ಪಠ್ಯದ ಜೊತೆ ಹೊರಜಗತ್ತಿನ ಬದುಕನ್ನು ಅರ್ಥೈಸಿಕೊಂಡಾಗ ಬದುಕು ಸಾರ್ಥಕ : ಲೋಕೇಶ್ ಊರುಬೈಲು

0


ಪಠ್ಯದ ಜೊತೆಗೆ ಹೊರಜಗತ್ತನ್ನು ಅರಿತುಕೊಳ್ಳಬೇಕು. ಪುಸ್ತಕದ ಒಳಗೆ ಇರುವುದಕ್ಕಿಂತ ಹೊರಜಗತ್ತಿನಲ್ಲಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಂಡಾಗ ನಮ್ಮ ಜೀವನ ಸಾರ್ಥಕವಾಗಬಹುದು. ಪಠ್ಯದ ಜೊತೆ ಹೊರಜಗತ್ತಿನ ಬದುಕನ್ನು ಅನುಭವಿಸುವಂತಾಗಬೇಕು ಎಂದು ರಂಗಮಯೂರಿ ಕಲಾ ಶಾಲೇಯ ಸಂಚಾಲಕ ಲೋಕೇಶ್ ಊರುಬೈಲ್ ಹೇಳಿದರು.


ಅವರು ಸೆ-೨೯ರಂದು ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆ ಹಾಗೂ ೨೦೨೩-೨೪ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.


ಕಾಲೇಜು ಜೀವನದಲ್ಲಿ ಬೇರೆ ಬೇರೆ ಆಮಿಷಗಳಿಗೆ ಒಳಗಾಗದೆ ತನ್ನ ಸ್ವಂತ ಬುದ್ದಿವಂತಿಕೆಯಿಂದ ಬದುಕಿ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ ಜಯಶ್ರೀ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್‍ಯಕ್ರಮ ಆರಂಭವಾಯಿತು. ಉಪನ್ಯಾಸಕ ಧನರಾಜ್ ಕುಮಾರ್ ಬಿ.ಸಿ ಅತಿಥಿಗಳ ಪರಿಚಯ ಮಾಡಿದರು. ಸಾಂಸ್ಕೃತಿಕ ಸಂಘದ ಸಂಚಾಲಕ ಪುಷ್ಪರಾಜ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಸ್ರೀಮತಿ ಗೀತಾ ವಂದಿಸಿದರು. ಉಪನ್ಯಾಸಕ ಶಿವಾನಂದ ಕಾರ್‍ಯಕ್ರಮ ನಿರೂಪಿಸಿದರು.