ಅಡ್ಪಂಗಾಯಕ್ಕೆ ನಡೆದುಕೊಂಡೇ ಬಂದ ಮಕ್ಕಳನ್ನು ಮನೆಗೆ ಕರೆದೊಯ್ದ ತಾಯಿ
ಮನೆ ತೊರೆದು ನೆಡೆದುಕೊಂಡೇ ಅಜ್ಜಾವರ ಗ್ರಾಮದ ಅಡ್ಪಂಗಾಯಕ್ಕೆ ಬಂದ ಇಬ್ಬರು ಮಕ್ಕಳು ಮತ್ತೆ ಮನೆ ಸೇರಿದ್ದಾರೆ.
ಪಡುಮಲೆಯ ದಂಪತಿಗಳು ಮಂಡೆಕೋಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಇಬ್ಬರು ಸಣ್ಣ ಮಕ್ಕಳು ನಡೆದುಕೊಂಡೇ ಅಜ್ಜಾವರದ ಅಡ್ಪಂಗಾಯಕ್ಕೆ ಬಂದುಬಸ್ ನಿಲ್ದಾಣದಲ್ಲಿ ಇದ್ದರು. ಮಕ್ಕಳಿಬ್ಬರು ಬಸ್ ನಿಲ್ದಾಣದಲ್ಲಿ ಇರುವುದನ್ನು ಕಂಡ ಸ್ಥಳೀಯರು ವಿಚಾರಿಸಿದಾಗ, ಮನೆಯಲ್ಲಿ ಜಗಳ ಆದ್ದರಿಂದ ನಾವು ಬಂದಿದ್ದೇವೆ. ನಾವು ಈಶ್ವರಮಂಗಲದವರು ಎಂದು ಹೇಳಿದರು. ಈಶ್ವರಮಂಗಲದಿಂದ ಮಕ್ಕಳು ನಡೆದುಕೊಂಡು ಬಂದಿರುವ ವಿಚಾರ ಪ್ರಚಾರ ಪಡೆಯಿತು. ಜನ ಸೇರಿದರು. ಪೋಲೀಸರು ಬಂದರು. ಬಳಿಕ ಮಕ್ಕಳ ಪೋಷಕರ ಪತ್ತೆ ಕಾರ್ಯ ನಡೆದಾಗ, ಈ ಮಕ್ಕಳು ಪೋಷಕರೊಂದಿಗೆ ಮಂಡೆಕೋಲಿನಲ್ಲಿ ಇರುವುದೆಂದೂ ಗೊತ್ತಾಯಿತು. ಕೆಲ ಸಮಯದಲ್ಲಿ ವಿಷಯ ತಿಳಿದು ಮಕ್ಕಳ ತಾಯಿ ಅಡ್ಪಂಗಾಯಕ್ಕೆ ಬಂದರು. ನಾವು ಕೆಲಸಕ್ಕೆ ಹೋಗಿದ್ದು ಮಕ್ಕಳೇ ಮನೆಯಿಂದ ಬಂದಿದ್ದಾರೆ ಎಂದು ತಾಯಿ ಹೇಳಿದರೆಂದೂ, ಬಳಿಕ ಪೋಲೀಸರು ಅವರನ್ನು ರಿಕ್ಷಾದಲ್ಲಿ ಮನೆಗೆ ಕಳುಹಿಸಿ ಕೊಟ್ಟರೆಂದು ತಿಳಿದುಬಂದಿದೆ.