ಕುಕ್ಕೆ ಸುಬ್ರಹ್ಮಣ್ಯ ದೇವಳದ ಸುತ್ತು ಪೌಳಿ ನವೀಕರಣಕ್ಕೆ ಸಮಿತಿ ರಚನೆ

0

ಚಂದ್ರಮೌಳೇಶ್ವರ ಗುಡಿ ಪುನರ್‌ನಿರ್ಮಾಣ, ಆಶ್ಲೇಷ ಬಲಿ ಮಂಟಪ ನಿರ್ಮಾಣ, ಪಾರ್ಕಿಂಗ್ ಸಂಕೀರ್ಣಕ್ಕೆ ಕ್ರಮ

ರಾಜ್ಯ ಮುಜರಾಯಿ ಆಯುಕ್ತ ಎಚ್.ಬಸವರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಸುತ್ತುಪೌಳಿ ನವೀಕರಣವು ಪ್ರಪ್ರಥಮವಾಗಿ ಆಗಬೇಕಾದ ಕಾರ್ಯವಾಗಿದೆ. ಸುತ್ತು ಪೌಳಿಯ ಪುನರ್ ನಿರ್ಮಾಣಕ್ಕಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲು ಸಲಹೆ ನೀಡಿದ್ದೇನೆ.

ಇದಕ್ಕೆ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯದರ್ಶಿಗಳಾಗಿರುತ್ತಾರೆ.ಅಲ್ಲದೆ ಈ ಸಮಿತಿಗೆ ವಾಸ್ತುಶಿಲ್ಪಿಗಳು, ಆಗಮ ಪಂಡಿತರು, ಸ್ಥಳೀಯರು ಸೇರಿದಂತೆ ಉಳಿದ ಸದಸ್ಯರನ್ನು ನೇಮಿಸಲು ತಿಳಿಸಿದ್ದೇನೆ ಎಂದು ರಾಜ್ಯ ಮುಜರಾಯಿ ಆಯುಕ್ತ ಎಚ್.ಬಸವರಾಜೇಂದ್ರ ಹೇಳಿಕೆ ನೀಡಿದ್ದಾರೆ.

ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿವಿಧ ರೀತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸೆ.7 ರಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಆದಷ್ಟು ಶೀಘ್ರ ಈ ಯೋಜನೆ ನೆರವೇರುವಂತೆ ಮಾಡಲಾಗುವುದು ಅಲ್ಲದೆ ಈ ಬಗ್ಗೆ ಮಾನ್ಯ ಮುಜರಾಯಿ ಸಚಿವರಲ್ಲಿಯೂ ಸಲಹೆ ಕೇಳುತ್ತೇನೆ.

ಮುಂದಿನ ತಿಂಗಳ ಪ್ರಥಮ ವಾರದಲ್ಲಿ ಮುಜುರಾಯಿ ಸಚಿವರು ಕ್ಷೇತ್ರಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಚಂದ್ರಮೌಳೇಶ್ವರ ಗುಡಿ ಪುನರ್‌ನಿರ್ಮಾಣ:

ಶ್ರೀ ದೇವಳದ ಹೊರಾಂಗಣದಲ್ಲಿನ ಚಂದ್ರಮೌಳೀಶ್ವರ ಗುಡಿಯನ್ನು ಪುನರ್ ನಿರ್ಮಾಣ ಮಾಡಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಯ ನೀಲ ನಕಾಶೆ ತಯಾರಾಗಿದೆ. ಇದನ್ನು ಪರಿಶೀಲಿಸಿದ್ದೇನೆ.ಇದನ್ನು ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೂರನೇ ಹಂತದ ಮಾಸ್ಟರ್ ಪ್ಲಾನ್ ಕೈಗೆತ್ತಿಕೊಳ್ಳಲು ಕೆಲವೊಂದು ಅಡೆ ತಡೆಗಳಿವೆ ಅದನ್ನು ನೋಡಿಕೊಂಡು ಯೋಜನೆ ಹಮ್ಮಿಕೊಳ್ಳಲು ಬೇಕಾದ ಕ್ರಮ ಕೈಗೊಳ್ಳಲು ಚಿಂತನೆ ಮಾಡಲಾಗುವುದು ಎಂದು ನುಡಿದರು.

ಆಶ್ಲೇಷ ಬಲಿ ಮಂಟಪ ನಿರ್ಮಾಣ

ಆದಿಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ವಿಸ್ತಾರವಾದ ಆಶ್ಲೇಷ ಬಲಿ ಮಂಟಪ ನಿರ್ಮಾಣ ಮಾಡಲಾಗುವುದು.ಇದರ ಪಕ್ಕದಲ್ಲಿ ಒಂದು ಲಗೇಜ್ ಕೊಠಡಿ, ಶೌಚಾಲಯ ನಿರ್ಮಿಸಲಾಗುವುದು. ಈಗಾಗಲೇ ಕೆಲವೊಂದು ನೌಕರರಿಗೆ ಸಾರ್ವಜನಿಕ ಭಕ್ತರಿಗೆ ನೀಡುವ ವಸತಿಗೃಹದಲ್ಲಿ ಅನಿವಾರ್ಯವಾಗಿ ಕೊಠಡಿ ನೀಡಲಾಗಿದೆ. ಆದುದರಿಂದ ಅವರಿಗಾಗಿ ಹೊಸ ಕ್ವಾಟ್ರಸ್ ಅನ್ನು ನಿರ್ಮಿಸಿಕೊಡಲಾಗುವುದು. ಬಳಿಕ ಈ ವಸತಿಗೃಹಗಳನ್ನು ಪುನರ್ ನಿರ್ಮಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಎರಡು ಸ್ತರದಲ್ಲಿ ಪಾರ್ಕಿಂಗ್ ಸಂಕೀರ್ಣ

ಎರಡು ಸ್ತರದಲ್ಲಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲಾಗುವುದು.ಶ್ರೀ ದೇವಳದಿಂದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಚಿಂತನೆ ಮಾಡಲಾಗುವುದು. ಉರುಳು ಸೇವೆಗೆ ಕುಮಾರಧಾರದಿಂದ ಸುಬ್ರಹ್ಮಣ್ಯ ತನಕ ವಿಶೇಷ ದಾರಿ ಮಾಡಲಾಗುವುದು.ಇದಕ್ಕೆ ಈಗಾಗಲೇ ದಾನಿಗಳು ಮುಂದೆ ಬಂದಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ತಿಳಿಸಿದರು.

ಇದು ಸಂತಸಕರ ವಿಷಯ. ಶ್ರೀ ದೇವಳದ ಜಾಗದ ಸಂರಕ್ಷಣೆಗೆ ಹೆಚ್ಚು ಒತ್ತನ್ನು ನೀಡಲಾಗುವುದು. ಶ್ರೀ ದೇವಳದ ಜಾಗದ ಸುತ್ತಲೂ ಆವರಣಗೋಡೆ ನಿರ್ಮಿಸಲು ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರವೇ ಈ ಕಾರ್ಯವನ್ನು ಇಒ ಅವರು ನಡೆಸಿಕೊಡುತ್ತಾರೆ ಎಂದು ಹೇಳಿದರು.

ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಲೋಕೇಶ್ ಮುಂಡೊಕಜೆ, ಶೋಭಾಗಿರಿಧರ್, ವನಜಾ ಭಟ್ ಉಪಸ್ಥಿತರಿದ್ದರು.ಮುಜುರಾಯಿ ಆಯುಕ್ತರು ಸಲೋಕೋಪಯೋಗಿ ಇಲಾಖಾ ಅಧಿಕಾರಿಗಳೊಂದಿಗೆ, ಇಂಜೀನಿಯರಿಂಗ್ ವಿಭಾಗ, ಇತರ ಅಧಿಕಾರಿ ವರ್ಗ ಮತ್ತು ಶ್ರೀ ದೇವಳದ ಒಳಾಂಗಣ, ಹೊರಾಂಗಣ ಸೇರಿದಂತೆ ಎಲ್ಲಾ ನೌಕರರೊಂದಿಗೆ ಸಭೆ ನಡೆಸಿದರು.

ಅಲ್ಲದೆ ಪ್ರಗತಿ ಪರಿಶೀಲನೆ ಮಾಡಿದರು. ಅಲ್ಲದೆ ನೌಕರರೊಂದಿಗೆ ಸಭೆ ನಡೆಸಿ ಕುಂದು ಕೊರತೆಗಳ ಬಗ್ಗೆ ಆಗಬೇಕಾದ ಕಾರ್ಯಗಳ ಬಗ್ಗೆ, ನೌಕರರ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದು ಕೊಂಡರು.