ಬೆಳಕಿನ ಹಬ್ಬ

0

ತಮವನ್ನು ಕಳೆಯುತ್ತ ಬೆಳಕನ್ನು ಚೆಲ್ಲುತ್ತ
ಮನೆ ಮನವ ಬೆಳಗಿಸಿತು ದೀಪಾವಳಿ
ನೋವನ್ನು ತೊಲಗಿಸುತ ನಗುವನ್ನು ಪಸರಿಸುತ
ಬದುಕೆಲ್ಲ ಸಂತಸದ ಪ್ರಭಾವಳಿ!

ಜಗದಗಲ ತುಂಬಿಹುದು ದ್ವೇಷ ರೋಷದ ಬಿಗುವು
ಅಂಧಕಾರದಿ ಜಗವು ನರಳುತಿಹುದು
ಮನಸು ಮನಸುಗಳಲ್ಲಿ ಪ್ರೀತಿ ಬೆಳಕನು ಚೆಲ್ಲಿ
ಬದುಕ ಸಾರವನಿಲ್ಲಿ ಸಾರುತಿಹುದು!

ಬದುಕಿನ ಗಮ್ಯತೆಗೆ ನಿಷ್ಠೆಯು ಬೇಕು
ಅರಿವಿನ ಪಾಠವನು ಹೇಳುತಿಹುದು
ಸಾಲು ಹಣತೆಗಳಲ್ಲಿ ಕನಸಿನ ಬೆಳಕಿದೆ
ಪ್ರಕೃತಿಯೇ ತಲೆ ಬಾಗಿ ನಮಿಸುತಿಹುದು!

ಮನದೊಳಗೆ ಅಡಗಿರುವ ಶೋಕವೆಲ್ಲವೂ ಕಳೆದು
ಸಂತಸದ ಹಣತೆಯು ಉರಿಯುತಿರಲಿ
ಜಾತಿ ಧರ್ಮಗಳ ಅಂಧತೆಯು ಸರಿದು
ಮಾನವತೆಯಲಿ ಜಗವು ಬೆಳಗುತಿರಲಿ!

ಪ್ರಮೀಳಾ ರಾಜ್(ಭಾವಯಾನಿ )

ಚಿತ್ರ ಕೃಪೆ -ರಶ್ಮಿ ಎಸ್ ಎನ್. ಸುಳ್ಯ