ಶಿಕ್ಷಕ-ಕವಿ ಸಾಹಿತಿಗಳೆಡೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಭೂತಪೂರ್ವ ಹೆಜ್ಜೆ

0

ಮಾನವನ ಮಾನಸಿಕ ಬೌದ್ಧಿಕ, ಧಾರ್ಮಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಶಿಕ್ಷಣ ಅತೀ ಮುಖ್ಯವಾದುದು. ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನ್ನಾಗಿ ಮಾಡುತ್ತದೆ. ಶಿಕ್ಷಣವೆಂದರೆ ಪುಸ್ತಕದ ಜ್ಞಾನವೇ ಮಾತ್ರ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣವಾಗಿದೆ. ಸ್ವಾಮಿ ವಿವೇಕಾನಂದರು ಶಿಕ್ಷಣವನ್ನು ಈ ರೀತಿಯಾಗಿ ವ್ಯಾಖ್ಯಾನಿಸಿದ್ದಾರೆ “ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ, ಹಾಗೂ ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ” ಎಂಬುದಾಗಿ.

ಗುರುಬ್ರಹ್ಮ ಗುರುರ್ವಿಷ್ಣು: ಗುರುದೇವೋ ಮಹೇಶ್ವರ: | ಗುರು ಸಾಕ್ಷಾತ್ ಪರಬ್ರಹ್ಮ ತಸೈ ಶ್ರೀ ಗುರುವೇ ನಮ: ||
ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು, ಪಠ್ಯದ ಜತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ನಮ್ಮಲ್ಲಿ ನೈತಿಕತೆಯ ಮೌಲ್ಯವನ್ನು ಬೆಳೆಸಿದವರು, ನಮ್ಮ ದೈನಂದಿನ ಜೀವನದ ಸಾಧನೆಗಳಲ್ಲಿ ನಮ್ಮನ್ನು ಹರಸಿ ಹಾರೈಸಿದ ಪ್ರತಿಯೊಬ್ಬರೂ ಹಾಗೆಯೇ ನಮ್ಮ ಏಳಿಗೆಗೆ ಕೈಜೋಡಿಸಿ ನಮ್ಮನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾ, ನಮ್ಮ ಜೀವನದಲ್ಲಿ ನಮಗೆ ಗುರುವಿನ ಸ್ಥಾನವನ್ನು ತೋರಿದ ಪ್ರತಿಯೊಬ್ಬರು ಒಂದಲ್ಲ ಒಂದು ಹಂತದಲ್ಲಿ ನಮಗೆ ದಾರಿದೀಪ ವಾದವರು.
ಶಿಕ್ಷಕರು ಮಕ್ಕಳನ್ನು ಸುಜ್ಞಾನಿಯಾಗಿ ಮಾಡುವುದರೊಂದಿಗೆ ಸುಸಂಸ್ಕ್ರುತ, ಮಾನವೀಯ ಮೌಲ್ಯಗಳನ್ನು ಭೋದಿಸುತ್ತಾರೆ.
ಅರಿವಿನ ಲೋಕದಲ್ಲಿ ಹಿರಿಯರಾಗಿ ಅದರಲ್ಲೊಂದಿಷ್ಟನ್ನು ತನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಭವಿಷ್ಯದಲ್ಲಿ ನಮ್ಮ ಬಾಳು ಬೆಳಗುವಂತೆ ಮಾಡಿದ ನನ್ನೇಲ್ಲ ಗುರುವೃಂದಕ್ಕೆ ಈ ಮೂಲಕ ನಮನಗಳನ್ನು ಸಲ್ಲಿಸುತ್ತಾ ಇಂದು ಸಪ್ಟೆಂಬರ್ ೦೫ ಮಾಜಿ ರಾಷ್ಟ್ರಪತಿ ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ದೇಶಾದ್ಯಂತ ಆಚರಿಸುತ್ತೇವೆ.
ಗುರು ಎಂಬುದು ಪೂಜಾನೀಯ ಹಾಗೂ ಪವಿತ್ರ ಸ್ಥಾನ. ಗುರು ಏನಿಸಿಕೊಳ್ಳುವ ಯೋಗ ಯಾರಿಗೂ ಅಷ್ಟು ಸುಲಭವಾಗಿ ದೊರಕುವುದಿಲ್ಲ. ಗುರುಗಳನ್ನು ಪ್ರತ್ಯಕ್ಷ ದೇವರೆಂದರೂ ತಪ್ಪಾಗಲಾರದು.


ಇಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸುಳ್ಯ ತಾಲೂಕಿನ ಹೆಮ್ಮೆಯ ಇಬ್ಬರು ಕವಿ ಸಾಹಿತಿ ಶಿಕ್ಷಕರನ್ನು ಅವರ ನಿವಾಸದಲ್ಲಿ ಗೌರವಿಸಿ ಶಿಕ್ಷಕ ದಿನಾಚರಣೆಯ ಗೌರವ ಸಲ್ಲಿಸಿದ ತೃಪ್ತಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತಿದೆ.
ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ ಸಾಧಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾರ್ಥಕತೆಯ ಭಾವ ಹೊಂದಿದದವರು ಅದೇಷ್ಟೋ ಜನ ನಮ್ಮ ಕಣ್ಣ ಮುಂದೆ ಇದ್ದಾರೆ. ಅವರಲ್ಲಿ ಇಂದು ಸುಳ್ಯ ತಾಲೂಕಿನ ಕವಿ- ಸಾಹಿತಿಗಳ ತವರೂರು ಎಂದು ಎನಿಸಿಕೊಳ್ಳುವ ಸಾಹಿತ್ಯದ ಕಂಪಿನ ಮಣ್ಣಿನಲ್ಲಿ ಖ್ಯಾತ ಭಾಗವತರಾದ ಗಣಪಯ್ಯ ಹಾಗೂ ಸುಬ್ಬಮ್ಮ ದಂಪತಿಗಳ ಕುಡಿಗಳಾದ ಶಿಕ್ಷಕ, ಕವಿ, ವಿಮರ್ಶಕ, ನಾಟಕರಾರರಾದ ಶ್ರೀ ಸುಬ್ರಾಯ ಚೊಕ್ಕಾಡಿ ಹಾಗೂ ಶಿಕ್ಷಕ, ಲೇಖಕ, ಸಾಹಿತಿ ಶ್ರೀ ಲಕ್ಷ್ಮೀಶ ಚೊಕ್ಕಾಡಿ ದಂಪತಿಗಳನ್ನು ಅವರ ನಿವಾಸದಲ್ಲಿ ಗೌರವಿಸಿ, ಶಿಕ್ಷಣ ಕ್ಷೇತ್ರದಲ್ಲಿನ ಅವರ ಸಾಧನೆ, ಸಾಹಿತ್ಯಲೋಕದ ಅವರ ಒಡನಾಟ, ಕಾರ್ಯದಕ್ಷತೆಯ ಬಗ್ಗೆ ಮೆಲುಕುಹಾಕಿ, ಅವರ ನಿವೃತ್ತ ಜೀವನದ ಈ ಶುಭ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅವರಿಂದ ಆಶೀರ್ವಾದವನ್ನು ಪಡೆದು ಕೃತಕ್ತರಾಗಿದ್ದೇವೆ.

ನನ್ನ ಶೈಕ್ಷಣಿಕ ಅವಧಿಯಲ್ಲಿ ನನಗೆ ಅವರುಗಳಿಂದ ಶಿಕ್ಷಣವನ್ನು ಪಡೆದುಕೊಳ್ಳುವ ಯೋಗ-ಭಾಗ್ಯ ದೊರಕದಿದ್ದರೂ ಸಾಹಿತ್ಯ ಲೋಕದಲ್ಲಿ ಅವರುಗಳಿಂದಲೇ ಪ್ರೇರೆಪಿತಳಾಗಿ ಅವರನೇ ಗುರುಗಳ ಸ್ಥಾನದಿಂದ ಗೌರವಿಸುತ್ತಾ, ಅವರುಗಳ ಸಾಹಿತ್ಯಾಧಾರಿತ ಬರಹಗಳಿಗೆ ಪ್ರೇರೆಪಿತಳಾಗಿ ಅವರ ಬರಹಗಳನ್ನು ಕವಿತೆಗಳನ್ನು ಆಲಿಸುತ್ತಾ ನಾನು ಇಂದು ಸಾಹಿತ್ಯಲೋಕದಲ್ಲಿ ಚಿಕ್ಕ ಚುಕ್ಕಿಯಾಗಿ ಗುರುತಿಸಲು ಸಾಧ್ಯವಾಗಿದೆ ಎಂಬುದನ್ನು ಹೆಮ್ಮೆಯಿಂದ ಇಲ್ಲಿ ಹೇಳಬಯಸುತ್ತೇನೆ.

ಅವರು ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯದ ಆ ದಿನಗಳನ್ನು, ನೋವು ನಲಿವಿನ ಸಂಗಾತಿಗಳನ್ನು, ಅವಮಾನ ಅಸಹಾಯಕತೆಯ ಘಟನೆಗಳಿಗೆ ಪ್ರತಿಭಟನೆಯನ್ನು ತನ್ನ ಕಾವ್ಯರೂಪದ ಮೂಲಕ ಹೊರಚೆಲ್ಲುತ್ತಾ, ಅಂತರಂಗದ ಆಳ -ಅಗಲಗಳನ್ನು ಪ್ರತಿಬಿಂಬಿಸುತ್ತಾ, ತಮ್ಮ ರೂಪಕಗಳ ಮೂಲಕ ಹೊರಹಾಕುತ್ತಾ ಜನರ ಮನದಲ್ಲಿ ನಲಿದಾಡಿದ ಕವಿ ಸುಬ್ರಾಯ ಚೊಕ್ಕಾಡಿಯವರು. ಅಕ್ಷರವನ್ನು ಪದಪುಂಜವಾಗಿ, ವಾಕ್ಯಗಳನ್ನು ಖಂಡ-ಅಖಂಡವಾಗಿ, ಪೋಣಿಸುತ್ತಾ, ನಿರಂತರ ಅಧ್ಯಯನ ಶೀಲತೆಯಿಂದ ಪರಿಪಕ್ವತೆಯನ್ನು ಸಾಧಿಸುತ್ತಾ ಸಾಹಿತ್ಯ ಲೋಕದ ಮೇರುಗತಿಯಲ್ಲಿ ಸಾಗುತ್ತಿರುವವರು ಭಾವಗೀತೆಗಳ ಕವಿ ಎಂದೇ ಗುರುತಿಸಿಕೊಳ್ಳುವವರು ಅವರ ತಮ್ಮ ಲಕ್ಷ್ಮೀಶ ಚೊಕ್ಕಾಡಿಯವರು.
ಅಣ್ಣ ತಮ್ಮಂದಿರಿಬ್ಬರೂ ತಮ್ಮ ಇಳಿಯ ವಯಸ್ಸಿನಲ್ಲೂ ಕೂಡಾ ಸಾಹಿತ್ಯಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪರಿ ನಿಜವಾಗಿಯೂ ಸಾಹಿತ್ಯ ಲೋಕದ ನಮ್ಮಂತಹ ಕಿರಿಯರಿಗೆ ದಾರಿದೀಪ.


ಇಂದು ಅವರಿಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇದರ ಅಧ್ಯಕ್ಷರಾದ ಶ್ರೀ. ಚಂದ್ರಶೇಖರ್ ಪೇರಾಲ್ ಹಾಗೂ ಕಾರ್ಯದರ್ಶಿಗಳಾದ ಶ್ರೀ. ತೇಜಸ್ವಿ ಕಡಪಳ ಇವರ ಉತ್ಸುಹುಕತೆಯ ನಿರ್ವಹಣೆಯಲ್ಲಿ ಶಿಕ್ಷಕ /ಕವಿ ಸಾಹಿತಿಗಳೆಡೆಗೆ ನಮ್ಮ ನಡೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಸಪ್ಟಂಬರ್ ೦೫ನೇ ತಾರೀಕಿನಂದು ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದು, ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವದೊಂದಿಗೆ ಸ್ವಚ್ಚ -ಶುಭ್ರ ಅವರ ನಿವಾಸದಲ್ಲಿ ಸುಳ್ಯ ತಾಲೂಕು ಕ.ಸಾ.ಪದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೋ. ಸಂಜೀವ ಕುದ್ಪಾಜೆಯವರ ಅಭಿನಂದನಾ ಮಾತುಗಳೊಂದಿಗೆ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಕ.ಸಾಪ ಸದಸ್ಯರಾದ ಶ್ರೀ. ರಾಮಚಂದ್ರ ಪಲ್ಲತ್ತಡ್ಕ, ಸುಳ್ಯ ತಾಲೂಕು ಕ.ಸಾ.ಪದ ಗೌರವ ಕಾರ್ಯದರ್ಶಿಗಳಾದ ಶ್ರೀ. ತೇಜಸ್ವಿ ಕಡಪಳ, ಸುಳ್ಯ ತಾಲೂಕು ಕ.ಸಾ.ಪ ದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ. ಕೇಶವ ಸಿ.ಎ., ಶ್ರೀ. ಸಂಕೀರ್ಣ ಚೊಕ್ಕಾಡಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಅವರ ಮನೆಮಂದಿಗಳ ಸನ್ಮುಖದಲ್ಲಿ ಸುಳ್ಯ ತಾಲೂಕು ಕ.ಸಾ.ಪದ ಅಧ್ಯಕ್ಷರಾದ ಶ್ರೀ. ಚಂದ್ರಶೇಖರ್ ಪೇರಾಲು ಗೌರವಿಸಿ, ಶಿಕ್ಷಕ ದಿನಾಚರಣೆಯನ್ನು ವೈವಿದ್ಯತೆಯೊಂದಿಗೆ ಆಯೋಜಿಸಿ ಸಾಹಿತ್ಯ ಲೋಕದ ದಿಗ್ಗಜ ಕವಿ, ಸಾಹಿತಿ ಶಿಕ್ಷಕರಿಬ್ಬರನ್ನು ದಂಪತಿ ಸಮೇತರಾಗಿ ಗೌರವಿಸಿ ಸಂತುಷ್ಠರಾಗಿದ್ದೇವೆ ಎಂಬ ಹೆಗ್ಗಳಿಗೆ ನಮ್ಮದು. ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ನಾಡಿನ ಸಮಸ್ತ ಶಿಕ್ಷಕವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

– ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ