ಮೇನಾಲದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಿನ್ನಲೆ

0


ತಹಶೀಲ್ದಾರ್ ಹಾಗೂ ಸುಳ್ಯ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಶಾಂತಿ ಸಭೆ

ಮೇನಾಲದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಣೆಗೊಳ್ಳುವ ಹಿನ್ನಲೆಯಲ್ಲಿ ಸುಳ್ಯ ತಹಶೀಲ್ದಾರ್ ರವರ ನೇತೃತ್ವದಲ್ಲಿ ಸ್ಥಳೀಯ ಜಮಾಅತ್ ಕಮಿಟಿಯ ಮುಖಂಡರ ಶಾಂತಿ ಸಭೆ ಇಂದು ಸುಳ್ಯ ತಹಶೀಲ್ದಾರ್ ಕಚೇರಿ ಹಾಗೂ ಸುಳ್ಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ವೃತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಭೆಯಲ್ಲಿ ಅಜ್ಜಾವರ ಮೇನಾಲ ಜಮಾಅತ್ ಕಮಿಟಿಯ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು, ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್‌ರವರು, ಮೇನಾಲ ಮಸೀದಿ ಮುಂಭಾಗದಲ್ಲಿರುವ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವನ್ನು ಸ್ಥಳೀಯರು ಆಯೋಜಿಸಿದ್ದು ಈ ಕಾರ್ಯಕ್ರಮ ನಡೆಯಲು ಸ್ಥಳೀಯ ಎಲ್ಲಾ ಮುಸ್ಲಿಂ ಬಾಂಧವರು ಶಾಂತಿಯನ್ನು ಕಾಪಾಡಿಕೊಂಡು ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ ಜಾಗೃತಿ ವಹಿಸಿಕೊಳ್ಳಬೇಕೆಂದು ಹೇಳಿದರು.


ಇದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಜಮಹತ್ ಕಮಿಟಿಯ ಮುಖಂಡರು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ನಮ್ಮ ಕಡೆಯಿಂದ ಯಾವುದೇ ರೀತಿಯ ಸಮಸ್ಯೆಗಳು ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಅಲ್ಲದೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತೇವೆ. ನಮ್ಮ ಕಡೆಯಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಾವು ಜಾಗೃತಿ ವಹಿಸುತ್ತೇವೆ ಎಂದು ಹೇಳಿದರು. ಅಲ್ಲದೆ ಮುಂದಿನ ದಿನಗಳಲ್ಲಿ ನಮ್ಮ ಊರೂಸ್ ಕಾರ್ಯಕ್ರಮಕ್ಕೆ ಇದೇ ರೀತಿಯ ಶಾಂತಿಯುತ ವಾತಾವರಣವನ್ನು ನಮಗೆ ಅವರಿಂದ ಸಿಗಬೇಕಾಗಿದೆ. ಆ ಸಮಯದಲ್ಲಿ ಅವರು ಕೂಡ ನಮ್ಮೊಂದಿಗೆ ಸೌಹಾರ್ದತೆಯಿಂದ ನಮ್ಮ ಕಾರ್ಯಕ್ರಮ ಯಶಸ್ವಿಯಾಗಲು ಅವರ ಸಹಕಾರವೂ ಬೇಕಾಗಿದೆ ಎಂದು ಹೇಳಿದರು.

ಬಳಿಕ ಜಮಾಅತ್ ಕಮಿಟಿಯ ಮುಖಂಡರನ್ನು ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರು ಅವರನ್ನು ತಮ್ಮ ಕಚೇರಿಗೆ ಕರೆಸಿ ಅಲ್ಲಿಯೂ ಕೂಡ ಶಾಂತಿ ಸಭೆ ನಡೆಸಿದರು.
ಮುಸ್ಲಿಂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ವೃತ ನಿರೀಕ್ಷಕರು ’ ಮೇನಾಲದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಶಾಂತಿಯ ವಾತಾವರಣ ಉಂಟಾಗದಂತೆ ತಾವೆಲ್ಲರೂ ನೋಡಿಕೊಳ್ಳಬೇಕಾಗಿದೆ. ಯಾವುದೇ ಕಾರಣಕ್ಕೂ ಆ ಪ್ರದೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಮುಖಂಡರು ನಮ್ಮಿಂದ ಯಾವುದೇ ರೀತಿಯ ತೊಂದರೆ ಬಾರದಂತೆ ನಾವು ಶಾಂತಿಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಕೋಶಾಧಿಕಾರಿ ಶರೀಫ್ ರಿಲಾಕ್ಸ್, ಸದಸ್ಯರಾದ ಹಮೀದ್, ಸಿದ್ದೀಕ್ ರೆಹ್ಮಾನಿಯ, ಅಬ್ದುಲ್ಲ ಜಿ, ಸ್ಥಳೀಯರಾದ ಶಾಫಿ ಮಡಿಕೇರಿ, ಮುಸ್ತಫ ಬೇಲ್ಯ ಮೊದಲಾದವರು ಉಪಸ್ಥಿತರಿದ್ದರು .