ಇಂದು ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ,ಜಲಸ್ತಂಭನ
ಯುವಶಕ್ತಿ ಸಂಘ ಐವರ್ನಾಡು, ಸಾರ್ವಜನಿಕರ ಸಹಕಾರದೊಂದಿಗೆ 19 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.21 ರಿಂದ ಪ್ರಾರಂಭಗೊಂಡಿದ್ದು
ಅ.22 ರವರೆಗೆ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಐವರ್ನಾಡು ಸ.ಹಿ.ಪ್ರಾ.ಶಾಲಾ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಅ.21 ರಂದು ರಾತ್ರಿ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ವನ್ನು ರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಯುವಶಕ್ತಿ ಸಂಘದವರು ಸಾರ್ವಜನಿಕರ ಸಹಕಸರವನ್ನು ಪಡೆದು ನಿರಂತರವಾಗಿ 19 ವರ್ಷಗಳಿಂದ ಶ್ರೀ ಶಾರದೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಧಾರ್ಮಿಕ ಆಚರಣೆಗಳನ್ನು ಮಾಡುವುದರಿಂದ ಧರ್ಮದ ಉಳಿವು ಸಾಧ್ಯ.ಇಲ್ಲಿ ಎಲ್ಲಾ ಧರ್ಮದವರು ಕೂಡ ಸೇರಿ ವಿಜೃಂಭಣೆಯಿಂದ ಶಾರದೋತ್ಸವ ಕಾರ್ಯಕ್ರಮ ನಡೆಸುವುದು ಶ್ಲಾಘನೀಯ ಎಂದು ಹೇಳಿದರು.
ಕೆವಿಜಿ ಐಟಿಐ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ಭವಾನಿಶಂಕರ ಅಡ್ತಲೆಯವರು ಧಾರ್ಮಿಕ ಉಪನ್ಯಾಸ ನೀಡಿ ಧರ್ಮ ಜಾಗೃತಿಯಿಂದ ಎಲ್ಲರೂ ಒಂದಾಗಿ ಬಾಳಲು ಸಾಧ್ಯ .ಮಕ್ಕಳು ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಐವರ್ನಾಡಿನಲ್ಲಿ ಯುವಶಕ್ತಿ ಸಂಘದ ಮುಖಾಂತರ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಶಾರದೋತ್ಸವ ಕಾರ್ಯಕ್ರಮ ನಡೆಯುತ್ತಾ ಬಂದಿದೆ.ಶಾಂತಿಗಾಗಿ ಕ್ರಾಂತಿ ಎನ್ನುವ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡ ಸಂಘವು ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ ಎಂದು ಹೇಳಿದರು.
ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯ ಯೋಗೀಶ ಕಲ್ಲಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವರ್ಷದಿಂದ ವರ್ಷ ವಿಜೃಂಭಿಸುವ ಶಾರದೋತ್ಸವ ಮುಂದೆ ಬೆಳ್ಳಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದು ಶುಭಹಾರೈಸಿದರು.
ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರ ಪಟ್ಟಿಯನ್ನು ಪ್ರಮೋದ್ ಮುಚ್ಚಿನಡ್ಕ ವಾಚಿಸಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ನೆಕ್ರೆಪ್ಪಾಡಿ ,ಕಾರ್ಯದರ್ಶಿ ರವೀಂದ್ರ ನಾಟಿಕೇರಿ ಉಪಸ್ಥಿತರಿದ್ದರು.
ಐವರ್ನಾಡು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,ನವೀನ್ ಬಾಂಜಿಕೋಡಿ,ಜುನೈದ್ ನಿಡುಬೆ,ಹಿಮಾಲಿ ಮಡ್ತಿಲ ಕಾರ್ಯಕ್ರಮ ನಿರೂಪಿಸಿ,ಜಯಪ್ರಕಾಶ್ ನೆಕ್ರೆಪ್ಪಾಡಿ ವಂದಿಸಿದರು.
ಸನ್ಮಾನ
ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿಯರಾದ ಶ್ರೀಮತಿ ರತ್ನಾವತಿ,ಶ್ರೀಮತಿ ಹರಿಣಾಕ್ಷಿ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿನಿ ಕು.ದ್ವಿತಿ ಎಸ್ ರವರನ್ನು ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಭಾಕಾರ್ಯಕ್ರಮ ನಡೆದ ಬಳಿಕ ವೇದಿಕೆಯಲ್ಲಿ ಹಿತೇಶ್ ಕಾಪಿನಡ್ಜ ಸಾರಥ್ಯದ ಝೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಿಂದ “ಕಾಮಿಡಿ ಟೈಮ್ಸ್” ಕಾರ್ಯಕ್ರಮ ನಡೆಯಿತು.
ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ತಂಡದವರಿಂದ “ಡ್ಯಾನ್ಸ್ ಡ್ಯಾನ್ಸ್” ಕಾರ್ಯಕ್ರಮ, ಯುವಶಕ್ತಿ ಸದಸ್ಯರಿಂದ “ಕಾರ್ಯಕ್ರಮ ವೈವಿಧ್ಯ” ಪೆರುಮಾಳ್ ಲಕ್ಷ್ಮಣ ಬಳಗದವರಿಂದ ಭಕ್ತಿಗೀತೆಗಳು ನಡೆಯಿತು. ಪ್ರಾರಂಭದಲ್ಲಿ ಐವರ್ನಾಡು ಪ್ರಾಥಮಿಕ ಶಾಲೆ, ಅಂಗನವಾಡಿ ಮಕ್ಕಳ ಡ್ಯಾನ್ಸ್ ನಡೆಯಿತು.
ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಮನರಂಜಿಸಿದವು.
ಅಮೋಘ ಸಿಡಿಮದ್ದಿನ ಪ್ರದರ್ಶನವು ನಡೆಯಿತು.
ಅ.21 ರಂದು ಬೆಳಿಗ್ಗೆ ಪುತ್ತಿಲ ಗಿರೀಶ್ ಅಸ್ರಣ್ಣರವರ ನೇತೃತ್ವದಲ್ಲಿ ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಟಾಪನೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.ಬೆಳಿಗ್ಗೆ ಗ್ರಾಮಸ್ಥತರಿಗೆ ವಿವಿಧ ಆಟೋಟ ಸ್ಪರ್ಧೆ ಗಳು ನಡೆಯಿತು.
ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಅ.22 ರಂದು ಬೆಳಿಗ್ಗೆ ಶ್ರೀ ಉಳ್ಳಾಕುಲು ಭಜನಾ ತಂಡ ಇವರಿಂದ ಕುಣಿತ ಭಜನೆ, ಅಕ್ಷರಾಭ್ಯಾಸ,ಆಯುಧ ಪೂಜೆ ನಡೆಯಲಿದೆ.
ಗುರುಗಣಪತಿ ಯಕ್ಷಗಾನ ಮಂಡಳಿ ಧರ್ಮಾರಣ್ಯ ಸುಳ್ಯ ಇವರಿಂದ ಯಕ್ಷಗಾನ ತಾಳಮದ್ದಲೆ ಶ್ರೀ ಕೃಷ್ಣ ರಾಯಭಾರ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಐವರ್ನಾಡಿನ ಮುಖ್ಯ ರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.