ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದ ಬಡ ಕುಟುಂಬದ ಮಹಿಳೆಯ ಮನೆ ದುರಸ್ತಿ ಕಾರ್ಯ

0

ಆಲೆಟ್ಟಿ ಗ್ರಾಮದ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ಸದಸ್ಯರು ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಬಡ ಕುಟುಂಬದ ಮಹಿಳೆಯ ಮನೆಯ ದುರಸ್ತಿ ಕಾರ್ಯವನ್ನು ಶ್ರಮದಾನದ ಮೂಲಕ ನೆರವೇರಿಸುವುದರೊಂದಿಗೆ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ಆಲೆಟ್ಟಿಯ ಪಯಸ್ವಿನಿ ನದಿಯ ಬಳಿಯಲ್ಲಿ ವಾಸವಾಗಿರುವ ಮೀನಾಕ್ಷಿ ಎಂಬವರು ಕೂಲಿ ಕೆಲಸ ಮಾಡಿಕೊಂಡು ತನ್ನ ಇಬ್ಬರು ಸಣ್ಣ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಈಕೆಯ ಪತಿ ಕಳೆದ ಕೆಲ ವರ್ಷದ ಹಿಂದೆ ಅಕಾಲಿಕವಾಗಿ ಅನಾರೋಗ್ಯದಿಂದ ಮೃತ ಪಟ್ಟಿರುತ್ತಾರೆ. ಇದರಿಂದಾಗಿ ಬಡ ಮಹಿಳೆಗೆ ಜೀವನ ಸಾಗಿಸುವುದೇ ಕಷ್ಟಕರವಾಯಿತು. ತನ್ನ ಮಕ್ಕಳೊಂದಿಗೆ ವಾಸವಾಗಿರುವ ಮನೆಯ ಪರಿಸ್ಥಿತಿ ತೀರಾ ದುಸ್ಥಿತಿಗೆ ಬಂದಿತ್ತು.

ಮಳೆಗಾಲದಲ್ಲಿ ನೀರು ಸೋರುತ್ತಿದ್ದು ಮೇಲ್ಚಾವಣಿಯು ದುಸ್ಥಿತಿಗೆ ತಲುಪಿತ್ತು. ಅಸಾಹಯಕ ಸ್ಥಿತಿಯಲ್ಲಿರುವ ಮಹಿಳೆಯ ಪರಿಸ್ಥಿತಿ ಕುರಿತು ಮನಗಂಡ ‌ಸ್ಥಳೀಯ ಜನನಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಮನೆಯನ್ನು ದುರಸ್ತಿ ಪಡಿಸುವ ಬಗ್ಗೆ ಮುಂದಡಿ ಇಟ್ಟರು. ಶ್ರಮದಾನದ ಮೂಲಕ ಮನೆಯ ಮೇಲ್ಛಾವಣಿ ದುರಸ್ತಿಗೆ ಬೇಕಾದ ಕಬ್ಬಿಣದ ಸರಳುಗಳನ್ನು ಅಳವಡಿಸಿ ಸುಮಾರು 20 ರಷ್ಟು ಮಂದಿ ಸದಸ್ಯರು ಸೇರಿಕೊಂಡು ಬೆಳಗ್ಗಿನಿಂದ ಸಂಜೆಯ ತನಕ ಕೆಲಸ ನಿರ್ವಹಿಸಿ ಶ್ರಮದಾನದಿಂದ ಮನೆಯ ದುರಸ್ತಿ ಕಾರ್ಯವನ್ನು ನೆರವೇರಿಸಿದರು. ಸಂಘಟನೆಯ ಮುಖಾಂತರ ಹಲವಾರು ಜನಪರ ಕಾರ್ಯಕ್ರಮ ಹಮ್ಮಿಕೊಂಡು ಹೆಸರುವಾಸಿಯಾಗಿರುವ ಯುವಕರ ತಂಡ ಇದೀಗ ಇಂತಹ ಸಮಾಜಮುಖಿ ಚಿಂತನೆಯ ಕಾರ್ಯಕ್ಕೆ ಮುಂದಾಗಿ ಬಡವರ್ಗದವರಿಗೆ ಸಹಾಯ ಹಸ್ತ ಚಾಚುವುದರೊಂದಿಗೆ ಪ್ರಚಲಿತದಲ್ಲಿದ್ದು ಅಪಾರ ಮೆಚ್ಚುಗೆ ಗಳಿಸಿರುತ್ತಾರೆ. ಅಶಕ್ತ ಬಡವರ ಪಾಲಿನ ಆಶಾದಾಯಕ ಬದುಕಿಗೆ ಪೂರಕವಾಗಿ ಯುವಕರು ಮುಂದಾಗಿರುವುದು ಸಮಾಜದ ಅಭಿವೃದ್ಧಿ ಪರ ಹಿತ ಚಿಂತನೆಯಾಗಿದೆ.