ಒಕ್ಕಲಿಗ ಮುಖಂಡರಿಂದ ಆದಿಚುಂಚನಗಿರಿ ಶ್ರೀಗಳ ಭೇಟಿ

0

ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ: ಸ್ವಾಮೀಜಿ ಭರವಸೆ

ಧರ್ಮಸ್ಥಳದ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಈಗಾಗಲೇ ಹಲವಾರು ಸಂಘಟನೆಗಳು ಸಾಥ್ ನೀಡಿದ್ದು, ಸೌಜನ್ಯ ಹೋರಾಟ ಸಮಿತಿ ಹಾಗೂ ಜಿಲ್ಲೆಯ ಒಕ್ಕಲಿಗ ಗೌಡ ಸಂಘದ ಪದಾಧಿಕಾರಿಗಳು ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಈ ಹಿಂದೆ ಆದಿಚುಂಚನಗಿರಿ ಕಾವೂರು ಮಠದ ಶ್ರೀ ಡಾ. ಧರ್ಮಪಾಲನಾಥ ಶ್ರೀಗಳನ್ನು ಭೇಟಿಯಾಗಿದ್ದ ಕುಟುಂಬಕ್ಕೆ ಹೋರಾಟಕ್ಕೆ ಬೆಂಬಲದ ಭರವಸೆ ನೀಡಿದ್ದ ಬೆನ್ನಲ್ಲೇ ಸೆಪ್ಟೆಂಬರ್ 03 ರಂದು ಬೆಳ್ತಂಗಡಿಯಲ್ಲಿ ನಡೆದಿದ್ದ ಹೋರಾಟದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು.ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ ಸಮಿತಿಗಳ ಪದಾಧಿಕಾರಿಗಳ ಸಹಿತ ಸೌಜನ್ಯ ಕುಟುಂಬ ಸೇರಿ ಸುಮಾರು 150 ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಮುಖಂಡರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿದ್ದು, ಸುದೀರ್ಘ ಕಾಲ ಮಾತುಕತೆ ನಡೆಸಲಾಯಿತು.

“ಇಂತಹದೊಂದು ಹೇಯ, ಬರ್ಬರ ಕೃತ್ಯ ನಡೆದಿರುವುದು ಬೇಸರದ ವಿಚಾರವಾಗಿದೆ. ಇದು ಒಕ್ಕಲಿಗ ಸಮುದಾಯದ ಹುಡುಗಿಯ ಪ್ರಶ್ನೆಯಲ್ಲ. ಇದು ಸಮಗ್ರ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಸತ್ಯದ ಪರ ಮತ್ತು ನ್ಯಾಯದ ಪರ ಆದಿಚುಂಚನಗಿರಿ ಯಾವತ್ತೂ ಮಾದರಿಯಾಗಿ ನಿಲ್ಲುತ್ತದೆ” ಎಂದು ಸ್ವಾಮೀಜಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ಸೌಜನ್ಯ ನ್ಯಾಯಕ್ಕಾಗಿ ಕಾನೂನು ತಜ್ಞರ ಸಲಹೆಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಘಟನೆಯ ಗಂಭೀರತೆ ಮನವರಿಕೆ ಮಾಡುವ ಹಾಗೂ ಆಕೆಯ ಸಾವಿನ ನ್ಯಾಯಕ್ಕಾಗಿ ಕಾನೂನಿನ ಮೂಲಕ ಆಗಬೇಕಾದ ಸೂಕ್ತ ವ್ಯವಸ್ಥೆಗಳನ್ನು ಪೂರೈಸುವ ಬಗ್ಗೆ ಶ್ರೀಗಳು ಭರವಸೆ ನೀಡಿದ್ದಾರೆ.

ಅಲ್ಲದೇ ಈಗಾಗಲೇ ನಡೆಯುತ್ತಿರುವ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಶ್ರೀಗಳು ಆಕೆ ಒಕ್ಕಲಿಗ ಸಮಾಜದ ಹುಡುಗಿ ಎನ್ನುವ ಯೋಚನೆ ಪಕ್ಕಕ್ಕಿಟ್ಟು ನಾವು ಯೋಚಿಸಬೇಕು. ಎಲ್ಲಾ ಸಮಾನ ಮನಸ್ಕರು ಸೇರಿ ನಡೆಸಿರುವ ಹೋರಾಟ ನಿಜಕ್ಕೂ ಶ್ಲಾಘನೀಯ. ಇದರ ಸಮಗ್ರ ಮರು ತನಿಖೆಗೆ ಮಾಡುತ್ತಿರುವ ನಿಮ್ಮೆಲ್ಲ ಹೋರಾಟ ಫಲ ನೀಡಲಿದೆ. ಆಕೆಯ ನ್ಯಾಯಕ್ಕಾಗಿ ಬೇಕಾದ ಕಾನೂನು ಹೋರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಶ್ರೀಗಳು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.