ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ದೇಶದ ಹೆಸರು ಬದಲಾಯಿಸುವ ಬದಲು ಸಂಕಷ್ಟದಲ್ಲಿರುವ ಜನಸಾಮಾನ್ಯರ ಬದುಕು ಬದಲಾಯಿಸಲಿ.: ಎಂ ವೆಂಕಪ್ಪ ಗೌಡ

0

ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಬಹುತೇಕ ಸಾರ್ವಜನಿಕ ವಲಯದ ಸಂಸ್ಥೆಗಳ ವಿಲೀನ ಮತ್ತು ಹೆಸರು ಬದಲಾಯಿಸಿಕೊಂಡು ಬರುವುದರಲ್ಲಿ ಇತಿಹಾಸವನ್ನು ನಿರ್ಮಿಸಿಕೊಂಡು ಬಂದಿರುತ್ತದೆ. ಇದೀಗ ಇವರು ಯೋಜನೆಗಳ ಹೆಸರು ಬದಲಾವಣೆ ಮಾಡುವುದನ್ನು ಮೀರಿ ಈಗ ದೇಶದ ಹೆಸರನ್ನೇ ಬದಲಾವಣೆ ತರುವ ಮಟ್ಟಿಗೆ ಬಂದು ಮೋದಿಯವರ ಹೆಸರನ್ನು ಅಚ್ಚಳಿಯದಂತೆ ಮಾಡುವ ಇತಿಹಾಸ ನಿರ್ಮಾಣ ಮಾಡಲು ಹೊರಟಿರುತ್ತಾರೆ ಎಂದು‌ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ವಾಸ್ತವವಾಗಿ ದೇಶದ ಹೆಸರು ಮತ್ತು ಸರಕಾರಿ ಯೋಜನೆಗಳ ಹೆಸರನ್ನು ಬದಲಾವಣೆ ಮಾಡುವುದಕ್ಕಿಂತ ಜನರ ಜೀವನ ಮಟ್ಟವನ್ನು ಬದಲಾಯಿಸಬೇಕಿದೆ.
ಮೋದಿ ಸರಕಾರ ಬಂದ 2014ರ ನಂತರ ಜನರು ಅಗತ್ಯ ವಸ್ತುಗಳ ಬೆಲೆಯೇರಿಕೆ, ನೋಟ್ ಬ್ಯಾನ್, ಮತ್ತು ಆರ್ಥಿಕ ಶಿಸ್ತು ಇಲ್ಲದೇ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ. ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಉನ್ನತ ಮಟ್ಟದ ಪದವೀಧರರು ಇಂದು ಕೂಲಿ ಕೆಲಸಕ್ಕೆ ಒಗ್ಗಿಕೊಳ್ಳುವ ಸನ್ನಿವೇಶದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇವರ ಜೀವನ ಮಟ್ಟವನ್ನು ಹೆಚ್ಚಿಸಲು ಉದ್ಯೋಗ ಸೃಷ್ಟಿಮಾಡುವುದು, ರೈತರಿಗೆ, ಕಾರ್ಮಿಕರಿಗೆ ಹಾಗೂ ಎಲ್ಲಾ ವಲಯದ ಎಲ್ಲಾ ವರ್ಗದ ಜನರ ಜೀವನ ಮಟ್ಟವನ್ನು ಮೇಲೆತ್ತಿ , ಜನರ ಜೀವನ ಶೈಲಿಯನ್ನು ಬದಲಾಯಿಸಬೇಕೆ ಹೊರತು ದೇಶದ ಹೆಸರನ್ನು ಬದಲಾಯಿಸುವುದು ಎಷ್ಟರಮಟ್ಟಿಗೆ ಔಚಿತ್ಯಪೂರ್ಣವಾಗಿದೆ?

ನಮ್ಮ ದೇಶದ ಇತಿಹಾಸ ನೋಡಿದರೆ ಮೊದಲಿನಿಂದಲೂ ಅಂದರೆ ಸಿಂಧೂ ನದಿಯ ನಾಗರಿಕತೆಯ ಕಾಲದಿಂದಲೂ ಹುಟ್ಟಿಕೊಂಡು ಬಂದಿರುವುದು ಸಿಂಧೂ ನದಿಯ ಬಯಲನ್ನು ಹಿಂದೂಪ್ರದೇಶ, ಸಿಂದ್ ಪ್ರಾಂತ್ಯ, ಇಂಡಸ್ ನಂತರ ಇಂಡಿಯಾ, ಭರತ ಖಂಡ, ಭಾರತ ಎಂದು ಕರೆಯಲ್ಪಟ್ಟಿದೆ. ಜಗತ್ತಿನಾದ್ಯಂತಮತ್ತು ಭಾರತದ ಸಂವಿಧಾನದಲ್ಲಿ ಇಂಡಿಯಾ ಎಂದು ನಮೂದಾಗಿದ್ದು ಜನಜನಿತ ವಾಗಿ ವ್ಯವಹಾರಿಕವಾಗಿ ನಡೆದುಕೊಂಡು ಬಂದಿದೆ. ಆದರೂ ಸಹ ಈ ಎಲ್ಲಾ ಹೆಸರುಗಳು ಮತ್ತು ಭಾರತ ಎಂಬ ಹೆಸರು ದೇಶದ ಜನರ ಭಾವನೆಯಲ್ಲಿ ಒಗ್ಗಿ ಹೋಗಿದೆ. ಮತ್ತು ಹಾಸುಹೊಕ್ಕಾಗಿದೆ. ಇದುವರೆಗೆ ದೇಶದ ಯಾವುದೇ ಪ್ರಜೆಯು ದೇಶದ ಹೆಸರಿನ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಲಿಲ್ಲ. ಈಗ ಕೇವಲ ರಾಜಕೀಯ ಉದ್ದೇಶದಿಂದ ದೇಶದ ಹೆಸರು ಬದಲಾಯಿಸುವ ಕಾರ್ಯಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ನಡೆ ಅತ್ಯಂತ ಖಂಡನೀಯವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.