ನಿಯತ್ತಿಗೆ ಹೆಸರಾದ ಶ್ವಾನದ ಬಗ್ಗೆ ನಿಮಗೆಷ್ಟು ಗೊತ್ತು…?
ನಾಯಿಗಳ ತಳಿಯ ಬಗ್ಗೆ ತಿಳಿಯುವ ಆಸಕ್ತಿ ನಿಮಗಿದೆಯಾ…?
ಇಂದು ಶ್ವಾನ ದಿನ. ಪ್ರತಿ ವರ್ಷ ಆಗಸ್ಟ್ 26 ರಂದು ವಿಶ್ವದಾದ್ಯಂತ ವಿಶ್ವ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ನಾಯಿಗೂ ಒಂದು ಕಾಲ ಬರುತ್ತೆ ಎನ್ನುವ ಮಾತಿದೆ. ಅದರಂತೆ ಪ್ರತಿ ವರ್ಷ ನಾಯಿ ದಿನವನ್ನ ಆಚರಣೆ ಮಾಡುವುದಕ್ಕೆ ಒಂದು ದಿನವನ್ನ ಮೀಸಲಿಡಲಾಗಿದೆ. ಇದು ನಂಬಲು ಅಸಾಧ್ಯವಾದರು, ಇದನ್ನು ನೀವು ನಂಬಲೇಬೇಕು. ಹೌದು ಪ್ರತಿ ವರ್ಷ ಆಗಸ್ಟ್ 26 ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನ ಆಚರಣೆ ಮಾಡಲಾಗುತ್ತದೆ.
ಭೂಮಿಯ ಮೇಲೆ ಉಂಡ ಮನೆಗೆ ಎಂದಿಗೂ ದ್ರೋಹ ಬಗೆಯದ ಪ್ರಾಣಿ ಎಂದರೆ ಅದು ನಾಯಿ. ಅದಕ್ಕಾಗಿಯೇ ನಾಯಿಗೆ ನಿಯತ್ತು ಜಾಸ್ತಿ ಎಂದು ಹೇಳಲಾಗುತ್ತದೆ. ಮನುಷ್ಯ ಕೂಡಾ ಇದನ್ನು ಒಪ್ಪಿಕೊಂಡಿದ್ದು, ಮಾತನಾಡುವಾಗ ಸ್ವಾಭಾವಿಕವಾಗಿಯೇ ನಾನು ನಾಯಿಗಿಂತ ನಿಯತ್ತಿನವನು ಎಂದು ಬಳಸುತ್ತಾರೆ. ಇದೇ ಸಾಕಲ್ಲವೇ ನಾಯಿಗೆ ನಿಯತ್ತು ಜಾಸ್ತಿ ಇದೆ ಅಂತ. ಶ್ವಾನ ಅದು ತಾನು ಸಾಕಿದವರ ಮನೆಗೆ ಎಂದಿಗೂ ಎರಡು ಬಗೆಯದೇ, ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ನಾಯಿ ಮೇಲೆ ಎಲ್ಲರಿಗೂ ಪ್ರೀತಿ ಶುರುವಾಗಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಈಗ ಎಲ್ಲರ ಮನೆಯಲ್ಲೂ ಎರಡು, ಮೂರು ನಾಯಿಗಳನ್ನ ಸಾಕಲಾಗುತ್ತಿದೆ. ಅದರಲ್ಲೂ ಕನ್ನಡದ ಚಾರ್ಲಿ 777 ಸಿನಿಮಾ, ಮಲಯಾಳಂನ ನೇಮಾರ್ ಸಿನಿಮಾ ಮಾಡಿದ ಮೊಡಿ ಅಷ್ಟಿಷ್ಟಲ್ಲ. ಈ ಸಿನಿಮಾದಲ್ಲಿ ನಾಯಿ ಪಾತ್ರವನ್ನು ಮೆಚ್ಚಿಕೊಂಡಿರುವ ಜನರು, ನಮ್ಮ ಮನೆಯಲ್ಲೂ ಇಂತಹ ನಾಯಿ ಇರಬೇಕು ಎಂದುಕೊಂಡು, ತಮ್ಮ ಮನೆಗೆ ನಾಯಿ ತಂದವರ ಸಂಖ್ಯೆ ಜಾಸ್ತಿಯಾಗಿದೆ.
ಈ ಸಿನಿಮಾದಲ್ಲಿ ನಾಯಿಯ ನಿಯತ್ತು, ಅದರ ಮುಗ್ದತೆ, ಅದರ ತುಂಟಾಟ ಹೀಗೆ ಹಲವು ವಿಷಯಗಳನ್ನು ನೋಡಿದ ಮೇಲೆ, ಎಲ್ಲರಲ್ಲೂ ನಾವು ನಾಯಿಯನ್ನ ಸಾಕಬೇಕು, ನಾಯಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವ ಭಾವನೆ ಹುಟ್ಟಿದ್ದಂತು ಸುಳ್ಳಲ್ಲ. ಈ ದಿನದ ಆಚರಣೆಯ ಉದ್ದೇಶವು ಕೂಡಾ ಅದೇ ಆಗಿದೆ. ಪ್ರಾಣಿಗಳನ್ನು ರಕ್ಷಿಸುವುದು, ಬೀದಿ ನಾಯಿಗಳ ರಕ್ಷಣೆ, ಬೀದಿ ನಾಯಿಗಳನ್ನು ದತ್ತು ಪಡೆಯುವುದನ್ನು ಪ್ರೋತ್ಸಾಹ ನೀಡುವ ಉದ್ದೇಶವಾಗಿದೆ.
ಅಂತರಾಷ್ಟ್ರೀಯ ಶ್ವಾನ ದಿನವನ್ನು 2004 ರಲ್ಲಿ ಮೊದಲ ಬಾರಿಗೆ ಕಾಲ್ಲಿನ್ ಪೈಗೆ ಎನ್ನುವವರು ಆರಂಭಿಸಿದರು. ಪ್ರಾಣಿ ಹಿತರಕ್ಷಣಾ ಅಡ್ವೋಕೆಟ್ ಆಗಿದ್ದ ಇವರು, ಬೀದಿ ನಾಯಿಗಳ ರಕ್ಷಣೆ ಮತ್ತು ಅವುಗಳನ್ನು ದತ್ತು ಪಡೆಯುವ ಉದ್ದೇಶದಿಂದ ಈ ದಿನವನ್ನು ಆರಂಭಿಸಿದರು. ಬೀದಿ ನಾಯಿಗಳನ್ನು ದತ್ತು ಪಡೆಯುವ ಉದ್ದೇಶಕ್ಕಾಗಿಯೇ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಬೆಕ್ಕು ದಿನ, ರಾಷ್ಟ್ರೀಯ ನಾಯಿಮರಿ ದಿನ, ರಾಷ್ಟ್ರೀಯ ವನ್ಯಜೀವಿ ದಿನ ಆಚರಣೆಯನ್ನು ಆರಂಭಿಸಿದವರು ಇವರೆ ಕಾಲ್ಲಿನ್ ಪೈಗೆ. ಈಗ ಅಂತರರಾಷ್ಟ್ರೀಯ ನಾಯಿ ದಿನವು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದು, ಅನೇಕ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಸರಿಯಾದ ಊಟ, ಆರೈಕೆ ಇಲ್ಲದೆ ದಿನವು ಸಾವಿರಾರು ಬೀದಿ ನಾಯಿಗಳು ಸಾವನ್ನಪ್ಪುತ್ತಿವೆ. ಈ ನಾಯಿಗಳಿಗೆ ಸರಿಯಾದ ರಕ್ಷಣೆ ನೀಡುವುದು, ಅವುಗಳಿಗೆ ಉತ್ತಮವಾದ ಊಟವನ್ನು ನೀಡುವುದು, ಆರೈಕೆ ಮಾಡುವುದು ಮತ್ತು ಬೀದಿ ನಾಯಿಗಳನ್ನು ದತ್ತು ಪಡೆದು ಅವುಗಳನ್ನು ಸಾಕುವುದು ಈ ದಿನ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಇತ್ತೀಚೆಗೆ ತಮ್ಮ ಬ್ಯುಸಿ ಲೈಫ್ನಲ್ಲಿ ಅನೇಕರು ತಮ್ಮ ತಂದೆ, ತಾಯಿ ಹಾಗೂ ತಮ್ಮ ಮಕ್ಕಳನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಆಫೀಸ್ಗಳಿಗೆ ತೆರಳುತ್ತಾರೆ. ಅಂತವರು ಮನೆಯಲ್ಲಿ ಒಂದು ನಾಯಿಯನ್ನು ಸಾಕಿದರೆ ಒಳ್ಳೆಯದು. ಮನುಷ್ಯನನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಸ್ನೇಹಿತ ಅಂದರೆ ಅದು ನಾಯಿ. ಮನೆಯಲ್ಲಿ ಒಂದು ನಾಯಿಯನ್ನು ಸಾಕಿದರೆ ತಂದೆ, ತಾಯಿ ಹಾಗೂ ಮಕ್ಕಳಿಗೆ ಒಂಟಿತನ ಕಾಡುವುದಿಲ್ಲ. ಅವರು ಖುಷಿಯಿಂದ ಇರಲು ಸಹಾಯವಾಗುತ್ತದೆ. ಇದರ ಜೊತೆಗೆ ಮನೆಗೆ ಕಾವಲು ಸಹ ಇರುತ್ತದೆ. ನೀವು ಕೂಡಾ ಆಫೀಸ್ ನಿಂದ ಬಂದ ಮೇಲೆ ನಿಮ್ಮ ನೆಚ್ಚಿನ ನಾಯಿ ಜೊತೆ ಕೆಲ ಕಾಲ ಸಮಯ ಕಳೆಯುವುದರಿಂದ ನಿಮ್ಮ ಮಾನಸಿಕ ಒತ್ತಡವು ಸಹ ಕಡಿಮೆಯಾಗುತ್ತದೆ.
ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದೆ ಬೇಟೆಗಾರನಿಂದ ಪಳಗಿದ ಮೊದಲ ಸಸ್ತನಿ ನಾಯಿ. 450ಕ್ಕೂ ಹೆಚ್ಚು ವಿಶ್ವದಾದ್ಯಂತ ಗುರುತಿಸಲ್ಪಟ್ಟ ಕೋರೆಹಲ್ಲು ತಳಿಗಳನ್ನು ಹೊಂದಿರುವ ನಾಯಿಗಳು ಭೂಮಿಯ ಮೇಲೆ ಅತ್ಯಂತ ಹೆಚ್ಚು ಪ್ರಾಣಿಗಳಿವೆ.
ಒಟ್ಟಿನಲ್ಲಿ ಇಂದು ನಿಯತ್ತಿಗೆ ಹೆಸರಾದ ಶ್ವಾನದ ದಿನವಾಗಿದೆ.