ಮೂಲತಃ ಅಮರಪಡ್ನೂರು ಗ್ರಾಮದ ಚೂಂತಾರಿನವರಾಗಿದ್ದು,
ಬೆಳಾಲು ಎಸ್.ಡಿ.ಎಂ. ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿರುವ ರಾಮಕೃಷ್ಣ ಭಟ್ ಚೊಕ್ಕಾಡಿಯವರಿಗೆ 2022-23ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದಿದೆ.
ತಾ. 7.7.1968ರಲ್ಲಿ ಜನಿಸಿದ ರಾಮಕೃಷ್ಣ ಭಟ್ ಚೂಂತಾರುರವರು ಬಿ.ಎ.ಬಿ.ಎಡ್ ಪದವೀಧರರಾಗಿ 2001ರಿಂದ ಬೆಳ್ತಂಗಡಿ ತಾಲೂಕಿನ ಶ್ರೀ ಧ.ಮಂ.ಎಜ್ಯುಕೇಶನಲ್ ಸೊಸೈಟಿ (ರಿ) ಉಜಿರೆ ಇದರ ಆಡಳಿತಕ್ಕೊಳಪಟ್ಟ ಬೆಳಾಲು ಗ್ರಾಮದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2001ರ ಪೂರ್ವದಲ್ಲಿ ಬೆಳ್ಳಾರೆ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಒಂದು ವರ್ಷ ಮತ್ತು ಸರಕಾರಿ ಪ್ರೌಢಶಾಲೆ ದುಗ್ಗಲಡ್ಕದಲ್ಲಿ 10 (1988-2000 ದವರೆಗೆ) ವರ್ಷಗಳ ಕಾಲ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. 1993 ರಲ್ಲಿ ಬೆಳ್ಳಾರೆ ಜೇಸಿಐ ಸಂಸ್ಥೆಯ ಅಧ್ಯಕ್ಷರಾಗಿ, ಜೇಸಿಐನ ವಲಯ ತರಬೇತುದಾರರಾಗಿ ಆಯ್ಕೆ ಆಗಿ ಉತ್ತಮ ತರಬೇತುದಾರರು ಎಂಬ ಹೆಸರು ಗಳಿಸಿದ್ದಾರೆ. 1996 ರಿಂದ 2000 ದ ರವರೆಗೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್‍ಯದರ್ಶಿಯಾಗಿ ದುಡಿದಿರುತ್ತಾರೆ. ಇದೇ ಸಂದರ್ಭದಲ್ಲಿ ಸುಳ್ಯ ತಾಲೂಕಿನಾದ್ಯಂತ ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ತನ್ನ ಊರಿನ ತಾನು ಕಲಿತ ಶೇಣಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಪ್ರಭಾರ ಅಧ್ಯಕ್ಷರಾಗಿ ಈ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿಗೇರಿಸುವಲ್ಲಿ ಪ್ರಮುಖ ಕಾರಣರಾಗಿದ್ದಾರೆ.
೨೦೦೧ರಿಂದ ಬೆಳ್ತಂಗಡಿಯ ನಿವಾಸಿಯಾಗಿರುವ ಇವರದು ಬಹುಮುಖ ವ್ಯಕ್ತಿತ್ವ. ಶಿಕ್ಷಣ, ಪರಿಸರ, ಯಕ್ಷಗಾನ, ಸಾಹಿತ್ಯ, ಬರವಣಿಗೆ, ಗಮಕ ಇತ್ಯಾದಿ ಇವರ ಪ್ರಮುಖ ಆಸಕ್ತಿಗಳು. ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಳೆಯ ಅರ್ಥಧಾರಿಗಳಾಗಿ, ಗಮಕ ಪ್ರವಚನಕಾರರಾಗಿ ಗುರುತಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಡಾ. ವಂದನಾ ಶಿವರವರ ನೇತೃತ್ವದಲ್ಲಿ ಜರಗಿದ ಅಂತರಾಷ್ಟ್ರೀಯ ಪರಿಸರ ಮತ್ತು ಸಹ್ಯ ಅಭಿವೃದ್ಧಿ ಸಮಾವೇಶ (2000), ತೀರ್ಥಹಳ್ಳಿಯಲ್ಲಿ ಜರಗಿದ ಯೋಗ ಮತ್ತು ನೈತಿಕ ಶಿಬಿರ (2000), ಮೂಡಬಿದ್ರೆಯಲ್ಲಿ ಜರಗಿದ ಬೆಳದಿಂಗಳ ಸಾಹಿತ್ಯಸಮ್ಮೇಳನ (2018), ಸಾಕ್ಷರತಾ ಆಂದೋಲನ, ಸಾಕ್ಷರತಾ ಆಂದೋಲನದ ತಾಲೂಕು ಮಟ್ಟದ ತರಬೇತುದಾರ (೧೯೯೦),
2008ರಿಂದ ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್‍ಯದರ್ಶಿಯಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತು ಇದರ ಪದಾಧಿಕಾರಿಯಾಗಿ ತಾಲೂಕಿನ ಸಾಹಿತ್ಯ ಚಟುವಟಿಕೆಗಳ ನಿರಂತರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಶಾಲೆಗಳಲ್ಲಿ ಸಾಹಿತ್ಯ ಕಾರ್‍ಯಕ್ರಮಗಳ ಸಂಘಟನೆ, ಸಾಹಿತ್ಯ ಪ್ರೇರಣಾ ಶಿಬಿರಗಳು, ಹಳೆಗನ್ನಡ ಕಾವ್ಯಗಾಯನ-ಪ್ರವಚನ ಕಾರ್‍ಯಕ್ರಮಗಳನ್ನು ಸಂಯೋಜಿಸುವಲ್ಲಿ ನೇತೃತ್ವ ವಹಿಸಿದ್ದಾರೆ. ಜೊತೆಗೆ ಬೆಳ್ತಂಗಡಿ ತಾಲೂಕುಕನ್ನಡ ಸಾಹಿತ್ಯ ಸಮ್ಮೇಳನಗಳು (17),ಒಂದು ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ, ಎರಡು ಮಕ್ಕಳ ಸಾಹಿತ್ಯ ಸಮ್ಮೇಳನ ಜರಗುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಲ್ಲದೆ ಈ ಸಂದರ್ಭದಲ್ಲಿ ಪ್ರತೀ ಸಮ್ಮೇಳನದ ನೆನಪಿಗೆ ಹೊರತರುವ ಚಾರುಮುಡಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ ಉಡುಪಿ, ದ.ಕ ಮತ್ತುಕಾಸರಗೋಡು ಜಿಲ್ಲೆಗಳನ್ನೊಳಗೊಂಡ ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ 2018ನೇ ಸಾಲಿನ ಅಧ್ಯಕ್ಷರಾಗಿ ಈ ಅವಧಿಯಲ್ಲಿ ಮಕ್ಕಳ ಧ್ವನಿ ಎಂಬ 2 ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು 1 ದಿನದ ಮಕ್ಕಳ ನಾಟಕೋತ್ಸವನ್ನು ನಡೆಸಿಕೊಟ್ಟಿದ್ದಾರೆ. ಇತ್ತೀಚೆಗೆ ಉಜಿರೆಯಲ್ಲಿ ಜರಗಿದ 25ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ತಾನು ಕರ್ತವ್ಯ ಸಲ್ಲಿಸುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ನಿರಂತರವಾಗಿ ಬರವಣಿಗೆ ಶಿಬಿರ, ಹೊರಸಂಚಾರ, ಬೇಸಿಗೆ ಶಿಬಿರ, ಯಕ್ಷಗಾನತರಬೇತಿ, ಪರಿಸರಕಾರ್ಯಕ್ರಮ, ಗಮಕ, ಯಕ್ಷಗಾನ ಕಾರ್‍ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಶಾಲೆಯನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಗ್ರಾಮ ಮತ್ತು ತಾಲೂಕು ಮಟ್ಟದ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ, ಪರಿಸರ, ಜಲಸಂರಕ್ಷಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದವರ ಮದ್ಯವರ್ಜನ ಶಿಬಿರ, ಬೆಳ್ತಂಗಡಿ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಲೆಯಲ್ಲಿ ಸಂಘಟಿಸುವುದರ ನಾಯಕತ್ವ ವಹಿಸಿದ್ದಾರೆ. ಮಕ್ಕಳಿಗೆ ಸಂಸ್ಕಾರ ಶಿಬಿರವೆಂಬ ವಿನೂತನ ಪರಿಕಲ್ಪನೆಯ ಶಿಬಿರದ ಮೂಲಕ ಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ, ಭಗವದ್ಗೀತೆ, ಕತೆ, ವ್ಯಕ್ತಿತ್ವ ವಿಕಸನ, ನಾಗರಿಕ ಪ್ರಜ್ಞೆ ಮುಂತಾದ ವಿಷಯಗಳಲ್ಲಿ ಚಟುವಟಿಕೆಗಳನ್ನು ನಡೆಸಿಕೊಡುತ್ತಿದ್ದಾರೆ.
ಇವರು ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಕಾರ್‍ಯದರ್ಶಿಗಳಾಗಿ,(2010ರಿಂದ) ಮುಖ್ಯ ಶಿಕ್ಷಕರ ಜಿಲ್ಲಾ ಸಂಘಟನೆಯ ಪದಾಧಿಕಾರಿ (2008ರಿಂದ), ಬೆಳ್ತಂಗಡಿ ತಾಲೂಕಿನ ಸಮಾಜ ವಿಜ್ಞಾನ ವಿಷಯ ವೇದಿಕೆಯ ಸಂಚಾಲಕರಾಗಿ ದುಡಿಯುತ್ತಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ಸಮಾಜ ವಿಜ್ಞಾನ ವಿಷಯದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಶೈಕ್ಷಣಿಕ ತರಬೇತಿಗಳನ್ನು ಜಿಲ್ಲೆ ಮತ್ತುತಾಲೂಕಿನ ಶಿಕ್ಷಕರಿಗೆ ನಡೆಸಿಕೊಟ್ಟಿರುತ್ತಾರೆ.
ಉತ್ತಮ ತರಬೇತುದಾರರಾದ ಇವರು ನಾಯಕತ್ವ, ಮಾನವೀಯ ಸಂಬಂಧ, ಭಾಷಣ ಕಲೆ, ಪರೀಕ್ಷಾತಯಾರಿ, ಸಭೆ ಸಮಾರಂಭ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಇನ್ನೂರಕ್ಕಿಂತಲೂ ಅಧಿಕತರಬೇತು ಕಾರ್‍ಯಕ್ರಮ ನಡೆಸಿಕೊಟ್ಟ ಕೀರ್ತಿಇವರದು. ಅಲ್ಲದೆ ಹತ್ತು ಹಲವು ಉಪನ್ಯಾಸಗಳು, ಗೋಷ್ಠಿಗಳಲ್ಲಿ ವಿಚಾರ ಮಂಡನೆ, ಕವಿಗೋಷ್ಠಿ, ಧಾರ್ಮಿಕ ಪ್ರವಚನ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುದ್ದಿಬಿಡುಗಡೆ ಪತ್ರಿಕೆಯ ಅಂಕಣ ಬರಹಗಾರರಾಗಿ ಇವರ ಶೈಕ್ಷಣಿಕ, ಪರಿಸರ ಮತ್ತು ಮನೋವೈಜ್ಞಾನಿಕ ಲೇಖನಗಳು ಗಮನ ಸೆಳೆಯುವ ಬರಹಗಳಾಗಿವೆ.ಇವರ ಸಂಪಾದಕತ್ವದಲ್ಲಿ ಈವರೆಗೆ ಆರು ಸ್ಮರಣ ಸಂಚಿಕೆಗಳು ಹೊರಬಂದಿವೆ. ಮೂರು ಶೈಕ್ಷಣಿಕ ಮತ್ತು ಮೂರು ವ್ಯಕ್ತಿ ಚಿತ್ರಣಗಳು ಒಟ್ಟಾಗಿ ಆರು ಕೃತಿಗಳನ್ನೂ ಪ್ರಕಟಿಸಿರುತ್ತಾರೆ.
ಸ್ವತಃ ಉತ್ತಮ ಓದುಗರಾದ ಇವರಲ್ಲಿ ಸುಮಾರು 2000 ಪುಸ್ತಕಗಳ ಲೈಬ್ರೆರಿ ಇದೆ. ಇವರ ಸಾಹಿತ್ಯ, ಶಿಕ್ಷಣ ಸೇವೆಗಾಗಿ ಶ್ರೀಮತಿ ಅನಿತಾ ಕೌಲ್ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಶ್ರೀಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇವರಿಂದ ಶಿಕ್ಷಣ ಸೇವೆಗಾಗಿ ಸನ್ಮಾನ, ಅಖಿಲ ಭಾರತ ಬ್ರಾಹ್ಮಣ ಅರ್ಚಕರ, ಪುರೋಹಿತರ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಉತ್ತಮ ಶಿಕ್ಷಕ ಪುರಸ್ಕಾರಗಳು ಲಭಿಸಿವೆ. ಶಾಲೆಗೆ ರಾಜ್ಯ ಮಟ್ಟದ ಉತ್ತಮ ಕನ್ನಡ ಶಾಲೆ ಪ್ರಶಸ್ತಿ, ಬೆಳ್ತಂಗಡಿ ತಾಲೂಕಿನ ಉತ್ತಮ ಅನುದಾನಿತ ಶಾಲಾ ಪುರಸ್ಕಾರ, ಸ್ವಚ್ಛ ವಿದ್ಯಾಲಯ ಪುರಸ್ಕಾರ (ಜಲಸಂರಕ್ಷಣೆಗಾಗಿ) ಲಭಿಸಿವೆ.
ಸದ್ಯ ಇವರು ಕರ್ತವ್ಯ ಸಲ್ಲಿಸುತ್ತಿರುವ ಶಾಲೆ ಜಲ ಮರುಪೂರಣದ ವಿಶೇಷ ಮಾದರಿಗೆ, ಕಲಾಗ್ಯಾಲರಿ, ನಕಾಶೆಗಳ ಮೂಲಕ ಪ್ರಪಂಚದರ್ಶನ, ಉಚಿತಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್‌ಕ್ಲಾಸ್ ಮುಂತಾದ ಶೈಕ್ಷಣಿಕ ಉಪಕ್ರಮಗಳಿಗಾಗಿ ಉತ್ತಮ ಮತ್ತು ಮಾದರಿ ಶಿಕ್ಷಣ ಸಂಸ್ಥೆಯಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ.