ಮುಕ್ಕೂರು : 14 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ, ಸಮ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ

0

ಗೋಪಾಲಕೃಷ್ಣ ಭಟ್ ಮನವಳಿಕೆ, ಜತ್ತಪ್ಪ ಕೆ ಅವರಿಗೆ ಗೌರವಾರ್ಪಣೆ ಹಾಗೂ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು : ಶಾಸಕಿ ಭಾಗೀರಥಿ ಮುರುಳ್ಯ

ಉತ್ತಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ : ಶಾಸಕ ಅಶೋಕ್ ಕುಮಾರ್ ರೈ

ಒಂದು ತಾಸು ಭಕ್ತಿ ಭಾವ ಲೋಕ ಸೃಷ್ಟಿಸಿದ ಕುಣಿತ ಭಜನೆ

ಮುಕ್ಕೂರು : ಸಂಘಟಿತ ಸಮಾಜದ ನಿರ್ಮಾಣದ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಹಬ್ಬ ಹರಿದಿನಗಳು ಸಂದೇಶ ನೀಡುತ್ತಿದೆ. ಹಾಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಸಮಾಜದ ಏಳಿಗೋಸ್ಕರ ನಾವೆಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಸೆ.19 ರಂದು 14 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸಮ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಕ್ಕೂರು ಶಾಲೆ, ಪರಿಸರದ ಜತೆಗೆ ತನ್ನ ಒಡನಾಟ ಸ್ಮರಿಸಿದ ಶಾಸಕರು, ಮುಕ್ಕೂರಿನ‌ ಗಣೇಶೋತ್ಸವವು ಹತ್ತಾರು ಸಮಾಜಮುಖಿ ಚಟುವಟಿಕೆಗಳ ಮೂಲಕ ಒಗ್ಗಟ್ಟಿನ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕೇವಲ ಹಣ, ಅಂತಸ್ತಿನಿಂದ ಸಾಧಕರಾಗಲು ಸಾಧ್ಯವಿಲ್ಲ. ಸಮಾಜ ಗೌರವಿಸುವ, ಹೆತ್ತವರನ್ನು ಪ್ರೀತಿಸುವ ವ್ಯಕ್ತಿತ್ವ ಇಲ್ಲದಿದ್ದರೆ ಯಾವ ಹಣ, ಅಂತಸ್ತುಗಳಿಂದ ಗೌರವ ದೊರೆಯಲಾರದು. ಹಾಗಾಗಿ ಹಬ್ಬದ ಸಾರ ಸಂದೇಶ ಅರಿತುಗೊಂಡು ಒಳ್ಳೆಯ ವ್ಯಕ್ತಿಯಾಗಿ ಬದುಕಿದರೆ ಆಗ ಸಮಾಜದಲ್ಲಿ ನಮಗೊಂದು ಗೌರವ ಸಿಗುತ್ತದೆ ಎಂದರು.

ಮುಕ್ಕೂರಿನಲ್ಲಿ ಗಣೇಶೋತ್ಸವ ಸಮಿತಿ ಹಬ್ಬದ ಆಚರಣೆಯು ಜತೆಗೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಪ್ರಶಂನೀಯ ಎಂದ ಶಾಸಕ ಅಶೋಕ್ ರೈ, ಸರಕಾರವು ಹತ್ತಾರು ಯೋಜನೆಗಳ ಮೂಲಕ‌ ಬಡವರು ಸ್ವಾವಲಂಬನೆಯಿಂದ ಬದುಕಲು ಪ್ರೋತ್ಸಾಹ ನೀಡುತ್ತಿದೆ. ನಾನು ಪುತ್ತೂರು ಕ್ಷೇತ್ರದ ಶಾಸಕನಾಗಿದ್ದರೂ, ಸುಳ್ಯದ ಕ್ಷೇತ್ರದ ಜನರಿಗೆ ನನ್ನಿಂದ ಸಾಧ್ಯವಾದ ರೀತಿಯ ಎಲ್ಲ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಮುಕ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಾಮರಸ್ಯದ ಸಮಾಜದ ಸ್ಥಾಪನೆಯೇ ಮುಕ್ಕೂರು ಗಣೇಶೋತ್ಸವದ ಮುಖ್ಯ ಆಶಯ. ಹಾಗಾಗಿ ಜಾತಿ, ಮತ, ಪಕ್ಷದ ಬೇಧಭಾವ ಇಲ್ಲದೆ ಸರ್ವರ ಹಿತಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸುತ್ತಿದ್ದು ಈ ಊರಿನ ಜನರು ಇದಕ್ಕೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದರು.

ಸಾಪ್ಟ್ ವೇರ್ ಎಂಜಿನಿಯರ್ ನರಸಿಂಹ ತೇಜಸ್ವಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ‌ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಸರಕಾರಿ ಹಿ.ಪ್ರಾ.ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ ಅವರು ಗಣೇಶೋತ್ಸವ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.

ಇಬ್ಬರು ಸಾಧಕರಿಗೆ ಸಮ್ಮಾನ
ಈ ಸಂದರ್ಭದಲ್ಲಿ ಸಾಹಿತಿ ಗೋಪಾಲಕೃಷ್ಣ ಭಟ್ ಮನವಳಿಕೆ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಬಂದಿ ಜತ್ತಪ್ಪ ಕೆ ಅವರನ್ನು ಸಮ್ಮಾನಿಸಲಾಯಿತು. ಸಾಹಿತಿ ಅಶ್ವಿನಿ ಕೋಡಿಬೈಲು ಅವರು ಅಭಿನಂದನಾ ಮಾತುಗಳನ್ನಾಡಿದರು. ಅಭಿನಂದನೆ ಸ್ವೀಕರಿಸಿದ ಗೋಪಾಲಕೃಷ್ಣ ಭಟ್ ಮನವಳಿಕೆ ಅವರು ಕೃತಜ್ಞತೆ ಸಲ್ಲಿಸಿದರು.

ಪ್ರತಿಭಾ ಪುರಸ್ಕಾರ ಪ್ರಧಾನ
ಎಸೆಸೆಲ್ಸಿಯಲ್ಲಿ ಪೆರುವಾಜೆ ಗ್ರಾಮದ ಕಾನಾವುಜಾಲು ನಿವಾಸಿ ಹೊನ್ನಪ್ಪ ಗೌಡ ಮತ್ತು ಆಶಾಲತಾ ಅವರ ಪುತ್ರಿ ಸಾನ್ವಿ ಜೆ.ಎಚ್ (95 ಶೇ.) ಬೆಳಂದೂರು ಗ್ರಾಮದ ಕೊಡಂಗೆ ನಿವಾಸಿ ಜಯಂತ ಪೂಜಾರಿ ಹಾಗೂ ರೇವತಿ ಕೆ ಅವರ ಪುತ್ರಿ ರಜತ ಕೆ (91.36 ಶೇ.), ಪೆರುವಾಜೆ ಗ್ರಾಮದ ಅಡ್ಯತಕಂಡ ದಿ.ಪುರುಷೋತ್ತಮ ಗೌಡ ಹಾಗೂ ಲಿಖಿತಾ ಕೆ ಅವರ ಪುತ್ರಿ ಜಸ್ಮಿತಾ ಪಿ.ಎನ್ (91 ಶೇ.) ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ಕುಶಾಲಪ್ಪ ಗೌಡ ಪೆರುವಾಜೆ ಹಾಗೂ ಭಾರತಿ ಇ ಅವರ ಪುತ್ರ ಕೀರ್ತನ್ ಕೆ.ಎನ್..(89.12 ಶೇ.), ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ದಾಮೋದರ ಗೌಡ ಹಾಗೂ ಲೀಲಾವತಿ ಅವರ ಪುತ್ರ ರೋಶನ್ ಎ (84.4‌ ಶೇ.), ಮತ್ತು ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಪೆರುವಾಜೆ ಗ್ರಾಮದ ಬೀರುಸಾಗು‌ ನಿವಾಸಿ ಚಂದ್ರಶೇಖರ ಗೌಡ ಬಿ ಹಾಗೂ ಸುಮಿತ್ರ ಬಿ.ಸಿ ಅವರ ಪುತ್ರಿ ಮನ್ವಿ ಬಿ.ಸಿ.(91.66), ಬೆಳಂದೂರು ಗ್ರಾಮದ ಕೊಡಂಗೆ ನಿವಾಸಿ ಜಯಂತ ಪೂಜಾರಿ ಹಾಗೂ ರೇವತಿ ಕೆ ಅವರ ಪುತ್ರಿ ರಕ್ಷಿತಾ ಕೆ (89.16 ಶೇ.), ಪೆರುವಾಜೆ ಗ್ರಾಮದ ಕೂರೋಡಿ ನಿವಾಸಿ ಉಮೇಶ್ ಕೆಎಂಬಿ ಹಾಗೂ ಇಂದಿರಾ ಅವರ ಪುತ್ರಿ ವೀಕ್ಷಿತಾ ಕೆ (84 ಶೇ.), ಪೆರುವಾಜೆ ಗ್ರಾಮದ ಕಾನಾವು ಹೊಸೊಕ್ಲು ನಿವಾಸಿ ವಿಠಲ ರೈ ಹಾಗೂ ಸುರೇಖಾ ರೈ ಅವರ ಪುತ್ರಿ ಸಿಂಚನಾ ರೈ (83.66 ಶೇ.), ಬೆಳಂದೂರು ಗ್ರಾಮದ ಪಾತಾಜೆ ನಿವಾಸಿ ಸಂಪತ್ ಕುಮಾರ್ ರೈ ಹಾಗೂ ರೋಶನಿ ರೈ ಅವರ ಪುತ್ರಿ ಶಾಕ್ತ ಕೆ (82.ಶೇ.) ಅವರಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು

ಶಾಸಕರಿಗೆ, ಗ್ರಾ.ಪಂ.
ಅಧ್ಯಕ್ಷರಿಗೆ ಗೌರವಾರ್ಪಣೆ

ಶಾಸಕಿ ಭಾಗೀರಥಿ‌ ಮುರುಳ್ಯ, ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಊರವರ ಪರವಾಗಿ ಗೌರವಿಸಲಾಯಿತು. ಪೆರುವಾಜೆ ಗ್ರಾ.ಪಂ.ನ ಅಧ್ಯಕ್ಷರಾಗಿ ಎರಡನೆ ಅವಧಿಗೆ ಆಯ್ಕೆಗೊಂಡ ಜಗನ್ನಾಥ ಪೂಜಾರಿ ಮುಕ್ಕೂರು ಅವರನ್ನು ಗಣೇಶೋತ್ಸವ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ಒಂದು ತಾಸು ಕುಣಿತ ಭಜನೆ ಮಾಡಿದ ಪೆರುವಾಜೆ ಶ್ರೀ ಜಲದುರ್ಗಾ ಕುಣಿತ ಭಜನ ತಂಡವನ್ನು, ಕಾರ್ಯಕ್ರಮದ ವಿವಿಧ ವಿಭಾಗದಲ್ಲಿ ಸ್ವಯಂಸೇವಕರಾಗಿ ದುಡಿದ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ ಉಪಸ್ಥಿತರಿದ್ದರು. ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ಪತ್ರಕರ್ತೆ ಬೃಂದಾ ಪೂಜಾರಿ ಮುಕ್ಕೂರು ನಿರೂಪಿಸಿದರು.

ದೀಪ ಬೆಳಗಿಸಿ ಉದ್ಘಾಟನೆ
ಬೆಳಗ್ಗೆ ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಉ ಅವರು ಶ್ರೀ ದೇವರಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಗಣೇಶೋತ್ಸವದ ಮಹತ್ವದ ಬಗ್ಹೆ ವಿವರಿಸಿದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಶುಭ ಹಾರೈಸಿದರು. ಗ್ರಾ.ಪಂ.ಸದಸ್ಯರಾದ ಚಂದ್ರಾವತಿ ಇಟ್ರಾಡಿ,ಗುಲಾಬಿ ಬೊಮ್ಮೆಮಾರು, ಮುಕ್ಕೂರು- ಕುಂಡಡ್ಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ ಉಪಸ್ಥಿತರಿದ್ದರು.

ಒಂದು ತಾಸು ಕುಣಿತ ಭಜನೆ
ಪೆರುವಾಜೆ ಶ್ರೀ ಜಲದುರ್ಗಾ ಕುಣಿತ ಭಜನ ತಂಡದ 30 ಕ್ಕೂ ವಿದ್ಯಾರ್ಥಿಗಳಿಂದ ಒಂದು ತಾಸು ಕುಣಿತ ಭಜನೆ ನಡೆಯಿತು. ಭಕ್ತಿ, ಭಾವದಿಂದ ಕೂಡಿದ ಭಜನೆ ಅಪೂರ್ವ ರೀತಿಯಲ್ಲಿ ಸಂಪನ್ನಗೊಂಡಿತ್ತು.

ವಿವಿಧ ಸ್ಪರ್ಧೆಗಳು
ಇಡೀ ದಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪ.ಪೂ.ಕಾಲೇಜು, ಪದವಿ ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಸಂಜೆ ಗಣ್ಯರು ಬಹುಮಾನ ವಿತರಿಸಿದರು. ಮಧ್ಯಾಹ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಿಂದ ನೀಡಿದ ಅನ್ನಪ್ರಸಾದ ವಿತರಿಸಲಾಯಿತು.