ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಶಾಖೆ ಸೆಪ್ಟೆಂಬರ್ 28 ರಂದು ಸುಳ್ಯದಲ್ಲಿ ಶುಭಾರಂಭ

0

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಸಂಸ್ಥೆಯಾದ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯು ಸುಳ್ಯದಲ್ಲಿ ತನ್ನ ಶಾಖೆ ತೆರೆಯಲು ನಿರ್ಧರಿಸಿದ್ದು, ಸೆಪ್ಟೆಂಬರ್ 28 ರಂದು ಸುಳ್ಯದ ರಥ ಬೀದಿಯಲ್ಲಿರುವ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.


ಈ ಬಗ್ಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅವರು ಸೆಪ್ಟೆಂಬರ್ 23 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.


ವಿದ್ಯಾಮಾತಾ ಫೌಂಡೇಶನ್ ವತಿಯಿಂದ 2017ರಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಿದ್ದೆವು. ಅದರ ಮುಂದುವರಿಕೆಗಾಗಿ 2018 ರಲ್ಲಿ ಅಕಾಡೆಮಿ ಆರಂಭಿಸಿದೆವು. ಐಎಎಸ್, ಕೆ ಎ ಎಸ್, ಆರ್ಮಿ, ಪಿ ಎಸ್ ಐ ಪಿ ಸಿ, ಬ್ಯಾಂಕಿಂಗ್, ಪಿ ಡಿ ಓ, ಫಾರೆಸ್ಟ್, ರೈಲ್ವೆ, ಎಫ್ ಡಿ ಎ, ಎಸ್ ಡಿ ಎ, ಕೆಪಿಟಿಸಿಎಲ್, ಟಿಇಟಿ, ಕೆ ಸೆಟ್ ಮೊದಲಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕಾರ್ಪೊರೇಟ್ ಕಂಪನಿಗಳ ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಿರುವ ಎಲ್ಲಾ ತರಬೇತಿಯನ್ನು ನೀಡಿ ಅವರು ಉದ್ಯೋಗ ಪಡೆಯುವಂತೆ ಮಾಡುವ ಉದ್ದೇಶದಿಂದ 2018 ರಿಂದ ವಿದ್ಯಾಮಾತಾ ಫೌಂಡೇಶನ್ ಆಶಯದಲ್ಲಿ ವಿದ್ಯಾಮಾತಾ ಅಕಾಡೆಮಿಯನ್ನು ಪುತ್ತೂರಿನಲ್ಲಿ ಆರಂಭಿಸಿದ್ದೇವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯುವಕ ಯುವತಿಯರು ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾಭ್ಯಾಸಕ್ಕೆ ಕೊಡುವಷ್ಟು ಮಹತ್ವವನ್ನು ಸರಕಾರಿ ಕೆಲಸಕ್ಕೆ ಕೊಡುತ್ತಿಲ್ಲ. ಇದು ತಪ್ಪಬೇಕು ಸರಕಾರಿ ಕೆಲಸವನ್ನು ನಮ್ಮವರು ಹೆಚ್ಚು ಹೆಚ್ಚಾಗಿ ಪಡೆಯುವಂತಾಗಬೇಕು. ಅದಕ್ಕಾಗಿ ನಾವು ನಮ್ಮಲ್ಲಿ ತರಬೇತಿ ಪಡೆಯುವ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಸಿಗುವವರೆಗೂ ಎಲ್ಲಾ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತೇವೆ ಎಂದು ಭಾಗ್ಯೇಶ್ ರೈ ಹೇಳಿದರು.


ನಾವು ಆರು ತಿಂಗಳ ಕಾಲ ಆನ್ಲೈನ್ ಮತ್ತು ಆಫ್ಲೈನ್ ತರಗತಿ ಕೊಡುತ್ತೇವೆ ಕಂಪ್ಯೂಟರ್ ತರಗತಿಯನ್ನು ಅವರಿಗೆ ಉಚಿತವಾಗಿ ಕೊಡುತ್ತೇವೆ. ಅಗ್ನಿವೀರ್ ಮತ್ತಿತರ ಪೋಸ್ಟ್ ಗಳಿಗೆ ಹೋಗುವವರಿಗೆ ದೈಹಿಕ ತರಬೇತಿಯನ್ನೂ ಕೊಡುತ್ತೇವೆ. ನಮ್ಮಲ್ಲಿ ತರಬೇತಿ ಪಡೆದ ನೂರಾರು ಜನ ಸರಕಾರಿ ಉದ್ಯೋಗ ಪಡೆದಿದ್ದಾರೆ. ಇತ್ತೀಚೆಗೆ ಅಗ್ನಿವೀರ್ ಗೆ ನಮ್ಮಲ್ಲಿ ತರಬೇತಿ ಪಡೆದ ಆರು ಮಂದಿ ಆಯ್ಕೆಯಾಗಿದ್ದು, ಅವರಲ್ಲಿ ಮೂರು ಮಂದಿ ಸುಳ್ಯದವರು.


ಸುಳ್ಯದಲ್ಲಿ ನಾವು ವಿದ್ಯಾಮಾತಾದ ಶಾಖೆ ತೆರೆಯುವುದರಿಂದ ಮಡಿಕೇರಿ ಕಡೆಯ ಉದ್ಯೋಗಾಕಾಂಕ್ಷಿಗಳಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರ ಮಕ್ಕಳಿಗೆ ಫೀಸ್ ರಿಯಾಯಿತಿ ಮಾಡಲಾಗುವುದು ಎಂದು ಅವರು ಹೇಳಿದರು.


ಸುಳ್ಯದ ಶಾಖೆ ಸೆಪ್ಟೆಂಬರ್ 28ರಂದು ಆರಂಭಗೊಳ್ಳುವುದು. ನವಂಬರ್ ತಿಂಗಳಿನಲ್ಲಿ ನಿವೃತ್ತ ಲೋಕಾಯುಕ್ತ ಜ. ಸಂತೋಷ್ ಹೆಗ್ಡೆಯವರು ಬಂದು ತರಗತಿಗೆ ಚಾಲನೆ ನೀಡುವರು. ಸೆಪ್ಟೆಂಬರ್ 28ರ ಕಾರ್ಯಕ್ರಮದ ಸಂದರ್ಭ ಗಣಹೋಮ ಉದ್ಘಾಟನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಹಾಗೂ ವಿಶ್ವಕಲಾಣಿಕೇತನದವರಿಂದ ನೃತ್ಯಧಾರಾ ಭರತನಾಟ್ಯ ಕಾರ್ಯಕ್ರಮ ನಡೆಯುವುದು ಎಂದರು.


ವಿದ್ಯಾಮಾತಾ ಅಕಾಡೆಮಿಯ ಶಾಖೆ ಸುಳ್ಯಕ್ಕೆ ಬರಲು ಕಾರಣರಾದ ಟಿ ಎ ಪಿ ಸಿ ಎಂ ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆಯವರು ಮಾತನಾಡಿ “ಸುಳ್ಯಕ್ಕೆ ಉತ್ತಮ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ ಅಗತ್ಯವಿತ್ತು. ಅದಕ್ಕಾಗಿ ನಾನು ಭಾಗ್ಯೇಶ್ ರೈ ಅವರನ್ನು ಸಂಪರ್ಕಿಸಿದೆ” ಎಂದು ಹೇಳಿದರು.
ವಿದ್ಯಾಮಾತಾ ಅಕಾಡೆಮಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಾವತಿ ಬಡ್ಡಡ್ಕ ಹಾಗೂ ಅಕಾಡೆಮಿ ಕಾರ್ಯದರ್ಶಿ ಹರ್ಷಿತ ಆಚಾರ್ಯ ಸಂಸ್ಥೆಯ ತರಬೇತಿಯ ವಿಧಾನದ ಬಗ್ಗೆ ವಿವರಿಸಿದರು.