ಅ. 6 ರಂದು ಸುಳ್ಯದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ

0


ವಿಶ್ವ ಹಿಂದೂ ಪರಿಷತ್ ಜನ್ಮ ತಾಳಿ ೬೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಭಜರಂಗದಳದ ನೇತೃತ್ವದಲ್ಲಿ ದೇಶಾದ್ಯಂತ ಶೌರ್ಯ ಜಾಗರಣ ರಥ ಯಾತ್ರೆ ನಡೆಯುತ್ತಿದ್ದು, ಇದರ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಹಾಗೂ ಕಡಬ ಪ್ರಖಂಡದ ನೇತೃತ್ವದಲ್ಲಿ ಸುಳ್ಯದಲ್ಲಿ ಬೃಹತ್ ಶೌರ್ಯ ಹಿಂದೂ ಸಂಗಮ ನಡೆಯಲಿದೆ.


ಶೌರ್ಯ ರಥಯಾತ್ರೆ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.


ಹಿಂದೂ ಧರ್ಮದ ವೈಭವಯುತ ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುವ ಉದ್ಧೇಶದಿಂದ,ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುವ ಉದ್ಧೇಶದಿಂದ ದೇಶದಾದ್ಯಂತ ಈ ರಥಯಾತ್ರೆ ನಡೆಯುತ್ತಿದೆ.ಸೆ.೨೫ರಂದು ಚಿತ್ರದುರ್ಗದಿಂದ ಹೊರಟ ರಥಯಾತ್ರೆಯು ಅ.೬ ಸಂಜೆ ೫ ಗಂಟೆಗೆ ಸಂಪಾಜೆಯ ಮೂಲಕ ಸುಳ್ಯ ಪ್ರವೇಶಿಸಲಿದೆ. ರಥವನ್ನು ಸಂಪಾಜೆಯಲ್ಲಿ ಭವ್ಯವಾಗಿ ಸ್ವಾಗತಿಸಿ ವಾಹನ ಜಾಥಾದ ಮುಖಾಂತರ ಕರೆತಂದು ಸಂಜೆ ೫.೩೦ಕ್ಕೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಈ ಶೌರ್ಯ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಜಿ. ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಲಿದ್ದು, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ,ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸಾದ್, ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್ ಉಪಸ್ಥಿತರಿರಲಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಶೌರ್ಯ ರಥಯಾತ್ರೆ ಸಮಿತಿ ಸಂಚಾಲಕ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ರಜತ್ ಅಡ್ಕಾರ್, ಭಜರಂಗದಳದ ಸಂಚಾಲಕ ಹರಿಪ್ರಸಾದ್ ಎಲಿಮಲೆ, ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ಉಪಸ್ಥಿತರಿದ್ದರು.