21 ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ ಪ್ರದಾನ – ಶೈಕ್ಷಣಿಕ ಸಾಧನೆಗೆ ಪುರಸ್ಕಾರ
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವದ ಅಂಗವಾಗಿ ಸೆ.5 ರಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸುಳ್ಯದ ಪರಿವಾರಕಾನ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ.
ಈ ಕುರಿತು ಸೆ.2 ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ. ರಮೇಶ್ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ದ.ಕ. ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಇದರ ಆಶ್ರಯದಲ್ಲಿ ಜಿಲ್ಲಾ ಹಾಗೂ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸುಳ್ಯದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಜಿಲ್ಲೆಯ 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ, ತಾಲೂಕು ನಿವೃತ್ತ ಶಿಕ್ಷಕ/ಶಿಕ್ಷಕೇತರ ನೌಕರರಿಗೆ ಸನ್ಮಾನ, ತಾಲೂಕು ಸ್ಕೌಟ್/ಗೈಡ್ಸ್ ವಿಭಾಗದ ಉತ್ತಮ ಶಿಕ್ಷಕರಿಗೆ ಅಭಿನಂದನೆ, ಶೈಕ್ಷಣಿಕ ಸಾಧಕರಿಗೆ ಹಾಗೂ ಸಂಸ್ಥೆಗಳಿಗೆ ಸನ್ಮಾನ ನಡೆಯುವುದು.
ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಗೌರವ ಉಪಸ್ಥಿತಿಯಲ್ಲಿ, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು.
ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ, ರಾಜ್ಯ ಸಭಾ ಸದಸ್ಯರು, ಜಿಲ್ಲೆಯ ವಿವಿಧ ತಾಲೂಕುಗಳ ಶಾಸಕರು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಅವರು ವಿವರ ನೀಡಿದರು.
ಸಭೆ ಹಾಗು ಸನ್ಮಾನದ ಬಳಿಕ ಶಿಕ್ಷಕರ ಯಕ್ಷಗಾನ ಒಕ್ಕೂಟ ಸುಳ್ಯ ಇವರಿಂದ ಯಕ್ಷಗಾನ ಬಯಲಾಟ ನಡೆಯುವುದು.
ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ ಇದ್ದರು.