ಗ್ರಾಮದ ಪ್ರತೀ ಮನೆಯವರು ಯೋಜನೆಯ ಫಲಾನುಭವಿಗಳಾಗಿ : ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಡಿ.
ಗ್ರಾಮೀಣ ಪ್ರದೇಶದ ಮಹಿಳೆಯರನ್ನು ರಾಜ್ಯ ಸರ್ಕಾರ ಗುರುತಿಸಿದೆ: ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಎ.ಎಲ್.
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಹಾಗೂ ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರು ಜಂಟಿಯಾಗಿ ದೀಪಬೆಳಗಿಸಿ, ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಾತನಾಡಿದ ಅವರು ಗ್ರಾಮದ ಪ್ರತೀ ಮನೆಯವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರು ಮಾತನಾಡಿ, ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಗುರುತಿಸಿ, ಪ್ರತೀ ತಿಂಗಳು ಎರಡು ಸಾವಿರ ರೂಗಳನ್ನು ಮನೆಯ ಯಜಮಾನಿಯ ಖಾತೆಗೆ ಜಮೆ ಮಾಡುತ್ತದೆ. ಆದ್ದರಿಂದ ಗ್ರಾಮದ ಪ್ರತೀ ಮನೆಯವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಸದಸ್ಯರಾದ ಎನ್.ಎಂ. ಸತೀಶ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಮುಜೀಬ್ ಪೈಚಾರು, ಅಬ್ದುಲ್ ಮಜೀದ್ ನಡುವಡ್ಕ, ಈಶ್ವರ ನಾಯ್ಕ ಸೋಣಂಗೇರಿ, ಶ್ರೀಮತಿ ಅಂಬಿಕಾ ಕುಕ್ಕಂದೂರು ಉಪಸ್ಥಿತರಿದ್ದರು. ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ.ಪಿ. ಕಾರ್ಯಕ್ರಮ ನಿರೂಪಿಸಿದರು.
ಗ್ರಾಮ ಪಂಚಾಯತಿ ಸಭಾಭವನದಲ್ಲಿ ಗೃಹಲಕ್ಷ್ಮಿ ಯೋಜನೆಯ ಸುಮಾರು ಮುನ್ನೂರಕ್ಕೂ ಅಧಿಕ ಫಲಾನುಭವಿ ಮಹಿಳೆಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಸುಂದರ ಮುಪ್ಪೇರ್ಯ ಹಾಗೂ ಸಿಬ್ಬಂದಿಗಳು ಸಹಕರಿಸಿದರು.