ಸರಕಾರ ತಡೆಹಿಡಿದ ಕಾಮಗಾರಿಯಲ್ಲಿ ಸುಳ್ಯದ 110 ಕೆ.ವಿ. ಸಬ್ ಸ್ಟೇಷನ್ ಸೇರಿದೆ : ಮೆಸ್ಕಾಂ ಇ.ಇ.
110 ಕೆವಿ ವಿದ್ಯುತ್ ಪೂರೈಕೆ ಕಾಮಗಾರಿ ಆಗದ ಬಗ್ಗೆ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ ಮತ್ತು ಈಗಿನ ಸರಕಾರ ಅದಕ್ಕೆ ತಡೆ ನೀಡಿದ ಬಗ್ಗೆ ಅಧಿಕಾರಿಗಳು ಉತ್ತರಿಸಿದ ಘಟನೆ ಇಂದಿನ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ನಡೆಯಿತು.
ಮೆಸ್ಕಾಂ ಜನ ಸಂಪರ್ಕ ಸಭೆಯು ಇಂದು ಸುಳ್ಯ ಮೆಸ್ಕಾಂ ನಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಮಚಂದ್ರ ಎಂ. ಅಧ್ಯಕ್ಷತೆಯಲ್ಲಿ ನಡೆಯಿತು.
110 ಕೆವಿ ವಿದ್ಯುತ್ ಕಾಮಗಾರಿ ನಡೆಯದ ಬಗ್ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ರವರು ಪ್ರಶ್ನಿಸಿದಾಗ ಇ.ಇ.ರವರು ಉತ್ತರಿಸಿ ಹಿಂದಿನ ಸರಕಾರ ಕೊನೆಯ ಅವಧಿಯಲ್ಲಿ ಮಾಡಿದ ಕಾಮಗಾರಿಗಳನ್ನು ಈಗಿನ ಸರಕಾರ ತಡೆಹಿಡಿದಿದೆ. ಸುಳ್ಯ ದ 110 ಕೆವಿ ವಿದ್ಯುತ್ ಕಾಮಗಾರಿಯೂ ಇದರಲ್ಲಿ ಸೇರಿದೆ. ಅದರ ತೆರವು ಕಾರ್ಯದ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಯಬೇಕಿದೆ ಎಂದರು. ಆಗ ಪಿ.ಎಸ್.ರವರು ಮುಂದಿನ ತಿಂಗಳು ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಸುಳ್ಯಕ್ಕೆ ಬರುತ್ತಾರೆ. ಆಗ ಅವರ ಗಮನಕ್ಕೆ ತಂದು ಆದಷ್ಟು ಬೇಗ ಆಗುವಂತೆ ಪ್ರಯತ್ನಿಸುವ ಎಂದರು.
ಉಬರಡ್ಕದ ಅಚ್ಚಿಪಳ್ಳ ಎಂಬಲ್ಲಿ
3-4 ಮನೆಗಳಿಗೆ ವಿದ್ಯುತ್ ಸೌಲಭ್ಯ ಇಲ್ಲ. ಗ್ರಾಮಸಭೆಗಳಲ್ಲಿ ಪ್ರಶ್ನಿಸುತ್ತಿದ್ದಾರೆ ಎಂದು ಪಿ.ಎಸ್. ಗಂಗಾಧರ ಹೇಳಿದಾಗ ಇ.ಇ.ರವರು ಉತ್ತರಿಸಿ ಅದು ಫಾರೆಸ್ಟ್ ಏರಿಯ ಬರುತ್ತದೆ ಹೀಗಾಗಿ ಫಾರೆಸ್ಟ್ ನವರ ಅನುಮತಿಗಾಗಿ ಬರೆದಿದ್ದೇವೆ. ಇಂತಹದ್ದೇ ಆಲೆಟ್ಟಿಯ ಮಾಣಿಮರ್ಧು ಭಾಗದ ಸಮಸ್ಯೆ ಇದೆ. ಇದನ್ನು ಅರಣ್ಯದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಅಜ್ಜಾವರ ಗ್ರಾಮದ ವೆಂಕಟ್ರಮಣ ಪೇರಾಲು ಅತ್ಯಾಡಿ ಎಂಬವರು ಮಾತನಾಡಿ ಪೇರಾಲು ಭಾಗದಲ್ಲಿ ಓವರ್‌ಲೋಡ್ ಸಮಸ್ಯೆ ಇದೆ. ಹಳೆ ಲೈನ್ ಗಳನ್ನು ಬದಲಾಯಿಸಬೇಕು ಎಂದು ಮನವಿ ನೀಡಿದರು. ಈ ಬಗ್ಗೆ ಮನವಿ ಕೊಡಿ ಕ್ರಮಕೈಗೊಳ್ಳುತ್ತೇವೆ ಎಂದು ಇ.ಇ.ರವರು ಉತ್ತರಿಸಿದರು.
ನೆಲ್ಲೂರು ಕೆಮ್ರಾಜೆ ಗ್ರಾಮದ ಸತ್ಯೇಶ್ ಚಂದ್ರೋಡಿಯವರು ಮಾತನಾಡಿ ಬೊಳ್ಳಾಜೆ ಏರಿಯಾದಲ್ಲಿ ಹಳೆಯ ಲೈನ್ ಗಳೇ ಇವೆ. ಈ ಬಗ್ಗೆ ಕಳೆದ ಅದಾಲತ್ ನಲ್ಲಿ ಹೇಳಿದ್ದೇನೆ ಎಂದಾಗ ಬೇರೆ ಬೇರೆ ಕಡೆಗಳ ಮನವಿಗಳು ಇವೆ. ಸಿರಿಯಲ್‌ಪ್ರಕಾರ ಹಳೆಯ ಲೈನ್‌ಗಳನ್ನು ಬದಲಾಯಿಸುತ್ತಿದ್ದೇವೆ ಎಂದು ಇ.ಇ.ರವರು ಉತ್ತರಿಸಿದರು.
ಅಮರ ಮುಡ್ನೂರು ಗ್ರಾಮದ ದಿನೇಶ್ ಎಂಬವರು ಮಾತನಾಡಿ ಲೋ ಪವರ್ ಸಮಸ್ಯೆ ಬಗ್ಗೆ ಮತ್ತು ಹಳೆಯ ಲೈನ್ ಬದಲಾಯಿಸಿ ಈ ಭಾಗದಲ್ಲಿ ವಿದ್ಯುತ್ ಡೆವಲಪ್ ಮಾಡಬೇಕೆಂದು ಕೇಳಿಕೊಂಡರು. ಈ ಬಗ್ಗೆ ಸ್ಪಾಟ್ ವಿಸಿಟ್ ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಉತ್ತರಿಸಿದರು.
ಐವತ್ತೋಕ್ಲು ಗ್ರಾಮದ ಆದರ್ಶ ಎಂಬವರು ಮಾತನಾಡಿ ಕಾಣಿಕೆ ಭಾಗದಲ್ಲಿ ವಿದ್ಯುತ್ ಟಿ.ಸಿ. ಸಮಸ್ಯೆಯ ಬಗ್ಗೆ ಹೇಳಿ ಹೆಚ್ಚುವರಿ ಟಿ.ಸಿ. ಅಳವಡಿಸುವ ಬಗ್ಗೆ ಗಮನ ಸೆಳೆದರು.
ಅಲ್ಲಿ ಹೊಸ ಲೈನ್ ಅಳವಡಿಸಲಾಗಿದೆ. ಬೇರೆ ಟಿ.ಸಿ. ಅಳವಡಿಸಲು ಅಲ್ಲಿಜಾಗದ ಸಮಸ್ಯೆಯೂ ಇದೆ. ಸಮಸ್ಯೆ ನೋಡಿ ಮುಂದೆ ಕ್ರಮಗೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಉತ್ತರಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಎಇಇ ವಸಂತ, ಸುಳ್ಯ ಎಇಇ ಹರೀಶ್, ಹಾಗೂ ಶಾಖಾಧಿಕಾರಿಗಳು, ಗ್ರಾಹಕರು ಉಪಸ್ಥಿತರಿದ್ದರು. ಕಿರಿಯ ಇಂಜಿನಿಯರ್ ಅಭಿಷೇಕ್ ಸ್ವಾಗತಿಸಿ, ವಂದಿಸಿದರು.