ಎಣ್ಮೂರು : ಸಾರ್ವಜನಿಕ ಗಣೇಶೋತ್ಸವ ಆಚರಣೆ

0


ಎಣ್ಮೂರು ಸೀತಾರಾಮಾಂಜನೇಯ ಭಾರತಿ ಭಜನಾ ಮಂದಿರದ ವಠಾರದಲ್ಲಿ ೩೧ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.


ಬೆಳ್ಳಾರೆ ಮಿಥುನ್ ಶೆಣೈ ಧ್ವಜಾರೋಹಣಗೈದರು., ಬಳಿಕ ಗಣಪತಿ ಪ್ರತಿಷ್ಠೆ, ಗಣಪತಿ ಹವನ, ಭಜನಾ ಕಾರ್ಯಕ್ರಮ, ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸೆ. ೨೦ರಂದು ನಡೆದ ಧಾರ್ಮಿಕ ಸಭೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ದಾಮೋದರ ಚೆಕ್ಕಡ್ಕ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಸಾದ್ವಿ ಶ್ರೀ ಶ್ರೀ ಮತಾನಂದಮಯಿ ಧಾರ್ಮಿಕ ಪ್ರವಚನ ನೀಡಿದರು.


ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪುಣ್ಚತ್ತಾರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು, ಸುಳ್ಯ ವಿಧಾನಸಭಾ ಶಾಸಕಿ ಕು. ಭಾಗೀರಥಿ ಮುರುಳ್ಯ, ರಾಜಶೇಖರ್ ಶೃಂಗೇರಿ, ಪ್ರಸನ್ನ ಕೆ, ಬಾಲಕೃಷ್ಣ ಕೆ ಹೇಮಳ, ರಘುನಾಥ ರೈ ಅಲೆಂಗಾರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕಿ ಕು. ಭಾಗಿರಥಿ ಮುರುಳ್ಯರವರನ್ನು ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಶೋಭಾಯಾತ್ರೆ ಎಣ್ಮೂರಿನಿಂದ ನಿಂತಿಕಲ್ಲು ಪೇಟೆಗೆ ಸಾಗಿ ಕಲ್ಲೇರಿ ಹೊಳೆಯಲ್ಲಿ ಜಲ ಸ್ತಂಭನವಾಯಿತು. ನಿಂತಿಕಲ್ಲಿನ ಜಂಕ್ಷನ್‌ನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಹೋದರರಾದ ರೆಕ್ಕಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆ ಮೆರೆದರು. ಬಳಿಕ ಧ್ವಜಾವರೋಹಣ ಕಾರ್ಯಕ್ರಮ ನಡೆಯಿತು.