ಕೆ.ವಿ.ಜಿ. ಆಯುರ್ವೇದ ಕಾಲೇಜಿನ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಆರಂಭ
ಸುಳ್ಯದ ಲಯನ್ಸ್ ಕ್ಲಬ್, ಪ್ರಣವ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಭಾರತೀಯ ಅಂಚೆ ಇಲಾಖೆ ಇದರ ಸಹಯೋಗದೊಂದಿಗೆ ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ ಮತ್ತು ಅಂಚೆ ಜನ ಸಂಪರ್ಕ ಅಭಿಯಾನ ಹಾಗೂ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಆರೋಗ್ಯ ಸಮಸ್ಯೆ ಬಂದಾಗ ವೈದ್ಯರನ್ನು ಭೇಟಿಯಾಗಿ ಮುಕ್ತವಾಗಿ ಅವರೊಂದಿಗೆ ಚರ್ಚಿಸಿ ಸಮಸ್ಯೆಗೆ ಸಲಹೆ ಪಡೆಯಬೇಕು. ಬದಲಾಗುವ ಕಾಲಘಟ್ಟದಲ್ಲಿ ಈ ರೀತಿಯ ಶಿಬಿರಗಳು ತುಂಬಾ ಉಪಯುಕ್ತ ಎಂದು ಶಿಬಿರವನ್ನು ಆಯೋಜನೆ ಮಾಡಿದ ಸಂಸ್ಥೆಗಳನ್ನು ಶ್ಲಾಘಿಸಿದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಇಲಾಖೆ ನಿರೀಕ್ಷಕ ಪ್ರದೀಪ್ ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದರು.
ಲಯನ್ಸ್ ವಲಯಾಧ್ಯಕ್ಷ ಸಂತೋಷ್ ಜಾಕೆ, ಕೆ.ವಿ.ಜಿ. ಆಯುರ್ವೇದ ಕಾಲೇಜಿನ ವೈದ್ಯರಾದ ಡಾ.ಲಕ್ಷ್ಮೀಶ್, ಪ್ರಧಾನ ಅಂಚೆ ಪಾಲಕ ಮೋಹನ್, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ, ಪ್ರಣವ ಸಹಕಾರಿ ಸಂಘದ ಸುಳ್ಯ ಶಾಖೆ ಮ್ಯಾನೇಜರ್ ರಂಜಿತ್ ಅಡ್ತಲೆ ವೇದಿಕೆಯಲ್ಲಿದ್ದರು.
ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿದರು. ಪ್ರಣವ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ದೊಡ್ಡಣ್ಣ ಬರೆಮೇಲು ವಂದಿಸಿದರು.
ಮಧ್ಯಾಹ್ನ 3 ಗಂಟೆವರೆಗೆ ಆಧಾರ್ ನೋಂದಣಿ, ಆರೋಗ್ಯ ತಪಾಸಣೆ, ಹಾಗೂ ಅಂಚೆ ಇಲಾಖೆಯ ಜನ ಸಂಪರ್ಕ ಅಭಿಯಾನ ನಡೆಯುವುದು.