆ ಇಲ್ಲದೆ ಜಾತಿ, ಮತ, ಧರ್ಮ,ಪಂಗಡ, ಭೇದವನ್ನು ಮರೆತು ಸಾಗಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಒಕ್ಕೊರೊಳಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಳ್ಯ ಶಾರದಾ ಕಾಲೇಜಿನ ಉಪನ್ಯಾಸಕರಾದ ಪ್ರಸನ್ನ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದ ಅಭಿವೃದ್ಧಿಗೆ ಪ್ರತಿಯೊಂದು ಧರ್ಮದ ಮಕ್ಕಳಲ್ಲಿ ವಿದ್ಯಾಭ್ಯಾಸವನ್ನು ಉತ್ತಮವಾಗಿ ನೀಡುವುದು ಕಡ್ಡಾಯವಾಗಿದೆ. ಒಬ್ಬ ವ್ಯಕ್ತಿ ಉತ್ತಮ ವಿದ್ಯೆಯನ್ನು ಪಡೆದರೆ ಆತ ತಾನು ಬೆಳೆದು ಉತ್ತಮ ಜೀವನವನ್ನು ರೂಪಿಸಿ ತಾನು ಶ್ರೀಮಂತನಾಗುವಾಗ ಸಮಾಜವು ಕೂಡ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಹೇಳಿದರು. ಸೌಹಾರ್ದತೆಯ ಬದುಕು ಸಮಾಜಕ್ಕೆ ಅತಿ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಿದ್ದ ಮಿತ್ತೂರು ಕೆಜಿಎನ್ ದಾರುಲ್ ಇರ್ಶಾದ್ ಸಂಸ್ಥೆಯ ಮುದರ್ರಿಸ್ ಮೊಹಮ್ಮದ್ ಹುಸೈನ್ ಅಹ್ಸನಿ ಅಲ್ ಮುಈನಿ ಮಾತನಾಡಿ ‘ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಮೂಡಿದ ದೇಶವಾಗಿದೆ. ಎಲ್ಲಾ ಜಾತಿ ಧರ್ಮಗಳು ಪರಸ್ಪರ ಸ್ನೇಹಮಯ ಜೀವನವನ್ನು ಸಾಗಿಸಿದರೆ ಸಮಾಜದಲ್ಲಿ ಯಾವುದೇ ರೀತಿಯ ಅಶಾಂತಿ,ಗೊಂದಲಕ್ಕೆ ಆಸ್ಪದ ವಾಗುವುದಿಲ್ಲ.ತಾನು ಜೀವಿಸುವ ಪರಿಸರದಲ್ಲಿ ಎಲ್ಲರನ್ನೂ ತಮ್ಮವರೆಂದು ಭಾವಿಸಿದಾಗ ಅವರಲ್ಲಿ ಸಹೋದರತಾ ಭಾವನೆಯಿಂದ ಕಂಡಾಗ ಎಲ್ಲಾ ಕೆಡುಕು ಭಾವನೆಗಳಿಗೆ ನಾಂದಿಯಾಗುತ್ತದೆ’ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ರಹೀಮ್ ಎಸ್ ಎಂ, ಆಲೆಟ್ಟಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕರುಣಾಕರ ಆಸ್ಪರೆ, ಆಲಟ್ಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುದರ್ಶನ ಪಾತಿಕಲ್ಲು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ಸೌಹಾರ್ದತೆಯ ಬದುಕಿನ ಬಗ್ಗೆ ಹಿತವಚನವನ್ನು ನೀಡಿದರು.
ವೇದಿಕೆಯಲ್ಲಿ ಸ್ಥಳೀಯ ಮಸೀದಿ ಖತೀಬರಾದ ಅಬ್ದುನ್ನಾಸಿರ್ ಸುಕೈಫಿ, ಮದರಸ ಪ್ರಾಂಶುಪಾಲ ಅಲ್ ಹಾಜ್ ಇಸ್ಮಾಹಿಲ್ ಸಕಾಫಿ, ಗಾಂಧಿನಗರ ಮದರಸ ಮುಖ್ಯ ಶಿಕ್ಷಕ ಇಬ್ರಾಹಿಂ ಸಕಾಫಿ ಪುಂಡೂರು, ಕುಂಭಕೋಡು ಮಸೀದಿ ಅಧ್ಯಕ್ಷ ಇಸ್ಮಾಹಿಲ್ ಸಅದಿ, ಗಾಂಧಿನಗರ ಕೆಪಿಎಸ್ ಶಾಲಾ ಶಿಕ್ಷಕ ಅರುಣ್ ಕುಮಾರ್, ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ, ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಕೊಯಿಂಗಾಜೆ, ಆಲಟ್ಟಿ ಗ್ರಾಮ ಪಂಚಾಯತ್ ಸದಸ್ಯ ಅಡ್ವಕೇಟ್ ಧರ್ಮಪಾಲ ಕೊಯಿಂಗಾಜೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಗೌಡ ಕಾರ್ತಡ್ಕ, ಫಾರೂಕ್ ಮದನಿ, ಮಹಮೂದ್ ಹನೀಫಿ, ಅಲ್ ಹಾಜ್ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಡಿಎಂ ಅಬ್ದುಲ್ಲಾ ಫೈಝಿ, ಸಿದ್ದೀಕ್ ಕಟ್ಟೆಕಾರ್, ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ನೂರಾರು ಮಂದಿ ನಿವಾಸಿಗಳು,ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸ್ಥಳೀಯ ಮಸೀದಿ ಆಡಳಿತ ಕಮಿಟಿಯ ಕಾನೂನು ಸಲಹೆಗಾರರಾದ ಅಡ್ವಕೇಟ್ ಮೂಸಾ ಕುಂಞಿ ಪೈಂಬೆಚಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್ ಬಿ ಎಸ್ ಪ್ರಧಾನ ಕಾರ್ಯದರ್ಶಿ ಟಿ ಎಂ ಸುಹೇಬ್ ವಂದಿಸಿದರು.