” ಸ್ಥಳೀಯ ಜನರ ವಿರೋಧದ ನಡುವೆಯೂ ಸುಳ್ಯ ನಗರದ ತ್ಯಾಜ್ಯವನ್ನು ಕಲ್ಚೆರ್ಪೆಗೆ ತಂದು ಸುರಿಯಲಾಗುತ್ತಿದ್ದು ಗಬ್ಬುನಾಥದಿಂದ ೪೦ಕ್ಕೂ ಹೆಚ್ಚಿನ ಮನೆಯವರು ಮೂಗು ಹಿಡಿದುಕೊಂಡೇ ಬದುಕುವಂತಾಗಿದೆ. ಆ ತ್ಯಾಜ್ಯವನ್ನು ಎರಡು ದಿನದಲ್ಲಿ ತೆರವುಗೊಳಿಸದಿದ್ದರೆ ನಾವು ಸುಳ್ಯ ನಗರ ಪಂಚಾಯತ್ ಎದುರು ತ್ಯಾಜ್ಯ ಸುರಿಯುತ್ತೇವೆ” ಎಂದು ಪರಿಸರ ಹೋರಾಟ ಸಮಿತಿ ಕಲ್ಚರ್ಪೆ ಎಚ್ಚರಿಸಿದೆ.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರಿಸರ ಹೋರಾಟ ಸಮಿತಿ ಪದಾಧಿಕಾರಿ ಅಶೋಕ್ ಪೀಚೆ, ‘’ಸುಳ್ಯ ನಗರದ ಕಸವನ್ನು ವಿಲೇವಾರಿ ಮಾಡಿ ಪೆರಾಜೆಯ ಕಲ್ಚರ್ಪೆ ಬಳಿ ತಂದು ಹಾಕುತ್ತಾರೆ. ಇದರಿಂದ ಸ್ಥಳೀಯವಾಗಿ ೪೦ ಮನೆಗಳಿದ್ದು ಅವರಿಗೆಲ್ಲರಿಗೂ ಗಬ್ಬುನಾಥದ ವಾಸನೆಯಿಂದ ಜೀವನ ಮಾಡಲಾಗದ ಸ್ಥಿತಿ ಇದೆ. ಇದಕ್ಕೆ ಬರ್ನಿಂಗ್ ಮೆಷಿನ್ ಕೂಡ ಇದ್ದು ಅದು ಕೂಡ ಸರಿ ಇಲ್ಲ. ಗಲೀಜು ನೀರು ಇದೀಗ ಪಯಸ್ವಿನಿ ನದಿಯನ್ನು ಕೂಡ ಸೇರುತ್ತಿದೆ. ಎರಡು ದಿನದೊಳಗೆ ತೆರವು ಮಾಡದಿದ್ದರೆ ನಗರ ಪಂಚಾಯತ್ ಎದುರು ನಾವೇ ತ್ಯಾಜ್ಯವನ್ನು ತಂದು ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದರು.
” ಕಳೆದ ೧೬ ವರ್ಷದಿಂದ ಕಸವನ್ನು ಅಲ್ಲಿ ಹಾಕಲಾಗುತ್ತಿದೆ. ಇದನ್ನು ತೆರವುಗೊಳಿಸುವುದರ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಆರಂಭದಲ್ಲಿ ಕಸವನ್ನು ಬರ್ನಿಂಗ್ ಮಾಡಲು ಮಿಷನ್ ತರಲಾಗಿತ್ತು. ಅದಕ್ಕೆ ಅಷ್ಟು ಕ್ಯಪಾಸಿಟಿ ಇಲ್ಲ ಅಂತ ಮತ್ತೊಂದು ಮೆಷಿನ್ ತರಲಾಯಿತು. ಅದು ಕೂಡ ತಾಂತ್ರಿಕ ಅಡಚಣೆಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿಲ್ಲ. ಇದೀಗ ಕಸದ ರಾಶಿಯಿಂದ ಗಬ್ಬು ನಾರುತ್ತಿದೆ ಎಂದು ಪರಿಸರ ಹೋರಾಟ ಸಮಿತಿ ಕಲ್ಚರ್ಪೆ ಅಧ್ಯಕ್ಷ ಯೂಸುಫ್ ಅಂಜಿಕಾರ್ ತಿಳಿಸಿದರು.
ಪರಿಸರ ಹೋರಾಟ ಸಮಿತಿ ಪದಾಧಿಕಾರಿಗಳಾದ ಕೆ. ಗೋಕುಲದಾಸ್ , ತವೀದ್ ಕಲ್ಚರ್ಪೆ, ವೆಂಕಟೇಶ್ ಉಪಸ್ಥಿತರಿದ್ದರು.