ಪೊಲೀಸ್ ಪರಿಶೀಲನೆ ವೇಳೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸೀರೆಯ ರಾಶಿಯಲ್ಲಿ ಚಿನ್ನಾಭರಣ ಪತ್ತೆ – ನಗದು ಕಳವು
ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸಂಭವಿಸಿದ ಚಿನ್ನಾಭರಣ ಹಾಗೂ ನಗದು ಕಳವಿಗೆ ಸಂಬಂಧಿಸಿದಂತೆ ಪೊಲೀಸ್ ಪರಿಶೀಲನೆ ವೇಳೆಗೆ ಕಳವಾಗಿದ್ದ ಚಿನ್ನಾಭರಣ ಕಳ್ಳರು ಗೋಡ್ರೆಜ್ ಒಳಗಿನಿಂದ ಎಳೆದು ಹಾಕಿದ್ದ ಸೀರೆಯ ರಾಶಿಯಲ್ಲಿ ಪತ್ತೆಯಾಗಿದ್ದು, ನಗದು ಮಾತ್ರ ಕಳವಾಗಿರುವುದಾಗಿ ತಿಳಿದುಬಂದಿದೆ.
ಕದಿಕಡ್ಕದ ವಸಂತ ರೈ ಅವರ ಮನೆಯಿಂದ ಮಧ್ಯಾಹ್ನ 12.30ರ ವೇಳೆಗೆ ಕಳ್ಳರು ಹಿಂಬದಿ ಬಾಗಿಲು ಒಡೆದು ಒಳನುಗ್ಗಿ , ಪ್ರತ್ಯೇಕ ಎರಡು ಕೊಠಡಿಯಲ್ಲಿದ್ದ ಗೋಡ್ರೆಜ್ ಲಾಕ್ ಮುರಿದು ಸೀರೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಳೆದು ಹಾಕಿ ಒಳಗಿದ್ದ ಚಿನ್ನಾಭರಣ ಹಾಗೂ ನಗದು ಕಳವುಗೈದಿದ್ದಾರೆಂದು ವರದಿಯಾಗಿತ್ತು. ತನಿಖಾ ಎಸ್.ಐ. ಸರಸ್ವತಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಸುಳ್ಯ ಎಸ್.ಐ. ಈರಯ್ಯ ದೂಂತೂರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಳವಾಗಿದ್ದ ಚಿನ್ನಾಭರಣವಾದ ಕರಿಮಣಿ, ಚಿನ್ನದ ಸರ ಹಾಗೂ ಎರಡು ಚಿನ್ನದ ಉಂಗುರ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸೀರೆಯ ರಾಶಿಯಲ್ಲಿ ಪತ್ತೆಯಾಗಿದ್ದು, ಐದರಿಂದ ಎಂಟು ಸಾವಿರ ರೂ. ನಗದು ಮಾತ್ರ ಕಳವಾಗಿರುವುದಾಗಿ ತಿಳಿದುಬಂದಿದೆ.
ವಸಂತ ರೈ ಅವರ ಪತ್ನಿ ಶ್ರೀಮತಿ ಪ್ರೇಮ ರೈ ಅವರು ತಮ್ಮ ಚಿನ್ನಾಭರಣವನ್ನು ಗೋಡ್ರೆಜ್ ನ ಒಳಗಡೆ ಸೀರೆಯ ಮಧ್ಯೆ ಇರಿಸಿದ್ದರು. ಕಳ್ಳರು ಗೋಡ್ರೆಜ್ ಲಾಕ್ ಮುರಿದು ಬಟ್ಟೆಗಳನ್ನು ಹೊರಗೆಳೆದು ಹಾಕಿ ದರೋಡೆ ನಡೆಸುವ ಸಂದರ್ಭದಲ್ಲಿ ಚಿನ್ನಾಭರಣ ಬಟ್ಟೆಯ ಜೊತೆಗೆ ನೆಲದಲ್ಲಿ ಬಿದ್ದಿತ್ತೆನ್ನಲಾಗಿದೆ.
ಇದೀಗ ಕಳವಾಗಿದೆ ಎನ್ನಲಾದ ಚಿನ್ನಾಭರಣ ಪತ್ತೆಯಾಗಿದ್ದು, ಮನೆಯ ಇನ್ನೊಂದು ಕೊಠಡಿಯಲ್ಲಿದ್ದ ಗೋಡ್ರೆಜ್ ಒಡೆದ ಕಳ್ಳರು ಐದರಿಂದ ಎಂಟು ಸಾವಿರ ರೂ. ನಗದು ದೋಚಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.