ಅಸ್ಪೃಶ್ಯತೆ ವಿರುದ್ಧ ಹೋರಾಡಲು ಜೀವನ ಮುಡಿಪಾಗಿಟ್ಟ ಬ್ರಹ್ಮಶ್ರೀ ನಾರಾಯಣ ಗುರು
✍️ ಬೃಂದಾ ಪೂಜಾರಿ ಮುಕ್ಕೂರು
ವಿಶ್ವವು ಜಾತೀಯತೆ, ಅಸ್ಪಶ್ಯತೆ ಎಂಬ ಅನಾಗರಿಕ ಸಮಾಜ ಬೆಳೆಯುತ್ತಿರುವ ಸಂದರ್ಭದಲ್ಲಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ದೇಶದೆಲ್ಲೆಡೆ ಬಿತ್ತರಿಸಿದರು. ಶ್ರೀ ಸಂತ ನಾರಾಯಣ ಸ್ವಾಮಿ, ಜಾತಿ ಮತ ಪಂಥಗಳು ಅದೆಷ್ಟೇ ದ್ವೇಷದ ಗೋಡೆಗಳನ್ನು ಎಬ್ಬಿಸಿದರೂ ನಾವೆಲ್ಲರೂ ಸಹೋದರ ಸಮಾನರು ಎಂಬುದೇ ಅತ್ರಂತಿಕ ಸತ್ಯ ಎಂದು ಎಲ್ಲೆಡೆಯೂ ಸಾರಿದರು. ಈ ಮೂಲಕ ಗುರುಸ್ವಾಮಿ ಒಂದು ಧರ್ಮದ, ಒಂದು ಜಾತಿಯ ಗುರುವಾಗಿರಲಿಲ್ಲ, ಬದಲಿಗೆ ಅವರು ಬಡತನದ ಒಳಗಿರುವ ಸತ್ಯವಾಗಿದ್ದರು.
ಶತಮಾನಗಳ ಹಿಂದೆ
ಹದಿನೆಂಟು ಹತ್ತೊಂಭತ್ತನೆ ಶತಮಾನದಲ್ಲಿ ಭಾರತದಂತಹ ಪುಣ್ಯ ಭೂಮಿಯು ಅಸ್ಪಶ್ಯತೆ, ಮೂಢನಂಬಿಕೆ, ಜಾತೀಯತೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯ ವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಠಪದ್ಧತಿ ನಮ್ಮ ಆಚಾರ-ವಿಚಾರಕ್ಕೆ ಮುಳ್ಳಾದ ಸಂದರ್ಭವಾಗಿತ್ತು. ಅಂತಹ ಸಮಯದಲ್ಲಿ ಅನೇಕ ಮಹಾ ಪುರುಷರು ಹೋರಾಟಕ್ಕೆ ಇಳಿದಿದ್ದಾರೆ. ಅಂತವರಲ್ಲಿ ಶ್ರೀ ನಾರಾಯಣ ಗುರು ಸ್ವಾಮಿ ಓರ್ವರು, ಸಮಾಜದಲ್ಲಿದ್ದ ದುಷ್ಟ ಪದ್ಧತಿಗಳನ್ನು ಹೊಡೆದೋಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಸಮಾಜದ ಸುಧಾರಣೆಯನ್ನು ತರಲು ಪ್ರಯತ್ನಿಸಿ, ನಮ್ಮ ಧರ್ಮ ಸಂಸ್ಕೃತಿಯ ಕುರಿತು ತಿಳುವಳಿಕೆ ಮೂಡಿಸಿದರು.
ಅಸ್ಪಶ್ಯತೆಯ ವಿರುದ್ಧ
ರಾಜ್ಯದಲ್ಲಿ ಮದನ್ ಆಸನ್ ಮತ್ತು ಕುಟ್ಟಿ ಅಮ್ಮಾಳ್ ಎಂಬ ದಪಂತಿಗಳಿಗೆ ಜನಿಸಿದವರೇ ಗುರು ಸ್ವಾಮಿ, ಗುರುಗಳು ಜನಿಸಿದ ಸಂದರ್ಭದಲ್ಲಿ ಜಾತಿ, ಮತ, ಬೇದಗಳ ನಡುವೆ ಅಸ್ಪಶ್ಯತೆ ಹೆಚ್ಚಾಗಿದ್ದ ಕಾಲವದು, ಅಂತಹ ಕೀಳು ಪದ್ಧತಿಗೆ ರೋಸಿಹೋಗಿ ಸಮಾಜದಲ್ಲಿ ಬೇರುರಿದ್ದ ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕೆ ಇಳಿದರು. ನಾರಾಯಣ ಗುರು ಪ್ರಮುಖವಾಗಿ ಪ್ರತಿಪಾದಿಸಿದ ತತ್ವ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ, ಜಾತಿ ಮುಖ್ಯವಲ್ಲ ಬದಲಿಗೆ ನೀತಿ ಮುಖ್ಯ. ಕೇರಳದಲ್ಲಿ ಜಾತೀಯತೆ ಎಂಬ ಭೂತ ಹೆಮ್ಮರವಾಗಿ ಬೆಳೆಯುತ್ತಿತ್ತು. ಕೆಳಜಾತಿಯಲ್ಲಿ ಜನಿಸಿದ ಜನರು ಮೇಲ್ವಾರ್ಗದವರ ತುಳಿತಕ್ಕೆ ಒಳಗಾಗಿದ್ದರು. ದೇವಸ್ಥಾನಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಮೇಲ್ವರ್ಗದವರು ನಡೆದು ಬರುವ ದಾರಿಯಿಂದ ದೂರವಿರಬೇಕಾಯಿತು.
ಹೀಗೆ ತೀಯಾ (ಈಳವ, ಬಿಲ್ಲವ) ಸಮಾಜದವರನ್ನು ನಲುಗಿಸಿದ ಸಮಸ್ಯೆಗಳನ್ನು ಗುರು ಸ್ವಾಮಿಯವರು ಮಟ್ಟ ಹಾಕಲು ಆಂದೋಲನವನ್ನು ಮಾಡಿದರು. ಧಾರ್ಮಿಕತೆಯ ಅನ್ವೇಷಣೆಯನ್ನು ಮಾಡುತ್ತ ಅನೇಕ ಸ್ಥಳಗಳನ್ನು ಸಂಚರಿಸಿದರು. ದೇವಾಲಯಗಳಿಗೆ ಕೆಲ ಜಾತಿಯ ವರ್ಗದವರಿಗೆ ಪ್ರವೇಶವಿರದ ಸಂದರ್ಭದಲ್ಲಿ
1888ರಲ್ಲಿ ಅರವಿಪುರದಲ್ಲಿ ಮೊದಲ ಲಿಂಗ ಪ್ರತಿಷ್ಠಾಪಿಸಿದರು. ಇದರಿಂದ ದೇವಾಲಯದ ಪ್ರವೇಶ ಪಡೆಯುವಂತಾಯಿತು.
1921ರಲ್ಲಿ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಮಿಶ್ರ ಭೋಜನ ಕಾರ್ಯಕ್ರಮ ನಡೆಸಿದರು. ಇದರಿಂದ ವೀರ ಸಂತನೆಂಬ ಹೆಸರಿಂದ ಪ್ರಮುಖರಾದರು. ಧರ್ಮಗಳ ಜಾಗೃತಿಯ ಜೊತೆಗೆ ಸಮಾಜದ ಸಂಘಟನೆಗೆ ವಿಶೇಷ ಒತ್ತು ನೀಡಿದರು. ವಿಶ್ವಕವಿ ರವಿಂದ್ರನಾಥ ಹಾಗೂ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ ಎಂಬ ಮಾತನ್ನು ಗುರುಗಳನ್ನು ಭೇಟಿಯಾದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಪ್ರೇರಣಿಯ ನುಡಿಗಳನ್ನಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅನೇಕ ಸಮಾಜ ಸುಧಾರಣ ಮನೋಭಾವಿಗಳು ಬ್ರಹ್ಮಶ್ರೀ ಗಳಿಂದ ಪ್ರಭಾವಿತರಾಗಿದ್ದಾರೆ. ಇಂದಿನ ದಿನಗಳಲ್ಲಿ ಸಮಾಜ ಸಾಕಷ್ಟು ಜಾತೀಯತೆ, ಅಸ್ಪಶ್ಯತೆ ಹಾಗೂ ಅನಿಷ್ಟ ಪದ್ಧತಿಗಳಲ್ಲಿ ಸುಧಾರಣೆಯಾಗಿದೆ ಎಂದರೆ ಅದರಲ್ಲಿ ಗುರು ನಾರಾಯಣರ ಮಾತ್ರ ಕೂಡ ಮಹತ್ವವಾದದ್ದು ಎಂದರೆ ತಪ್ಪಿಲ್ಲ.
ಇಂದು ಜನ್ಮದಿನಾಚರಣೆ
ಗುರುಜೀ 1854ರ ಸೆಪ್ಟೆಂಬರ್ 18 ರಂದು ಕೇರಳದ ಓಣಂ ಹಬ್ಬದ ಮೂರನೇಯ ಹುಣ್ಣಿಮೆಯ ಶುಭ ದಿನದಂದು ಹುಟ್ಟಿದರು. ಪ್ರತಿ ವರ್ಷವು ಇವರ ಹುಟ್ಟುಹಬ್ಬವನ್ನು ಶತಭಿಷೆ ನಕ್ಷತ್ರದ ಬಂದ ದಿನದಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಾಗಿ ಆಚರಿಸಲಾಗುತ್ತಿದೆ. ಇಂದು ಗುರುಗಳ 169ನೇ ಜಯಂತಿಯನ್ನು ಸಮಾಜದ ಬಾಂಧವರು ಒಗ್ಗೂಡಿ ಆಚರಿಸುತ್ತ, ಅವರ ಆದರ್ಶ ತತ್ವಗಳನ್ನು ಇಂದಿನ ಯುವಜನತೆಗೆ ಅರಿವು ಮೂಡಿಸುತ್ತ ಬಂದಿರುವುದು ಸಂತಸದಾಯಕ ಸಂಗತಿಯೇ ಸರಿ.