ಕವಯತ್ರಿ ಎನ್.ಎಂ. ಪರಿಮಳ ಐವರ್ನಾಡು ಅವರ “ಕುಸುಮಬಾಲೆ” ಕವನಸಂಕಲನ ಬಿಡುಗಡೆ

0


ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಕ್ಷಕಿ, ತಮಿಳು ಕಲಾವಿದರ ವೇದಿಕೆಯ ಉಪಾಧ್ಯಕ್ಷೆ, ಸಂಘಟಕಿ, ಉದಯೋನ್ಮುಖ ಕವಯತ್ರಿ ಶ್ರೀಮತಿ ಎನ್.ಎಂ. ಪರಿಮಳ ಅವರ ಚೊಚ್ಚಲ ಕವನಸಂಕಲನ “ಕುಸುಮಬಾಲೆ” ಅ.29 ರಂದು ಬಿಡುಗಡೆಗೊಂಡಿತು.


ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಮಂಗಳೂರಿನ ಕಥಾಬಿಂದು ಪ್ರಕಾಶನದ ಮೂಲಕ ಮುದ್ರಣಗೊಂಡ “ಕುಸುಮಬಾಲೆ” ಕವನಸಂಕಲನವನ್ನು ಮಂಗಳೂರಿನ ಪುರಭವನದಲ್ಲಿ ನಡೆದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಗಣ್ಯರ ಸಮ್ಮುಖದಲ್ಲಿ ಕವಯತ್ರಿ ಎನ್.ಎಂ. ಪರಿಮಳ ಅವರ ಪತಿ ವಿ.ಸದಾನಂದರವರು ಕೃತಿಯನ್ನು ಬಿಡುಗಡೆಗೊಳಿಸಿದರು.
ಶ್ರೀಮತಿ ಎನ್.ಎಂ. ಪರಿಮಳ ಅವರು

ಐವರ್ನಾಡಿನವರು. ಶಿಕ್ಷಕ ಎನ್.ಮಂಗನ್ ಮಾಸ್ಟರ್ ಹಾಗೂ ದಿವಂಗತ ಶ್ರೀಮತಿ ಪರಮೇಶ್ವರಿ ಅವರ ಪುತ್ರಿ.

ಪರಿಮಳ ಅವರು “ಕುಸುಮಬಾಲೆ” ಕವನ ಸಂಗ್ರಹದಲ್ಲಿ ಸೀಮಿತ 30 ಕವನಗಳಲ್ಲಿ ತಮ್ಮ ಕಾವ್ಯ ಚಾತುರ್ಯವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸಿದ್ದಾರೆ.
ಇವರು ಕಾವ್ಯದ ವಿವಿಧ ಉಪ ಪ್ರಕಾರಗಳಾದ ಚುಟುಕು, ಹನಿಗವನ, ಭಾವಗೀತೆ ಅಲ್ಲದೆ ಗಝಲ್‌ಗಳ ಮೂಲಕ ನಿರಂತರ ಸಾಹಿತ್ಯ ಕೃಷಿ ಮಾಡುತ್ತಿರುವವರು. ಅಂತರ್ಜಾಲ ಆಧಾರಿತ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ತಮ್ಮ ಬರವಣಿಗೆಯ ಕಸುವನ್ನು ಬೆಳೆಸಿಕೊಂಡವರು. ನೂರಾರು ಕವನಗಳು, ಕಿರುಲೇಖನಗಳನ್ನು ಬರೆದಿರುವ ಇವರು ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಂಗೋಲಿ, ಅಭಿನಯ ಗೀತೆ, ನೃತ್ಯ ನಾಟಕ ಪರಿಮಳ ಅವರ ಹವ್ಯಾಸಗಳು. ಈ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಪರಿಚಿತರು.
ಕೆರಿಯರ್ ಗೈಡೆನ್ಸ್ ಸಂಸ್ಥೆಯ ಸದಸ್ಯೆಯಾಗಿ ವೃತ್ತಿ ಮಾರ್ಗದರ್ಶನ ನೀಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಿದ್ದಾರೆ. ಸುಳ್ಯದ ತಮಿಳು ಕಲಾವಿದರ ವೇದಿಕೆಯ ಉಪಾಧ್ಯಕ್ಷೆಯಾಗಿರುವ ಇವರು ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಮುನ್ನೆಲೆಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ.
ಇವರ ಮಾತೃಭಾಷೆ ತಮಿಳು ಆಗಿದ್ದರೂ, ಕನ್ನಡ ಭಾಷೆಯ ಮೇಲಿನ ಅಪಾರ ಒಲವಿನಿಂದ ಕನ್ನಡ ಕಾವ್ಯಲೋಕದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಇವರ ಕಾವ್ಯ-ಕಲೆಯ ಬಗೆಗಿನ ಅಭಿರುಚಿ-ಅಭಿವ್ಯಕ್ತಿಗಳನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ನಾಡಿನ ಸಮಾಚಾರ ಸೇವಾ ಸಂಘ (ರಿ.) ಗೋಕಾಕ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ವತಿಯಿಂದ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ನೀಡಲಾಗುವ ಸಾವಿತ್ರಿಬಾಯಿ ಫುಲೆ ರಾಷ್ಟಿçÃಯ ಪ್ರಶಸ್ತಿ ಇವರ ಮುಕುಟಕ್ಕೊಂದು ಚಿನ್ನದ ಗರಿ. ಮಂಗಳೂರಿನ ರಾಷ್ಟ್ರೀಯ ಭಾವೈಕ್ಯ ಪರಿಷತ್‌ನಿಂದ ‘ಕಾವ್ಯ ಸಿರಿ ಪ್ರಶಸ್ತಿ’, ಚಂದನ ಸಾಹಿತ್ಯ ವೇದಿಕೆಯಿಂದ ‘ಚಂದನಕುಸುಮ’ ಪ್ರಶಸ್ತಿಗಳು ಶ್ರೀಮತಿ ಪರಿಮಳ ಅವರ ಸಾಧನೆಗೆ ಸಂದ ಸಮ್ಮಾನಗಳು.