ಕಾಂತಮಂಗಲದಲ್ಲಿ ನದಿಗೆ ಕಸ ಎಸೆದವನಿಗೆ ರೂ.10 ಸಾವಿರ ದಂಡ ಹಾಕಿದ ಅಜ್ಜಾವರ ಗ್ರಾ.ಪಂ.

0

ಪಂಚಾಯತ್ ಕಾರ್ಯಕ್ಕೆ ಊರವರ ಪ್ರಶಂಸೆ

ಅಜ್ಜಾವರ ಗ್ರಾಮದ ಕಾಂತಮಂಗಲ ಪಯಸ್ವಿನಿ ನದಿಗೆ ಕಸ ಎಸೆಯಲು ಬಂದ ಯುವಕನನ್ನು ಸ್ಥಳೀಯರು ಹಿಡಿದು ಪೋಲೀಸರಿಗೊಪ್ಪಿಸಿದ ಹಾಗೂ ಕಸ ಎಸೆದವರಿಗೆ ಅಜ್ಜಾವರ ಗ್ರಾ.ಪಂ. 10 ಸಾವಿರ ರೂ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.

ಅ.2 ರಂದು ರಾತ್ರಿ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂತಮಂಗಲದಲ್ಲಿ ಪಯಸ್ವಿನಿ ನದಿಗೆ ಬೈಕ್ ನಲ್ಲಿ ಆರಿಸ್ ಪಾಣಾಜೆ ಎಂಬವರು ಕಸ ತುಂಬಿದ ಕವರೊಂದನ್ನು ಹಿಡಿದು ಬಂದರೆಂದೂ, ಬೈಕ್ ನಿಲ್ಲಿಸಿ ನದಿಗೆ ಎಸೆಯಲೆತ್ನಿಸಿದಾಗ ಆ ದಾರಿಯಾಗಿ ಬಂದ ಮಹೇಶ್ ರೈ ಮೇನಾಲರು ಆತನನ್ನು ಪ್ರಶ್ನಿಸಿದರೆನ್ನಲಾಗಿದೆ. ಬಳಿಕ ವಿಷಯ ತಿಳಿದು‌ ಗುರುದತ್ ನಾಯಕ್, ಮನೋಜ್ ರೈ, ಡಾ. ನಿತೀನ್ ಪ್ರಭು, ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಪಂಚಾಯತ್ ಸಿಬ್ಬಂದಿ ಕಾರ್ತಿಕ್ ಎಲ್ಲರೂ ಬಂದರು. ಬಳಿಕ ಬೈಕ್ ನಲ್ಲಿ ಕಸ ತಂದ ವ್ಯಕ್ತಿಯನ್ನು ಪೋಲೀಸರಿಗೊಪ್ಪಿಸಲಾಯಿತು.

ಠಾಣೆಯಲ್ಲಿ ಬೈಕ್ ಇರಿಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಯಿಸಿ ಕಳುಹಿಸಲಾಯಿತೆಂದು ತಿಳಿದುಬಂದಿದೆ.ಮರುದಿನ ಅಜ್ಜಾವರ ಗ್ರಾ.ಪಂ.ನವರು ಕಸ ಎಸೆದ ವ್ಯಕ್ತಿಯನ್ನು ಗ್ರಾ.ಪಂ. ಗೆ ಕರೆಸಿ, ವಿಚಾರಿಸಿ ರೂ.10 ಸಾವಿರ ದಂಡ ಹಾಕಿದರೆಂದು ತಿಳಿದುಬಂದಿದೆ. ದಂಡದ ರಶೀದಿ ಪಡೆದ ಆ ವ್ಯಕ್ತಿ ಠಾಣೆಗೆ ಕೊಂಡೊಯ್ದು ತನ್ನ ಬೈಕ್‌ ಬಿಡಿಸಿ ಕೊಂಡೊಯ್ದನೆಂದು ತಿಳಿದುಬಂದಿದೆ.

ಕಾಂತಮಂಗಲ ಪ್ರದೇಶದಲ್ಲಿ ಹಲವು ಸಮಯಗಳಿಂದ ಕಸ ಎಸೆಯಲಾಗುತಿತ್ತು. ಕಸ ಎಸೆಯುವವರನ್ನು ಪತ್ತೆ ಮಾಡಬೇಕೆಂದು ಆಗ್ರಹ ಕೇಳಿ ಬಂದಿತ್ತು. ಎಷ್ಟೇ ಪ್ರಯತ್ನ ಪಟ್ಟರು ಕಸ ಎಸೆಯುವವರು ಯಾರೆಂದು ಗೊತ್ತಾಗುತ್ತಿರಲಿಲ್ಲ.

ಅ.2ರಂದು‌ ಕಸ ಎಸೆಯುವಾಗ ಊರವರ ಕೈಗೆ ಕಸ ಎಸೆಯಲು ಬಂದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾರೆ. ಈ ವ್ಯಕ್ತಿ ಗೆ ಗ್ರಾ.ಪಂ. ರೂ.10 ಸಾವಿರ ದಂಡ ವಿಧಿಸಿರುವ ಕ್ರಮವನ್ನು ಊರವರು ಶ್ಲಾಘಿಸಿದ್ದಾರೆ.