ಸರ್ವಧರ್ಮಿಯರು ಧರ್ಮ- ಧರ್ಮವನ್ನು ಪರಸ್ಪರ ಗೌರವಿಸಿದಾಗ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ – ಒಗ್ಗಟ್ಟು ಮತ್ತು ಸೌಹಾರ್ದತೆ ಗೂನಡ್ಕದ ಶಕ್ತಿ: ಯು.ಟಿ. ಖಾದರ್
ಗೂನಡ್ಕದ ಈ ಪ್ರದೇಶ ಸೌಹಾರ್ದತೆ ಹಾಗೂ ಸಾಮರಸ್ಯತೆಗೆ ಹೆಸರುವಾಸಿಯಾಗಿದೆ. ಮೂರೂ ಧರ್ಮದ ಜನರಲ್ಲಿನ ಸೌಹಾರ್ದತೆ ಗೂನಡ್ಕದಲ್ಲಿ ಬಲವಾಗಿ ಬೇರೂರಲ್ಪಟ್ಟಿದೆ. ಸಮಾನತೆಯ ಸಂದೇಶವನ್ನು ಜಿಲ್ಲೆ – ಜಿಲ್ಲೆಗಳಲ್ಲಿ, ಗ್ರಾಮ – ಗ್ರಾಮಗಳಲ್ಲಿ ಪಸರಿಸುವ ಕೆಲಸ ಆಗಬೇಕು. ದೇಶ ಬಲಿಷ್ಠವಾಗಬೇಕಿದ್ದರೆ ಪರಸ್ಪರ ಸೌಹಾರ್ದತೆ ಮುಖ್ಯ.ಸರ್ವಧರ್ಮಿಯರು ಸೇರಿ ಧರ್ಮ – ಧರ್ಮವನ್ನು ಗೌರವಿಸಿದಾಗ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯ. ಒಗ್ಗಟ್ಟು ಮತ್ತು ಸೌಹಾರ್ದತೆ ಗೂನಡ್ಕದ ಶಕ್ತಿ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅವರು ಸಂಪಾಜೆ ಗ್ರಾಮದ ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಮೀಲಾದ್ ಸ್ವಾಗತ ಸಮಿತಿ ವತಿಯಿಂದ ಈದ್ ಮೀಲಾದ್ 2023 ಹಾಗೂ 12ನೇ ವಾರ್ಷಿಕ ಸ್ವಲಾತ್ ಮಜ್ಲಿಸ್ ಪ್ರಯುಕ್ತ ಮೂರು ದಿನಗಳ ಮೀಲಾದ್ ಫೆಸ್ಟ್ ಸರ್ವ ಧರ್ಮಿಯರ ಸ್ನೇಹ ಸಮ್ಮಿಲನ, ಸ್ವಲಾತ್ ಮಜ್ಲೀಸ್ ಕಾರ್ಯಕ್ರಮದಲ್ಲಿ ಸೆ.29ರಂದು ರಾತ್ರಿ ಭಾಗವಹಿಸಿ, ಮಾತನಾಡಿದರು.
ಜಾತ್ಯಾತೀತ ತತ್ವದ ನಿಲುವಿನಡಿಯಲ್ಲಿ ಜಾತಿ – ಧರ್ಮಗಳ ಮೇಲೆ ಪರಸ್ಪರ ಪ್ರೀತಿ -ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ದೇವರ ಮುಂದೆ ಎಲ್ಲಾ ಜಾತಿ -ಧರ್ಮಗಳು ಒಂದೇ ಆಗಿದೆ. ದಿ. ಕೀಲಾರು ಗೋಪಾಲಕೃಷ್ಣಯ್ಯ ಅವರು ಈ ಮಸೀದಿಗೆ ಸ್ಥಳದಾನ ನೀಡಿದ್ದರಿಂದಲೇ ಶ್ಯಾಮ್ ಭಟ್ ಅವರು ಅತ್ಯುನ್ನತ ಹುದ್ದೆಗೆ ಏರಿದರು ಎಂದು ಯು.ಟಿ. ಖಾದರ್ ಹೇಳಿದರು.
ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ಸಖಾಫಿ ದು:ಆ ನೆರವೇರಿಸಿದರು. ರಾಜಾರಾಂ ಕೀಲಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಎಲ್ಲರೂ ಒಂದೇ. ನಾವೆಲ್ಲರೂ ಸರ್ವ ಧರ್ಮಿಯರಾಗಿ ಬಾಳೋಣ ಎಂದು ಶುಭಹಾರೈಸಿದರು.
ದಿ. ಕೀಲಾರು ಗೋಪಾಲಕೃಷ್ಣಯ್ಯ ಅವರು ಮಸೀದಿಗೆ ಸ್ಥಳದಾನ ಮಾಡುವ ಮೂಲಕ ಗೂನಡ್ಕದಲ್ಲಿ ಸೌಹಾರ್ದತೆಯ ಸಂದೇಶ ಸಾರಿದ್ದಾರೆ: ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ
ಮಂಗಳೂರಿನ ಮಸ್ ನವೀ ಗ್ಲೋಬಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಸ್. ಎಂ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಅವರು ಸಂದೇಶ ಭಾಷಣ ಮಾಡಿ ಮಾತನಾಡಿ ” ಸೌಹಾರ್ದ ಸಮೇಳನಗಳು ವೇದಿಕೆಗೆ ಮಾತ್ರ ಸೀಮಿತವಾಗಿಲ್ಲದೆ, ಸರ್ವ ಧರ್ಮಿಯರು ಸೇರಿ ಸ್ನೇಹ ಸಮ್ಮಿಲನದ ಮೂಲಕ ಪ್ರವಾದಿ ಮಹಮ್ಮದ್ ಅವರ ಸಂದೇಶ ಸಾರುವ ಕೆಲಸವನ್ನು ಗೂನಡ್ಕದಲ್ಲಿ ಮಾಡಲಾಗಿದೆ. ಎಲ್ಲರನ್ನೂ ಒಗ್ಗೂಡಿಸಿ, ಸರ್ವ ಧರ್ಮಿಯರನ್ನು ಬರಮಾಡಿಕೊಂಡ ದೇಶ ಭಾರತ. ಜಾತಿ ಮತ ಬೇದವಿಲ್ಲದೆ ಪರಸ್ಪರ ಸ್ಮೇಹ ಸೇತುವೆ ನಿರ್ಮಾಣ ಮಾಡಿದ ಬಹುತ್ವದ ದೇಶ ನಮ್ಮದು. ಲಕ್ಷಾಂತರ ಮಸೀದಿಗಳು ದೇಶದಲ್ಲಿದೆ. ನಮ್ಮ ದೇಶದಲ್ಲಿ ಅನೇಕ ಮಸೀದಿಗೆ ಅಡಿಸ್ಥಳ ಕೊಟ್ಟವರು ಹಿಂದೂಗಳು. ಗೂನಡ್ಕದ ಬದ್ರಿಯಾ ಜುಮ್ಮಾ ಮಸೀದಿಗೂ ಸ್ಥಳದಾನ ನೀಡಿದವರು ದಿ. ಕೀಲಾರು ಗೋಪಾಲಕೃಷ್ಣಯ್ಯನವರು. ಈ ಮೂಲಕ ಸರ್ವ ಧರ್ಮಿಯರು ಸೇರಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಧರ್ಮದಲ್ಲಿ ಬಲವಿಂತವಿಲ್ಲ. ಎಲ್ಲರಲ್ಲೂ ಸೌಹಾರ್ದವಾಗಿ ಬದುಕಲು ಅವಕಾಶ ನೀಡಿ ಎಂದು ಪ್ರವಾದಿ ಮುಹಮ್ಮದ್ ಅವರು ಅನೇಕ ವರ್ಷಗಳ ಹಿಂದೆಯೇ ತಮ್ಮ ಸಂದೇಶದ ಮೂಲಕ ಹೇಳಿದ್ದರು ಎಂದು ಶುಭಹಾರೈಸಿದರು.
ಪ್ರವಾದಿಯವರ ಸಂದೇಶ ಹಾಗೂ ಆದರ್ಶ ಮೌಲ್ಯವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ: ಟಿ.ಪಿ. ರಮೇಶ್
ಸಣ್ಣ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಪ್ರವಾದಿ ಮಹಮ್ಮದರ ಜೀವನ ಸಂದೇಶ ಸಾರುವ ಸಲುವಾಗಿ ಈದ್ ಮಿಲಾದ್ ಆಚರಿಸಲಾಗುತ್ತಿದೆ. ಪ್ರವಾದಿಯವರು ಸೌಹಾರ್ದತೆಯ ಮೂಲಕ ಸಮಾಜಕ್ಕೆ ಸಂದೇಶ ಸಾರಿದವರು. ಅವರ ಸಂದೇಶ ಹಾಗೂ ಆದರ್ಶ ಮೌಲ್ಯವನ್ನು ಮುಂದಿನ ಪೀಳಿಗೆಯ ಜನರು ಮುನ್ನಡೆಸಿಕೊಂಡು ಹೋಗಬೇಕು ಎಂದು ಶುಭಹಾರೈಸಿದರು.
ಪ್ರವಾದಿಯವರ ಜೀವನ ಚರಿತ್ರೆ ಸಮಾಜಕ್ಕೆ ಸಂದೇಶ ಸಾರಿದೆ: ಇನಾಯತ್ ಅಲೀ
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಅಲೀ ಅವರು ಮಾತನಾಡಿ ಪ್ರವಾದಿ ಮಹಮ್ಮದ್ ಅವರು ಸಮಾಜದಲ್ಲಿ ನಾವು ಯಾವ ರೀತಿಯಲ್ಲಿ ಜೀವನ ಸಾಗಿಸಬೇಕು, ಅನ್ಯಧರ್ಮಿಯರ ಜೊತೆಗೆ ಹೇಗೆ ವರ್ತಿಸಬೇಕು., ನಮ್ಮ ತಂದೆ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು., ನೆರೆಕರೆಯವರೊಂದಿಗೆ ಹೇಗೆ ಬದುಕಬೇಕು, ದೈನಂದಿನ ವ್ಯಾಪಾರ – ವ್ಯವಹಾರ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸ್ವಸ್ತವಾಗಿ ಅವರ ಜೀವನ ಚರಿತ್ರೆಯಲ್ಲಿ ಕೊಟ್ಟಿದ್ದಾರೆ. ಆದ್ದರಿಂದ ಪ್ರವಾದಿಗಳ ಜೀವನ ಚರಿತ್ರೆ ಸಮಾಜಕ್ಕೆ ಸಂದೇಶ ಸಾರಿದೆ ಎಂದು ಶುಭಹಾರೈಸಿದರು.
ಸ್ನೇಹ ಸಮ್ಮಿಲನ ಸಮಾಜಕ್ಕೆ ಮಾದರಿ ಕಾರ್ಯಕ್ರಮ: ಎಂ.ಬಿ.ಸದಾಶಿವ
ಎಂ.ಬಿ. ಸದಾಶಿವ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಪ್ರವಾದಿಯವರ ಸಂದೇಶ ಹಾಗೂ ಜೀವನ ಮೌಲ್ಯವನ್ನು ಈದ್ ಮಿಲಾದ್ ಮೂಲಕ ಆಚರಿಸಲಾಗುತ್ತಿದ್ದು, ಗೂನಡ್ಕದಲ್ಲಿ ಸರ್ವಧರ್ಮಿಯರು ಒಗ್ಗೂಡಿ ಸೌಹಾರ್ದತೆ ಸಾರುವ ಕಾರ್ಯಕ್ರಮ ಮಾಡಲಾಗಿದೆ. ಪ್ರವಾದಿಯವರ ಸಂದೇಶದಂತೆ ಮಕ್ಕಳಿಗೆ ಜಾತ್ಯಾತೀತ ಮೌಲ್ಯದ ಮೂಲಕ ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತಿದೆ. ನಾಯಕತ್ವದ ಗುಣಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಮಾಡುವುದು ಸ್ಥಳೀಯ ನಾಯಕರ ಕರ್ತವ್ಯವಾಗಿದೆ. ಗೂನಡ್ಕದ ಸ್ನೇಹ ಸಮ್ಮಿಲನ ಸಮಾಜಕ್ಕೆ ಮಾದರಿ
ಎಂದು ಶುಭಹಾರೈಸಿದರು.
ಸಾಮಾಜಿಕ ಸಾಮರಸ್ಯಕ್ಕೆ ಒತ್ತು ಕೊಟ್ಟಾಗ ಸ್ನೇಹ ಸಮ್ಮಿಲನ ಅರ್ಥವತ್ತಾಗುತ್ತದೆ: ಪಿ.ಸಿ. ಜಯರಾಮ
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಮಾತನಾಡಿ ‘ಭಾರತವು ಎಲ್ಲಾ ಜಾತಿ, ಧರ್ಮಕ್ಕೆ ಸೇರಿದ ಸರ್ವಧರ್ಮದ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ವಿವಿಧ ಜಾತಿಯ ಜನರಿದ್ದು, ಸರ್ವ ಧರ್ಮಿಯರು ಸೇರಿ ಇಂತಹ ಕಾರ್ಯಕ್ರಮ ನಡೆಸಿ, ಸಾಮಾಜಿಕ ಸಾಮರಸ್ಯಕ್ಕೆ ಒತ್ತು ಕೊಟ್ಟಾಗ ಇಂತಹ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ಅರ್ಥವತ್ತಾಗುತ್ತದೆ’ ಎಂದು ಶುಭಹಾರೈಸಿದರು.
ಸ್ನೇಹ ಸಮ್ಮಿಲನ ವೇದಿಕೆಗೆ ಸೀಮಿತವಾಗಿರದೆ ಬಾಂಧವ್ಯಕ್ಕೆ ಕಾರಣವಾಗಿದೆ: ಸೋಮಶೇಖರ ಕೊಯಿಂಗಾಜೆ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಮಾತನಾಡಿ ಹಿಂದೂ, ಕ್ರೈಸ್ತ ಮುಸ್ಲಿಂ ಎಂಬ ಬೇದ ಭಾವವಿಲ್ಲದೆ ಇಂತಹ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ಕೇವಲ ವೇದಿಕೆಗೆ ಸೀಮಿತವಾಗದೆ ಪರಸ್ಪರ ಬಾಂಧವ್ಯಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ಸಮಾಜಕ್ಕೆ ನೆಮ್ಮದಿಯ ಸಂದೇಶ: ಕೆ.ಪಿ. ಜಾನಿ
ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಅವರು ಮಾತನಾಡಿ ಇವತ್ತು ಜಗತ್ತಿನಲ್ಲಿ ಅನ್ನಕ್ಕೆ ಖರ್ಚು ಮಾಡುವುದಕ್ಕಿಂತ ಜೀವ ತೆಗೆಯುವ ಆಯುಧಗಳಿಗೆ ಜನರು ಖರ್ಚು ಮಾಡುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿ. ಆದರೆ ಇಂತಹ ಸ್ನೇಹ ಸಮ್ಮಿಲನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕಾಗಿದೆ.ಆ ಮೂಲಕ ಸಮಾಜಕ್ಕೆ ನೆಮ್ಮದಿಯ ಸಂದೇಶ ನೀಡಬೇಕಾಗಿದೆ ಎಂದು ಶುಭಹಾರೈಸಿದರು.
ಸನ್ಮಾನ – ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಇನಾಯತ್ ಅಲೀ
ಮುಲ್ಕಿ, ದ.ಕ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗೂನಡ್ಕ ಶ್ರೀ ಶಾರದಾ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಪ್ಪ ಮಾಸ್ತರ್, ದೇಶಸೇವೆ ಮಾಡಿದ ನಿವೃತ್ತ ಸೈನಿಕ ನವೀನ್ ಇರ್ಣೆ, ಜಾತ್ಯಾತೀತ ನಾಯಕ ಎಂ.ಬಿ. ಅವರನ್ನು ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಇಬ್ರಾಹಿಂ ಗೂನಡ್ಕ, ಕಾರ್ಮಿಕ ಮುಖಂಡ ಕೆ.ಪಿ. ಜಾನಿ, ಬೆಂಗಳೂರಿನ ಫಾರ್ಮೆಡ್ ಗ್ರೂಪ್ ಹಿರಿಯ ಉಪಾಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಗಾಂಧಿನಗರ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ.ಎಂ. ಮುಸ್ತಫಾ, ಕೆ.ಪಿ.ಸಿ.ಸಿ. ಸಂಯೋಜಕ ಎಸ್. ಸಂಶುದ್ಧೀನ್, ಉದ್ಯಮಿ ಹಮೀದ್ ಕುತ್ತಮೊಟ್ಟೆ, ಗೂನಡ್ಕ ಶ್ರೀ ಶಾರದಾ ಹಿ.ಪ್ರಾ.ಶಾಲಾ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ಯು.ಎಸ್. ಚಿದಾನಂದ ಗೂನಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಗೂನಡ್ಕ ಶ್ರೀ ಶಾರದಾ ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಜಿ. ಹನುಮಂತಪ್ಪ, ಪಿ.ಎ. ಉಮ್ಮರ್, ಸೂರಜ್ ಹೊಸೂರು, ನವೀನ ಬೈಲೆ ಉಪಸ್ಥಿತರಿದ್ದರು.
ಗೂನಡ್ಕ ಅಲ್ ಅಮೀನ್ ಗೌರವಾಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮೀಲಾದ್ ಸ್ವಾಗತ ಸಮಿತಿಯ ಪಿ.ಕೆ. ಅಬೂಸಾಲಿ ವಂದಿಸಿದರು. ಹಮೀದ್ ಸುಣ್ಣಮೂಲೆ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಮಸೀದಿಯ ಗುರುಗಳಾದ ಹಬೀಬ್ ಹಿಮಮಿ, ಮಸೀದಿಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಹಿಮಾಯತುಲ್ ಇಸ್ಲಾಂ ಜಮಾಅತ್ ಪದಾಧಿಕಾರಿಗಳು, ಮೀಲಾದ್ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಅನ್ನದಾನ ಜರುಗಿತು.