ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲದ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ

0

ಮಹಿಳೆಯರ ಆತ್ಮಸ್ಥೈರ್ಯ ಹಿಂದೆಗಿಂತಲೂ ಈಗ ಸಾಕಷ್ಟು ಹೆಚ್ಚಿದೆ : ಡಾ|| ರೇವತಿ ನಂದನ್

60 ವರ್ಷಗಳ ಹಿಂದೆ ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆಯುವುದು ಅಸಾಧ್ಯವಾಗಿತ್ತು, ವೈಯಕ್ತಿಕವಾಗಿ ಶಿಕ್ಷಣ, ಆರೋಗ್ಯ, ಸಾಮಾಜಿಕ ವ್ಯವಸ್ಥೆ ಮಹಿಳಾ ಪರವಾಗಿ ಇರಲಿಲ್ಲ. ಮಹಿಳೆಯರು ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಈಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಸಾಧಿಸುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಅತ್ಯುತ್ತಮ ಆರ್ಥಿಕ ಚಟುವಟಿಕೆಯನ್ನು ಹೊಂದುತ್ತ, ಶಿಕ್ಷಣ, ಸಾಮಾಜಿಕ ಭದ್ರತೆ, ಉದ್ಯೋಗಗಳತ್ತ ಮುನ್ನುಗುತ್ತಿರುವುದು ತುಂಬಾ ಸಂತೋಷದ ವಿಚಾರ” ಎಂದು ನಿವೃತ್ತ ಪ್ರಾಂಶುಪಾಲರೂ ಶಾರದಾ ಮಹಿಳಾ ವಿದ್ಯಾಸಂಸ್ಥೆಗಳ ಸಂಚಾಲಕರೂ ಆಗಿರುವ ಡಾ|| ರೇವತಿ ನಂದನ್‌ರವರು ಹೇಳಿದರು.

ಸುಳ್ಯದ ಜಟ್ಟಿಪಳ್ಳ ಯುವಸದನದಲ್ಲಿ ಸೆ.3 ರಂದು ನಡೆದ ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ರೇವತಿ ಗೋಪಾಲರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಳ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೈಲಜಾ ದಿನೇಶ್‌ರವರು ಇಲಾಖೆಯಿಂದ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಿಗುವ ಸವಲತ್ತುಗಳು ಮತ್ತು ರಕ್ಷಣೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.


ಮಹಿಳಾ ಮಂಡಲದ ನೂತನ ಪದಾಧಿಕಾರಿಗಳಿಗೆ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ.ರೈಯವರು ಪ್ರಮಾಣವಚನ ಭೋದಿಸಿ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ನೂತನ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿಯವರು ಮಾತನಾಡಿ ” ಬೆಳ್ಳಿ ಹಬ್ಬದ ಆಚರಣೆಯಲ್ಲಿರುವ ಮಹಿಳಾ ಮಂಡಲದಿಂದ ಹಲವು ಕಾರ್‍ಯಕ್ರಮಗಳನ್ನು ಸಂಘಟಿಸಲು ಎಲ್ಲರ ಸಹಕಾರವನ್ನು ” ಕೇಳಿಕೊಂಡರು.
ಇದೇ ಸಂಧರ್ಭದಲ್ಲಿ `ಮಾನಸ ಅಮ್ಮ’ ದತ್ತು ಸ್ವೀಕಾರ ಯೋಜನೆಯಡಿ, ತಾಯಿಯನ್ನು ಕಳೆದುಕೊಂಡ 9 ತಿಂಗಳ ಮಗುವನ್ನು ಮಹಿಳಾ ಮಂಡಲದ ವತಿಯಿಂದ ದತ್ತು ಪಡೆದು ಉಪಯುಕ್ತ ವಸ್ತುಗಳ ಕಿಟ್‌ನ್ನು ಹಸ್ತಾಂತರಿಸಲಾಯಿತು ಮತ್ತು ಮಗುವಿನ ಬೆಳವಣಿಗೆ ಬಗ್ಗೆ ಮಹಿಳಾ ಮಂಡಲದಿಂದ ಕಾಲಕಾಲಕ್ಕೆ ಸಹಕಾರ ನೀಡುವುದೆಂದು ಅದ್ಯಕ್ಷರು ಘೋಷಿಸಿದರು.
ಮಹಿಳಾ ಮಂಡಲದ ವರದಿಯನ್ನು ಶೈಲಜಾ ಪಿ.ರೈಯವರು ಮಂಡಿಸಿದರೆ ಲೆಕ್ಕ ಪತ್ರವನ್ನು ಪೂರ್ವಾಧ್ಯಕ್ಷೆ ಸುನೀತಾ ರಾಮಚಂದ್ರರವರು ಮಂಡಿಸಿದರು. ಕಾರ್‍ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಮಹಾಬಲ ಗೌಡ, ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ, ರಮಾನಂದ ರೈ, ರಘುನಾಥ ಜಟ್ಟಿಪ್ಪಳ್ಳ, ಸಂತೋಷ್ ಕುಮಾರ್‌ ಶೆಟ್ಟಿ, ಹರಿಶ್ಚಂದ್ರ ಎಂ.ಆರ್. ಅಲ್ಲದೆ ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್, ಪೂರ್ವಾಧ್ಯಕ್ಷರಾದ ನವೀನ್‌ ಕುಮಾರ್‌ ಕಜೆ, ವಿಶುಕುಮಾರ್ ಜಟ್ಟಿಪಳ್ಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮೇಶ್ ಬೊಳಿಯಮಜಲು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಅರ್ಚನಾ ಆರ್.ರೈ ನಿರೂಪಿಸಿದರು.