ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಾಮದ ಪದವಿನ ಗುಬ್ಬಚ್ಚಿ ಗೂಡು ಸಂಸ್ಥೆಯ ವತಿಯಿಂದ ಪಕ್ಷಿ ಸಂರಕ್ಷಣಾ ಜಾಗೃತಿ ಕಾರ್ಯಕ್ರಮವು ಸೆ.11 ರಂದು ಜರಗಿತು.
ಕಾರ್ಯಕ್ರಮದಲ್ಲಿ ಗುಬ್ಬಚ್ಚಿ ಗೂಡು ಸಂಸ್ಥೆಯ ಸ್ಥಾಪಕ ಶ್ರೀಯುತ ನಿತ್ಯಾನಂದ ಶೆಟ್ಟಿಯವರು ಮಾತನಾಡಿ “ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮನುಷ್ಯನ ತಿನ್ನುವ ದುರಾಸೆಯು ಪಕ್ಷಿಗಳ ಜೀವಕ್ಕೆ ಕಂಟಕವಾಗಬಾರದು. ನಾವೆಲ್ಲರೂ ಪಕ್ಷಿಗಳ ಪಾಲಿಗೆ ಆಪದ್ಬಾಂಧವರಾಗಬೇಕು. ನಮ್ಮ ಮನೆ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿ ಬೇಸಿಗೆಯಲ್ಲಿ ನೀರು, ಆಹಾರ ನೀಡಬೇಕು. ಗುಬ್ಬಚ್ಚಿ ಸಂಕುಲ ಅಳಿಯಲು ಕಟ್ಟಡಗಳ ರಚನೆ ಮಾತ್ರವಲ್ಲದೆ ಭತ್ತದ ಗದ್ದೆಗಳ ನಾಶ ಕೂಡ ಪ್ರಮುಖ ಕಾರಣವಾಗಿದೆ” ಎಂದರು. ಅಲ್ಲದೇ ಅವರ ಧರ್ಮಪತ್ನಿ ಶ್ರೀಮತಿ ರಮ್ಯಾ ನಿತ್ಯಾನಂದ ಶೆಟ್ಟಿಯವರು ಪಕ್ಷಿಗೆ ಆಹಾರ , ನೀರು ನೀಡುವ ಹಾಗೂ ಕೃತಕ ಗೂಡಿನ ರಚನೆಯ ಪ್ರಾತ್ಯಕ್ಷಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲಾ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಕಾಗೆಗಳ ಒಗ್ಗಟ್ಟು, ಅವುಗಳ ಹಂಚಿ ತಿನ್ನುವ ಗುಣ ಅನುಸರಣೀಯ. ಪಕ್ಷಿಗಳಿಗೆ ಅನ್ನ , ಆಹಾರ ನೀಡುವ ಮೂಲಕ ಪರಿಸರ ಸಮತೋಲನದ ಮೌಲ್ಯ ಬೆಳೆಸಿಕೊಳ್ಳಬೇಕು . ನಮ್ಮ ಜೀವನ ಸುಂದರವಾಗಿಸಲು ಪರಿಸರ ಸಂರಕ್ಷಣೆ ಅಗತ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ , ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ದೇವಿಪ್ರಸಾದ ಜಿ ಸಿ ನಿರ್ವಹಿಸಿದರು.