ಇಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ

0

ಭಾರತದಲ್ಲಿ ಬಡತನದ ಸ್ಥಿತಿಗತಿ ಹೇಗಿದೆ..?

ಪ್ರತಿ ವರ್ಷ ಅಕ್ಟೋಬರ್‌ 17ರಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬಡತನ ತೊಡೆದು ಹಾಕುವುದು, ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಹಾಗಾದ್ರೆ ಭಾರತದಲ್ಲಿ ಬಡತನದ ಸ್ಥಿತಿಗತಿ ಹೇಗಿದೆ..?

ಭಾರತ ದೇಶ 5ಜಿ ಯುಗದ ಹೊಸ್ತಿಲು ದಾಟಿ ಒಳ ಬಂದಿದೆ. ಕೋಟಿ ಕೋಟಿ ಬೆಲೆಬಾಳುವ ಮಿಂಚಿನ ವೇಗದ ಕಾರುಗಳು ರಸ್ತೆಯಲ್ಲಿ’ವ್ರೂಂ’ಗುಟ್ಟುತ್ತಿವೆ. ಹಾಲಿವುಡ್‌ ಸಿನಿಮಾದ ಬಜೆಟ್ಟಿನಲ್ಲಿ ತಯಾರಾದ ವ್ಯೋಮನೌಕೆ ಮಂಗಳನನ್ನು ಮುಟ್ಟಿ ದೇಶದ ಮೀಸೆಯನ್ನೂ ತಿರುವುವಂತೆ ಮಾಡಿದೆ. ಮಿಲಿಯನ್‌ ಡಾಲರ್‌ ಕುಬೇರರ ಪಟ್ಟಿಯಲ್ಲಿ ಭಾರತೀಯ ಸಿರಿವಂತರು ಸತತವಾಗಿ ಟಾಪ್‌ 10ರಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಈ ಎಲ್ಲ ಕೋಟಿ ಕೋಟಿ ಮಾತುಗಳ ನಡುವೆ ದಿನದಲ್ಲಿ ಕನಿಷ್ಠ 100 – 150 ರೂ.ಗೂ ಪರದಾಡುವ 26.97 ಕೋಟಿ ಬಡಪಾಯಿಗಳು ಇದೇ ಭಾರತದಲ್ಲಿಯೇ ಇದ್ದಾರೆ!

ಅಕ್ಟೋಬರ್ 17 ‘ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ’. 1991ರ ಪೂರ್ವದಲ್ಲಿ ಉದಾರೀಕರಣ, ಜಾಗತೀಕರಣಕ್ಕೆ ತೆರೆದುಕೊಳ್ಳದ ಕಾಲಘಟ್ಟದವರೆಗೂ ಭಾರತ ಅಕ್ಷರಶಃ ಬಡ ಜನರಿಂದಲೇ ತುಂಬಿ ತುಳುಕುತ್ತಿತ್ತು. ನಂತರದ ದಿನಗಳಲ್ಲಷ್ಟೇ ಇಲ್ಲಿ ಕೈಗಾರಿಕೆ, ಐಟಿ, ಆಟೋದ್ಯಮದ ಕ್ರಾಂತಿ ನಡೆದು, ಉದ್ಯೋಗಗಳು ಸೃಷ್ಟಿಯಾಗಿ ಬಡತನ ಸಾಕಷ್ಟು ನೀಗಿದೆ. ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಪೆಡಂಭೂತವಾಗಿ ಕಾಡುತ್ತಿರುವ ಈ ಬಡತನವನ್ನು ಹೋಗಲಾಡಿಸಲು ಆಗಾಗ್ಗೆ ಬಂದ ಸರಕಾರಗಳು ಗರೀಬಿ ಹಠಾವೋದಿಂದ ಅಂತ್ಯೋದಯದವರೆಗೂ ಸಹಸ್ರಾರು ಕೋಟಿ ಲೆಕ್ಕದ ಹತ್ತಾರು ಯೋಜನೆಗಳನ್ನು ರೂಪಿಸುತ್ತಲೇ ಇವೆ. ಆದಾಗ್ಯೂ, ಬಡತನವನ್ನು ಈ ದೇಶದಿಂದ ಸಂಪೂರ್ಣವಾಗಿ ಹೊರದಬ್ಬಲು ಸಾಧ್ಯವಾಗಿಲ್ಲ.

ಭಾರತದಲ್ಲಿ ಎಷ್ಟು ಮಂದಿ ಬಡವರಿದ್ದಾರೆ?

ನಿರೀಕ್ಷಿಸಿದ್ದಂತೆ 2021ರಲ್ಲಿ 16ನೇ ಜನಗಣತಿ ನಡೆದಿದ್ದರೆ ಇದರ ನಿಖರ ಲೆಕ್ಕ ಸಿಗುತ್ತಿತ್ತು. 2011ರ ಜನಗಣತಿ ಪ್ರಕಾರ, ದೇಶದ ಶೇ.21 ಮಂದಿ ಬಡತನ ರೇಖೆಗಿಂತ ಕೆಳಗಿಳಿದ್ದಾರೆ. ಕೇಂದ್ರ ಸರಕಾರ ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ಶೇ.26.97 ಮಂದಿ ಬಡತನ ರೇಖೆಗಿಂತ ಕೆಳಗಿಳಿದ್ದಾರೆ. ಭಾರತದಲ್ಲಿನ ಬಡತನದ ಕುರಿತು ವಿಶ್ವ ಬ್ಯಾಂಕ್‌ ಕೂಡ 2019ರಲ್ಲಿ ಸಮೀಕ್ಷೆ ನಡೆಸಿತ್ತು. ಈ ಪ್ರಕಾರ, 2011 ರಿಂದ 2019ರ ನಡುವೆ ಭಾರತದಲ್ಲಿ ಶೇ.12.3 ಪ್ರಮಾಣದಷ್ಟು ಬಡತನ ಇಳಿಕೆ ಕಂಡಿದೆ. 2019ರ ವರದಿಯು ‘ಭಾರತದಲ್ಲಿನ ಬಡತನವು ಶೇ.10.2ಕ್ಕೆ ಇಳಿಕೆಯಾಗಿದೆ’ ಎಂದು ಹೇಳಿದೆ. 2023ರಲ್ಲಿ ನಡೆಸಲು ಉದ್ದೇಶಿಸಿರುವ ಜನಗಣತಿಯಲ್ಲಿ ಈ ಕುರಿತಾದ ಸ್ಪಷ್ಟ ಅಂಕಿ – ಅಂಶಗಳು ಹೊರಬೀಳಲಿವೆ.

ಯಾವ ರಾಜ್ಯದಲ್ಲಿ ಹೆಚ್ಚು ಬಡವರು?

ಸಣ್ಣ ರಾಜ್ಯಗಳಲ್ಲಿ ಜನರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಶ್ವ ಬ್ಯಾಂಕ್‌ ವರದಿ ಹೇಳಿದೆ. ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಶೇ.39.31, ಪುಟಾಣಿ ರಾಜ್ಯ ಜಾರ್ಖಂಡ್‌ ಶೇ.39.96, ಒಡಿಶಾದಲ್ಲಿ ಶೇ.32.59 ಬಡವರು ವಾಸಿಸುತ್ತಿದ್ದಾರೆ. ದೊಡ್ಡ ರಾಜ್ಯಗಳ ಪೈಕಿ ಬಿಹಾರದಲ್ಲಿ ಶೇ.33, ಉತ್ತರ ಪ್ರದೇಶದಲ್ಲಿ ಶೇ.29 ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ.21ರಷ್ಟಿದೆ.

ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ ಆಚರಣೆ ಹಿನ್ನೆಲೆ ಏನು..?

1987ರ ಅಕ್ಟೋಬರ್‌ 17ರಂದು ಪ್ಯಾರಿಸ್‌ನ ಟ್ರೋಕಾಡೆರೊದಲ್ಲಿ ಸೇರಿದ ಒಂದು ಲಕ್ಷಕ್ಕೂ ಅಧಿಕ ಜನ 1948ರ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಗೆ ಸಹಿ ಹಾಕುವ ಮೂಲಕ ಬಡತನವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಲಾಯಿತು ಮತ್ತು ಈ ಹಕ್ಕುಗಳನ್ನು ಗೌರವಿಸಬೇಕೆಂಬ ನಿರ್ಣಯಕ್ಕೆ ಬರಲಾಯಿತು. ತೀವ್ರ ಬಡತನ, ಹಿಂಸೆ ಮತ್ತು ಹಸಿವಿನಿಂದ ನರಳುವವರ ಪರ ಒಗ್ಗೂಡಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ನಂತರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 1992ರ ಡಿಸೆಂಬರ್‌ 22ರಂದು ನಿರ್ಣಯ ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನದ ಆಚರಣೆಗೆ ಚಾಲನೆ ನೀಡಲಾಯಿತು. 1993ರಲ್ಲಿ ಪ್ರಥಮ ಬಾರಿಗೆ ಈ ದಿನವನ್ನು ಆಚರಿಸಲಾಯಿತು.

ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ ಆಚರಣೆ ಉದ್ದೇಶ ಏನು..?

ಜಗತ್ತಿನಲ್ಲಿ ಬಡತನ ಮತ್ತು ದಾರಿದ್ರ್ಯವನ್ನು ಹೋಗಲಾಡಿಸುವುದು, ಅದರಲ್ಲೂ ಮುಂದುವರಿಯುತ್ತಿರುವ ದೇಶಗಳಲ್ಲಿ ಬಡತನವನ್ನು ತೊಡೆದು ಹಾಕುವ ಸಲುವಾಗಿ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಯಾರು ಬಡವರು..?

ದಿನಕ್ಕೆ 150 ರೂ.ಗಿಂತ ಕಡಿಮೆ ಆದಾಯವಿರುವ ವ್ಯಕ್ತಿಯನ್ನು ಭಾರತದಲ್ಲಿ ತೀವ್ರ ಬಡವನೆಂದು ಪರಿಗಣಿಸಲಾಗಿದೆ. ಅಂದಾಜಿನ ಪ್ರಕಾರ ಶೇ. 12.4ರಷ್ಟು ಭಾರತೀಯರು ಅತ್ಯಂತ ಬಡವರೆನ್ನಲಾಗಿದೆ. ಭಾರತದಲ್ಲಿ ಕನಿಷ್ಠ ಆದಾಯ ಮೂಲವನ್ನು ಕೇವಲ ಆಹಾರದ ಅವಶ್ಯಕತೆ ಪರಿಹರಿಸಲು ಪರಿಗಣಿಸಲಾಗುತ್ತದೆ. ಮೂಲಭೂತ ಸೌಲಭ್ಯಗಳಾದ ಆರೋಗ್ಯ, ರಕ್ಷಣೆ, ಶಿಕ್ಷಣದಂಥ ಅಗತ್ಯಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ.

ವಿಶ್ವ ಬ್ಯಾಂಕ್‌ ಅಂಕಿ-ಅಂಶ: ವಿಶ್ವ ಬ್ಯಾಂಕ್‌ನ ಬಡತನ ರೇಖೆಯ ಇತ್ತೀಚಿನ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ 2.15 ಡಾಲರ್‌ (177 ರೂಪಾಯಿ) ಗಿಂತ ಕಡಿಮೆ ಆದಾಯವಿರುವ ವ್ಯಕ್ತಿ ಬಡವ ಎನ್ನಿಸಿಕೊಳ್ಳುತ್ತಾನೆ. ಈ ಮಾನದಂಡದ ಪ್ರಕಾರ ಜಗತ್ತಿನಾದ್ಯಂತ 182 ಮಿಲಿಯನ್‌ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಕಡಿಮೆ, ಮಧ್ಯಮ ಆದಾಯದ ದೇಶಗಳ ಬಡತನ ರೇಖೆಯ ಮಾಪನಕ್ಕೆ 3.65 ಡಾಲರ್‌ (300.83 ರೂ.) ಪರಿಗಣಿಸಲಾಗುತ್ತದೆ. ಇದರನ್ವಯ ಬಡತನದ ಸಂಖ್ಯೆ 828 ಮಿಲಿಯನ್‌ನಷ್ಟು ಏರಿಲಿದೆ ಎಂದು ಅಂದಾಜಿಸಿದೆ. ಕೋವಿಡ್‌ ಸಾಂಕ್ರಾಮಿಕ ಹೆಚ್ಚಿನ ಸಂಖ್ಯೆಯ ಜನರನ್ನು ಜಾಗತಿಕವಾಗಿ ಬಡತನ ರೇಖೆಗೆ ತಳ್ಳಿರುವುದು ಈ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತ ಬಡತನ ರೇಖೆಗಿಂತ ಕೆಳಗಿರುವ 70 ಮಿಲಿಯನ್‌ ಜನರಲ್ಲಿ ಶೇ. 80ರಷ್ಟು ಜನರು ಭಾರತದವರಿದ್ದಾರೆ. 2020ರಲ್ಲಿ ಜಾಗತಿಕ ಮಟ್ಟದಲ್ಲಿ ಕಡು ಬಡತನದ ಮಟ್ಟ ಕಳೆದ ವರ್ಷಕ್ಕಿಂತ ಶೇ.8.4ರಿಂದ ಶೇ. 9.3ಕ್ಕೆ ಏರಿದೆ.