ಸೌಜನ್ಯ ಹತ್ಯೆಗೆ ನ್ಯಾಯ ಕೋರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ

0


ಸೌಜನ್ಯ ಒಂದು ಶಕ್ತಿ ; ಈ ಬಾರಿ ನ್ಯಾಯ ಸಿಕ್ಕೇ ಸಿಗುತ್ತದೆ


ನಮ್ಮ ಹೋರಾಟದಲ್ಲಿ ಸ್ವಾರ್ಥವಿಲ್ಲ,ರಾಜಕೀಯವಿಲ್ಲ


ನನ್ನ ಬಾಯಿ ಮುಚ್ಚಲು ಯಾರಿಂದಲೂ ಸಾಧ್ಯವಿಲ್ಲ


ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ

ಸೌಜನ್ಯ ಹತ್ಯೆ ಪ್ರಕರಣಕ್ಕೆ ನ್ಯಾಯಒದಗಿಸಬೇಕು ಮತ್ತು ಪ್ರಕರಣದ ಮರು ತನಿಖೆ ಮಾಡಬೇಕೆಂದು ಒತ್ತಾಯಿಸಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು , ಹಾವಿನ ದ್ವೇಷ ೧೨ ವರ್ಷ ಇರ್ತದೆ. ಸೌಜನ್ಯ ಪ್ರಕರಣಕ್ಕೂ ೧೨ ನೇ ವರ್ಷ ಇನ್ನು ಮೂರೇ ತಿಂಗಳಲ್ಲಿ ತುಂಬಲಿದೆ. ಕುಕ್ಕೆ ಸುಬ್ರಹ್ಮಣ್ಯ ನಾಗನ ಕ್ಷೇತ್ರದಲ್ಲಿ ನಾವೆಲ್ಲಾ ಇದ್ದು ಪ್ರಾರ್ಥನೆ ಮಾಡಿದ್ದೇವೆ. ಈ ಬಾರಿ ನ್ಯಾಯ ಸಿಗಲಿದೆ. ಆ ದಿನ ದೂರ ಇಲ್ಲ ಎಂದರು.

ಸೌಜನ್ಯಳಿಂದಾಗಿ ಲೋಕದಲ್ಲಿ ಧರ್ಮ ಸ್ಥಾಪನೆಯಾಗಬೇಕಾದ ಕಾಲ ಬಂದಿದೆ. ಸಮಾಜದಲ್ಲಿ ಕಟುಕರಿಲ್ಲ, ಆದರೆ ತಿಳುವಳಿಕೆ ಕೊರತೆಯಿದೆ. ಅತ್ಯಾಚಾರವಾಗಿ ಈ ಭೂಮಿಗೆ ರಕ್ತ ಬಿದ್ದರೆ ಅದು ನಮಗೆ ಶಾಪವಾಗಲಿದೆ ಎಂದರು. ನಮ್ಮ ರಾಜಕೀಯ ವ್ಯಕ್ತಿಗಳು ಪಾಪಿಗಳಾಗಿದ್ದಾರೆ. ಇಲ್ಲದಿದ್ದರೆ ಇದಕ್ಕೆ ನ್ಯಾಯ ಯಾವಾಗಲೋ ಸಿಕ್ತಿತ್ತಿತ್ತು. ಮಾಧ್ಯಮದ, ಪೋಲಿಸರ ಬಾಯಿ ಮುಚ್ಚಿಸುವ ಕೆಲಸ ನಡೆದಿದೆ. ಆದರೆ ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾದ್ಯವಿಲ್ಲ. ನಮಗೆ ಕಲ್ಲಾಗಿ ಕೂತಿರುವ ಮಂಜುನಾಥ ಹಾಗೂ ಅಣ್ಣಪ್ಪ ಸಾಕು ಅವರ ನೈಜ ನ್ಯಾಯ ಸಾಕು ಎಂದವರು ಹೇಳಿದರು.

ಸೌಜನ್ಯ ಳ ತಾಯಿ ಕುಸುಮಾವತಿ ಮಾತನಾಡಿ ಮಧ್ಯಾಹ್ನ ಊಟಕ್ಕೆ ಮನೆಗೆ ಬರ್ತೇನೆ ಎಂದು ಹೇಳಿದವಳು ಮತ್ತೆ ಮನೆಗೆ ಬರಲಿಲ್ಲ. ಅತ್ಯಾಚಾರಿಗಳು ಅತ್ಯಾಚಾರ ಮಾಡಿ ಕೊಂದು ಬಿಸಾಕಿದ್ದಾರೆ. ಮರುದಿನ ದೇಹ ಸಿಕ್ಕಿದೆ. ನನ್ನ ಮಗಳಂತೆ ಅತ್ಯಾಚಾರಕ್ಕೊಳಗಾದ ಎಲ್ಲರಿಗೂ ನ್ಯಾಯ ಸಿಗಲಿ. ಯಾರೂ ಕೈ ಬಿಡಬೇಡಿ ನ್ಯಾಯ ತೆಗೆಸಿಕೊಡಿ ಎಂದು ಕೇಳಿಕೊಂಡರು.

ಸಾಮಾಜಿಕ ಹೋರಾಟಗಾರ ಲಕ್ಷ್ಮೀಶ ಗಬಲಡ್ಕ ಮಾತನಾಡಿದರು.
ಕುಮಾರಧಾರ ಬಳಿಯಿಂದ ಮೌನ ಮೆರವಣಿಗೆ ಆರಂಭಗೊಂಡಿದ್ದು ತಿಮರೋಡಿಯವರು ತೆಂಗಿನಕಾಯಿ ಕಾಯಿ ಒಡೆದು ಚಾಲನೆ ನೀಡಿದರು.

ಮೌನ ಮೆರವಣಿಗೆಯಲ್ಲಿ ಸಾವಿರಕ್ಕೂ ಮಿಕ್ಕಿ ಜನ ಪಾಲ್ಗೊಂಡರು. ಮೆರವಣಿಗೆಯಲ್ಲಿ ಕಾಶಿಕಟ್ಟೆ ಬಳಿಯಲ್ಲೂ ತೆಂಗಿನಕಾಯಿ ಒಡೆಯಲಾಯಿತು. ರಥಬೀದಿ ಬಳಿ ಸಭಾಕಾರ್ಯಕ್ರಮ ನಡೆದಿದ್ದು ತಿಮರೋಡಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೋಪಾಲ ಎಣ್ಣೆಮಜಲು ಸ್ವಾಗತಿಸಿದರು, ದಿನೇಶ್ ಸಂಪ್ಯಾಡಿ ವಂದಿಸಿದರು. ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರ್ವಹಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ
ಸಭೆ ಬಳಿಕ ರಾಜಗೋಪುರದ ಎದುರು ಭಾಗ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಪ್ರಭಾಕರ ಪಡ್ರೆ ಪ್ರಾರ್ಥನೆ ಓದಿದರು. ಬಳಿಕ ದೇವಸ್ಥಾನಕ್ಕೆ ಸಂಘಟಕರು, ಮಹೇಶ್ ತಿಮ್ಮರೋಡಿ ಹಾಗೂ ಕುಸುಮಾವತಿ ತೆರಳಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು.


ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಜೆಸಿಐ ಸುಬ್ರಹ್ಮಣ್ಯ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ, ಕುಕ್ಕೇ ಶ್ರೀ ಆಟೋ ಚಾಲಕ ಮಾಲಕ ಸಂಘ, ಕುಕ್ಕೇ ಶ್ರೀ ಟ್ಯಾಕ್ಸಿ ಚಾಲಕ ಮಾಲಕ ಸಂಘ, ಸಂಜೀವಿನಿ ಒಕ್ಕೂಟ,ರವಿಕಕ್ಕೆಪದವು ಸಮಾಜ ಸೇವ ಟ್ರಸ್ಟ್, ಸುಬ್ರಹ್ಮಣ್ಯ ವರ್ತಕರ ಸಂಘ, ಗೌಡ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯರು ಭಾಗವಹಿಸಿದ್ದರು.