ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಮಾದೇವಿ ಕಳಗಿ ಅವರು ಮಲೆಕುಡಿಯ ದಂಪತಿಗೆ ನಿಂದಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿದ್ದು, ಈ ಆರೋಪವನ್ನು ರಮಾದೇವಿ ಅವರು ನಿರಾಕರಿಸಿದ್ದಾರೆ.
ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನ ಗುಡ್ಡೆಗದ್ದೆ ನಿವಾಸಿಗಳಾದ ಸಿದ್ದಮ್ಮ ಮತ್ತು ಕುಮಾರ ದಂಪತಿಗಳ ಮನೆಯು ಮೂರು ವರ್ಷಗಳ ಹಿಂದೆ ಸಂಭವಿಸಿದ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದಾಗಿ ಬಿದ್ದು ಹೋಗಿದ್ದು, ಸದ್ಯ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬದಲ್ಲಿ ಅನಾರೋಗ್ಯ ಪೀಡಿತರಾಗಿರುವ ಇಬ್ಬರು ವ್ಯಕ್ತಿಗಳಿದ್ದು, ಈ ಬಗ್ಗೆ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ, ಏನೂ ಪ್ರಯೋಜನವಾಗಿಲ್ಲವೆಂದೂ, ತಮ್ಮ ಕೃಷಿ ತೋಟಕ್ಕೆ ನಿರಂತರವಾಗಿ ಆನೆ ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿದ್ದು, ಆನೆ ಕಂದಕ ನಿರ್ಮಿಸಿಕೊಡುವಂತೆ ಅರಣ್ಯ ಇಲಾಖೆಗೆ ಮನವಿ ನೀಡಿದರೂ ಇದುವರೆಗೆ ಏನೂ ಪ್ರಯೋಜನವಾಗಿಲ್ಲವೆಂದೂ, ಅಲ್ಲದೇ ಅನಾದಿಕಾಲದಿಂದಲೂ ನಡೆದಾಡಲು ಉಪಯೋಗಿಸುತ್ತಿದ್ದ ದಾರಿಯಲ್ಲಿ ಮಲೆಕುಡಿಯರು ನಡೆದಾಡಬಾರದೆಂದು ಸ್ಥಳೀಯರಾದ ರಾಘವ ಎಂಬವರು ತಕರಾರು ತೆಗೆದಿದ್ದು, ಆನೆ ದಾಟುವ ಕಾಡುದಾರಿಯ ಮೂಲಕ ಸುತ್ತುಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು , ತಮಗೆ ಮನೆಗೆ ಹೋಗಲು ದಾರಿಯ
ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ನೀಡಿದ್ದರೂ ಸಮಸ್ಯೆಗೆ ಸ್ಪಂದಿಸಿಲ್ಲವೆಂದೂ ಮನೆಯವರು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯವರಿಗೆ ದೂರು ನೀಡಿದ್ದರೆನ್ನಲಾಗಿದೆ.
ಅ.10ರಂದು ಗ್ರಾಮ ಪಂಚಾಯತ್ ನಲ್ಲಿ ನಡೆದ ಸಭೆಗೆ ಬಂದ ಸಿದ್ಧಮ್ಮ ಹಾಗೂ ಕುಮಾರ ದಂಪತಿಗಳು ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಕೇಳಿದಾಗ ಪಂಚಾಯತ್ ಅಧ್ಯಕ್ಷರು ‘ ನೀವು ಸಂಘಟನೆಗಳಿಗೆ ದೂರು ಕೊಟ್ಟಿದ್ದೀರಲ್ಲಾ…ಅವರೊಡನೆಯೇ ಮಾತನಾಡಿ’ ಎಂದು ಹೇಳಿ ನಿಂದಿಸಿರುವುದಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿತ್ತು.
ಯಾರನ್ನೂ ಬೈದು ನಿಂದಿಸಿಲ್ಲ: ಗ್ರಾ.ಪಂ. ಅಧ್ಯಕ್ಷರ ಸ್ಪಷ್ಟನೆ
ಈ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಮಾದೇವಿ ಕಳಗಿಯವರನ್ನು ‘ಸುದ್ದಿ’ ಸಂಪರ್ಕಿಸಿ ವಿಚಾರಿಸಿದಾಗ “ಕೊಯನಾಡಿನ ಗುಡ್ಡೆಗದ್ದೆ ನಿವಾಸಿಯಾದ ಸಿದ್ಧಮ್ಮ ಹಾಗೂ ಕುಮಾರ ಎಂಬ ದಂಪತಿ ಗ್ರಾಮ ಪಂಚಾಯತ್ ನ್ಯಾಯಸಮಿತಿ ಸಭೆಗೆ ಬಂದಿದ್ದರು. ಅವರ ಮನೆ ಸೇರಿದಂತೆ ಆ ಭಾಗದ ಏಳೆಂಟು ಮನೆಗಳಿಗೆ ಹೋಗಲು ಸಮೀಪದ ರಾಘವ ಎಂಬವರ ಮನೆಯ ಪಕ್ಕದಲ್ಲಿ ದಾರಿಯ ವ್ಯವಸ್ಥೆ ಇದೆ. ಇನ್ನೊಂದು ಭಾಗದಲ್ಲಿ ದಾರಿ ನೀಡುವಂತೆ ಕೇಳಿಕೊಂಡಿದ್ದರು. ಅಲ್ಲದೇ ಅವರ ಕೃಷಿ ತೋಟಕ್ಕೆ ನಿರಂತರವಾಗಿ ಆನೆ ದಾಳಿ ನಡೆಸುವುದರಿಂದ ಗ್ರಾ.ಪಂ. ವತಿಯಿಂದ ಅರಣ್ಯ ಇಲಾಖೆಗೆ ಸೂಚಿಸಿದಾಗ ಸೋಲಾರ್ ಬೇಲಿ ನಿರ್ಮಿಸುವುದಾಗಿ ಅರಣ್ಯ ಇಲಾಖೆಯವರು ಹೇಳಿದ್ದಾರೆ.
ಅಲ್ಲದೆ ಸಿದ್ಧಮ್ಮ ಅವರ ಮನೆಯಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಗಳಿರುವುದರಿಂದ ಮಾನವೀಯ ದೃಷ್ಟಿಯಿಂದ ಗ್ರಾ.ಪಂ. ವತಿಯಿಂದ ದಾರಿಯ ವ್ಯವಸ್ಥೆ ಮಾಡಲು ಸೂಚಿಸಿದ್ದೇವೆ. ನಾನು ಯಾರನ್ನೂ ಅವಾಚ್ಯವಾಗಿ ಬೈದು ನಿಂದಿಸಿಲ್ಲ. ಬೈದು ನಿಂದಿಸುವ ಅವಶ್ಯಕತೆಯೂ ನನಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.