ನ.15 ರಂಗಮನೆಯಲ್ಲಿ ಚಾರುವಸಂತ ನಾಟಕ

0

ಜೀವನ್ ರಾಂ ನಿರ್ದೇಶನದಲ್ಲಿ ಹಂಪನಾರ ದೇಸೀ ಕಾವ್ಯ ರಂಗಕ್ಕೆ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನ.15 ರಂದು ಸಂಜೆ 6.15 ಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ ಚಾರುವಸಂತ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ನಾಡೋಜ ಹಂಪನಾ ವಿರಚಿತ ದೇಸೀ ಕಾವ್ಯ ಚಾರುವಸಂತವನ್ನು ಡಾ.ನಾ.ದಾ.ಶೆಟ್ಟಿ ಯವರು ರಂಗರೂಪಕ್ಕಿಳಿಸಿದ್ದಾರೆ. ಡಾ.ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ ಈಗಾಗಲೇ ಮೈಸೂರು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡು ಪ್ರಸಿದ್ಧಿ ಪಡೆದಿದೆ.


ಚಾರುವಸಂತ 16 ಭಾಷೆಗಳಿಗೆ ಅನುವಾದಗೊಂಡ ಹಂಪನಾರವರ ಪ್ರಸಿದ್ಧ ಮಹಾಕಾವ್ಯ. ದೇಶದ ಪ್ರಾಚೀನ ಕಥಾ ಪರಂಪರೆಯಲ್ಲಿ ಚಾರುದತ್ತನ ಕಥೆಗೆ ವಿಶಿಷ್ಟ ಸ್ಥಾನವಿದೆ. ಕ್ರಿಸ್ತ ಪೂರ್ವದಿಂದ ತೊಡಗಿ ಜೈನ- ಅಜೈನ ಎಂಬ ಭೇದಭಾವವಿಲ್ಲದೆ ಈ ಕಥೆಯನ್ನು ಪ್ರೇರಣೆಯಾಗಿಟ್ಟುಕೊಂಡು ಹಲವಾರು ಮಂದಿ ಕಾವ್ಯ ರಚಿಸಿದ್ದಾರೆ. ಶೃಂಗಾರ ಮತ್ತು ಸಾಹಸ ಪ್ರಧಾನವಾದ ಈ ಕಥೆಯ ಮೂಲಕ ವರ್ತಮಾನದ ಸವಾಲು ಹಾಗೂ ತಲ್ಲಣಗಳಿಗೆ ಉತ್ತರಿಸುವ ಪ್ರಯತ್ನವನ್ನು ಹಂಪನಾ ಮಾಡಿದ್ದಾರೆ. ಸುಮಾರು ಎರಡೂ ಕಾಲು ಗಂಟೆಗಳ ಪ್ರಯೋಗವನ್ನು ಬಹಳ ಭಿನ್ನವಾಗಿ ರಂಗಕ್ಕಿಳಿಸಲು ಜೀವನ್ ರಾಂ ಸುಳ್ಯ ಶ್ರಮಿಸಿದ್ದಾರೆ.


ಸಮಯಕ್ಕೆ ಸರಿಯಾಗಿ ಆರಂಭವಾಗುವ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.