ಯುವಕನಿಂದ ಹಣ ಪಡೆದ ಸುಬ್ರಹ್ಮಣ್ಯ ಪೋಲಿಸರ ವೀಡಿಯೋ ವೈರಲ್

0

ಪೋಲೀಸ್ ಇಲಾಖೆ ಸ್ಪಷ್ಟನೆ

ಕಲ್ಮಕಾರಿನ ಯುವಕನೊಬ್ಬ ತನ್ನಿಂದ ಪೋಲಿಸರು ಹಣ ಪಡೆದು ರಶೀದಿ ಪಡೆದಿರುವ ಬಗ್ಗೆ ವೀಡಿಯೋ ಮಾಡಿ ವೈರಲ್ ಮಾಡಿದ ವಿಚಾರ ಸುದ್ದಿ ಆನ್ ಲೈನ್ ನ್ಯೂಸ್ ನಲ್ಲಿ ವರದಿಯಾಗಿದ್ದು ಇದಕ್ಕೆ ಸುಬ್ರಹ್ಮಣ್ಯ ಪೋಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಬೈಕ್ ಸವಾರ ಕಲ್ಮಕಾರಿನ ನಿಡುಬೆ ಓಂ ಪ್ರಕಾಶ್ ಎಂಬವರಿಗೆ ಸುಬ್ರಹ್ಮಣ್ಯ ಪೋಲೀಸರು ಪೆಟ್ಟಿ ಕೇಸ್ ಹಾಕಿದ್ದರು. ಕೇಸಿಗೆ ಸಂಬಂಧಿಸಿ ದಂಡದ ಹಣ ರೂ.200 ಅನ್ನು ಪೋಲಿಸರಿಗೆ ಸ್ಥಳದಲ್ಲಿ ಹಣ ನೀಡಿದ ಓಂಪ್ರಕಾಶ್ ಬಳಿಕ ಪೋಲಿಸರಲ್ಲಿ ರಶೀದಿ ಕೇಳಿದಾಗ ಪೋಲೀಸರು, ಕೋರ್ಟಿನ ನೋಟೀಸು ನೀಡಿದ್ದು, ನಂತರ ರಶೀದಿ ಸಿಗುವುದಾಗಿ ತಿಳಿಸಿದ್ದಾರೆ.
ಈ ಘಟನೆಯನ್ನು ಗುಪ್ತವಾಗಿ ವೀಡಿಯೋ ಮಾಡಿಕೊಂಡಿದ್ದ ಯುವಕ ನಂತರ ಆ ವೀಡಿಯೋ ವೈರಲ್ ಮಾಡಿದ್ದರೆಂದು ತಿಳಿದುಬಂದಿದೆ. ವೈರಲ್ ಆದ ಈ ವಿಚಾರ ಸುದ್ದಿ
ಆನ್ಲೈನ್ ನ್ಯೂಸಲ್ಲಿ ಬಂದಿತ್ತು.

ಸ್ಪಷ್ಟನೆ ನೀಡಿದ ಪೋಲಿಸರು

ಆದರೆ ಈ ಬಗ್ಗ ಸುದ್ದಿಯನ್ನು ಸಂಪರ್ಕಿಸಿ ಸ್ಪಷ್ಟನೆ ನೀಡಿದ ಪೋಲಿಸರು, ಬೈಕ್ ಚಾಲಕನ ವಿರುದ್ಧ ನಿರ್ಲಕ್ಷ್ಯ ಚಾಲನೆಯ ಕೇಸು ಹಾಕಿರುವುದು ಹೌದು. ಆದರೆ 91/F ಪ್ರಕರಣವಾದುದರಿಂದ ರಸೀದಿಯನ್ನು ಸ್ಥಳದಲ್ಲಿಯೇ ನೀಡಬೇಕೆಂದೇನೂ ಇಲ್ಲ, ಇದು ಪೆಟ್ಟಿ ಕೇಸ್ ಆಗಿದ್ದು ಯುವಕ ನಿಂದ ಪಡೆದ ಹಣವನ್ನು ಕೋರ್ಟ್ ನಲ್ಲಿ ನಾವು ಕಟ್ಟಲು ಇದ್ದು ಬಳಿಕ ಅದರ ರಶೀದಿ ಪಡೆಯಬಹುದಾಗಿದೆ. ಪಾರ್ಟಿಯೇ ಕೋರ್ಟಿಗೆ ಹೋಗಿ ದಂಡನೆ ಹಣ ಕಟ್ಟುವುದು ತಡವಾಗುವುದರಿಂದ ಪೋಲೀಸರು ದಂಡನೆ ಹಣ ಪಡೆದು ಅದನ್ನು ಕೋರ್ಟಿಗೆ ಕಟ್ಟುತ್ತಾರೆ. ಪೆಟ್ಟಿ ಕೇಸ್ ಹಾಕಿದ ದಾಖಲೆಯ ನಕಲುಪ್ರತಿಯನ್ನು ಪಾರ್ಟಿಗೆ ಕೊಡುತ್ತೇವೆ. ಈ ಪ್ರಕರಣದಲ್ಲಿ ಕೂಡ ನಮ್ಮ ಪೋಲೀಸರ ಜತೆಗಿದ್ದ ಹೋಂಗಾರ್ಡ್ ನಕಲು ಪ್ರತಿ ಪಡೆಯಲು ಹೇಳಿದ್ದಾರೆ. ಆದರೆ ವೀಡಿಯೋ ಮಾಡಿದ ಯುವಕ ಪೋಲೀಸರ ಮೇಲೆ ತಪ್ಪು ಅಭಿಪ್ರಾಯ ಬರುವಂತೆ, ತನಗೆ ಬೇಕಾದಷ್ಟು ಮಾತ್ರ ವೀಡಿಯೋವನ್ನು ವೈರಲ್ ಮಾಡಿದ್ದಾರೆ. ಇದರ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ ಈ ಬಗ್ಗೆ ಯಾವುದೇ ಕಾನೂನು ತಜ್ಞರಲ್ಲಿ ವಿಚಾರಿಸಿಕೊಳ್ಳಬಹುದು, ಅಥವಾ ಕಾನೂನು ಮೊರೆ ಹೋಗಬಹುದು. ಕರ್ತವ್ಯದಲ್ಲಿರುವ ಪೋಲಿಸರ ವೀಡಿಯೋ ಹರಿಬಿಟ್ಟು ಪೋಲಿಸರ ನೈತಿಕ ಬಲ ಕುಗ್ಗಿಸುವ ಕೆಲಸ ಇದಾಗಿದೆ ಎಂದು ಎಸ್.ಐ. ಕಾರ್ತಿಕ್ ರವರು ಹೇಳಿದ್ದಾರೆ.