ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್.ಆರ್.ಕೆ. ಲ್ಯಾಡರ್ಸ್‌ನ ಮ್ಹಾಲಕ ಕೇಶವ ಅಮೈ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಸವಣೂರು ಸೀತಾರಾಮ ರೈಯವರು ಕೇಶವ ಅವರಿಗೆ ‘ವಿದ್ಯಾರಶ್ಮಿ ಸನ್ಮಾನ’ವನ್ನು ನೀಡಿ ಮಾತನಾಡುತ್ತಾ ನಾವು ನಮ್ಮ ದೋಷಗಳನ್ನು ಮೀರಿ ಬೆಳೆಯಬೇಕಾಗಿದೆ. ಒಂದಷ್ಟು ನ್ಯೂನತೆಗಳಿದ್ದ ತಕ್ಷಣ ಧೈರ್ಯಗುಂದದೆ ಹೊಸ ಅವಕಾಶಗಳನ್ನು ಹುಡುಕಿಕೊಂಡು ಬೆಳೆಯಬೇಕು. ದೃಷ್ಟಿ ದೋಷವಿದ್ದರೂ ಛಲ ಬಿಡದೆ ಅದ್ಭುತವಾಗಿ ಸಾಧಿಸಿ ಎಸ್.ಆರ್.ಕೆ. ಲ್ಯಾಡರ್ಸ್ ಎಂಬ ಸಂಸ್ಥೆಯನ್ನು ಕಟ್ಟಿ ಸುಮಾರು ೭೫ ಕುಟುಂಬಗಳಿಗೆ ಅನ್ನ ನೀಡುವಂತಹ ಸತ್ಕಾರ್ಯ ಮಾಡುತ್ತಿರುವ ಕೇಶವ ಅವರು ನಮಗೆಲ್ಲರಿಗೂ ಮಾದರಿ ಎಂದರು.
ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟ ಕೇಶವ ಅಮೈ ಅವರು ರಾತ್ರಿ ಮಲಗುವ ಮುನ್ನ ಐದು ನಿಮಿಷಗಳ ಕಾಲ ದಿನದ ಚಟುವಟಿಕೆಗಳ ಅವಲೋಕನ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳಬೇಕು. ನಾಳೆಗಾಗಿ ಯೋಜನೆ ತಯಾರಿಸಬೇಕು. ಮರುದಿನ ಎದ್ದ ತಕ್ಷಣ ಆ ದಿನದ ಯೋಜನೆಯನ್ನು ಮೆಲುಕು ಹಾಕಿಕೊಂಡು ಸಮಯದ ವೇಳಾಪಟ್ಟಿಯನ್ನು ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದರು. ನಾನೂ ಬೆಳೆಯಬೇಕು, ನನ್ನಂತೆ ಇತರರೂ ಬೆಳೆಯಬೇಕು ಎಂಬ ಧನಾತ್ಮಕ ಧೋರಣೆಯನ್ನು ತಳೆದು ಕಾರ್ಯಾಚರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಅತಿಥಿಯನ್ನು ಪರಿಚಯಿಸಿದರು. ಪಿಯುಸಿ ವಿಭಾಗದ ಸಂಯೋಜಕಿ ಕಸ್ತೂರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಿಫಾಲಿ ಮತ್ತು ತಂಡದವರು ಪ್ರಾರ್ಥಿಸಿ, ವಿದ್ಯಾರ್ಥಿನಿ ಸ್ಪರ್ಷಾ ಜೆ. ಶೆಟ್ಟಿ ಸ್ವಾಗತಿಸಿದರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ನಾರh ವಂದಿಸಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಆಯ್‌ಷತ್ ವಫಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಕೂಟಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.