ಬೆಳಕಿನ ಹಬ್ಬ ದೀಪಾವಳಿಯನ್ನು ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ಭಕ್ತಿ ಸಡಗರದಿಂದ ಆಚರಿಸಲಾಯಿತು. ಇಲ್ಲಿನ ಪ್ರತಿ ಮನೆಗಳ ಮುಂದೆ ಆಕಾಶ ಬುಟ್ಟಿಗಳು ರಾರಾಜಿಸುತ್ತಿದ್ದವು. ಸಂಜೆ ಮನೆಯ ಅಂಗಳ, ಜಗುಲಿ, ವೆರಾಂಡಗಳಲ್ಲಿ ದೀಪದ ಹಣತೆಗಳನ್ನು ಇರಿಸಿ ದೀಪದ ಹಬ್ಬವನ್ನು ಆಚರಿಸಿದರು. ಅಲ್ಲದೆ ಪಟಾಕಿಗಳನ್ನು ಸಿಡಿಸಿ ಮಕ್ಕಳು ಮತ್ತು ಹಿರಿಯರು ಸಂಭ್ರಮಪಟ್ಟರು. ಕುಕ್ಕೆಯ ಹೋಟೇಲ್ ಮತ್ತು ಅಂಗಡಿಗಳಲ್ಲಿ ಭಕ್ತಿ ಸಂಭ್ರಮದ ಧನಲಕ್ಷ್ಮೀ ಪೂಜೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಅಂಗಡಿ ಪೂಜೆಗೆ ಭಕ್ತಿ ಸಂಗೀತದ ಮೆರುಗು:
ಕಲಾವಿದರಾದ ಕೆ.ಯಜ್ಞೇಶ್ ಆಚಾರ್ ತಮ್ಮ ಹೋಟೇಲ್‌ನಲ್ಲಿ ನೆರವೇರಿದ ಧನಲಕ್ಷ್ಮೀ ಪೂಜೆಯ ಅಂಗವಾಗಿ ಭಕ್ತಿ ಸಂಗೀತವನ್ನು ಹಮ್ಮಿಕೊಂಡು ಕಲಾಸಕ್ತರಿಗೆ ದೀಪಾವಳಿಗೆ ವಿಶೇಷ ಉಡುಗೊರೆಯನ್ನು ನೀಡಿದರು.ಈ ಮೂಲಕ ತನ್ನ ಕಲಾಸಕ್ತಿಯನ್ನು ಅನಾವರಣಗೊಳಿಸಿದರು. ಇವರಿಗೆ ಹಿಮ್ಮೇಳದಲ್ಲಿ ಧನಶ್ರೀ ಶಬರಾಯ, ಸುಹಾಸ್ ಹೆಬ್ಬಾರ್, ಸುಮನ್ ದೇವಾಡಿಗ ಸಹಕರಿಸಿದರು.ಸುಮಾರು ೩ಗಂಟೆಗಳ ಕಾಲ ವಿವಿಧ ದಾಸರ ಪದಗಳನ್ನೊಳಗೊಂಡ ಭಕ್ತಿ ಸಂಗೀತ ಕಛೇರಿಯು ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.
ಗೋಪೂಜೆ:
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಹೈನುಗಾರಿಕೆಯು ಪ್ರಧಾನವಾಗಿದ್ದು, ಬಲಿಪಾಡ್ಯಮಿಯ ದಿನ ಜನರು ಗೋಪೂಜೆ ನೆರವೇರಿಸಿದರು. ಗೋವು, ಕರು ಮತ್ತು ವೃಷಭಗಳನ್ನು ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಶುಚಿಗೊಳಿಸಿ ಅವುಗಳನ್ನು ಹೂವು, ರಂಗೋಲಿಗಳಿಂದ ಶೃಂಗಾರಗೊಳಿಸಿದರು. ಅಲ್ಲದೆ ಅವುಗಳಿಗೆ ಅರಶಿನ ಕುಂಕುಮ ಲೇಪಿಸಿ, ಸಿಹಿ ತಿಂಡಿ ನೀಡಿದರು. ಆ ಬಳಿಕ ಪೂಜೆಯನ್ನು ಸಮರ್ಪಿಸಿದರು.ತಿಂಡಿ ತಿನಿಸುಗಳನ್ನು ಗೋವುಗಳಿಗೆ ಉಣಬಡಿಸಿದರು.
ಬಲೀಂದ್ರ ಪೂಜೆ:
ಪೂರ್ವ ಶಿಷ್ಟ ಸಂಪ್ರದಾಯದಂತೆ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಬಲೀಂದ್ರ ಕಂಬಗಳನ್ನು ನೆಟ್ಟು ಅದಕ್ಕೆ ಗೋಧೂಳಿ ಲಗ್ನದಲ್ಲಿ ಪೂಜೆ ನೆರವೇರಿಸಿದರು.ಅಲ್ಲದೆ ವಿವಿಧ ದೇಗುಲಗಳಲ್ಲಿ ಕೂಡಾ ಬಲೀಂದ್ರ ಪೂಜೆಯನ್ನು ನಡೆಸಲಾಯಿತು.
ಗ್ರಾಮೀಣ ಭಾಗದಲ್ಲಿ ಸಡಗರದ ದೀಪಾವಳಿ:
ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲದೆ ಇಲ್ಲಿಗೆ ಸಮೀಪದ ಹರಿಹರ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರ, ಗುತ್ತಿಗಾರು, ಮೊಗ್ರ, ಕಮಿಲ, ಬಳ್ಪ, ಏನೆಕಲ್, ಬೀದಿಗುಡ್ಡೆ, ಪಂಜ, ಕಲ್ಮಡ್ಕ,ಕರಿಕ್ಕಳ, ನಿಂತಿಕಲ್, ಎಣ್ಮೂರು, ಅಲೆಕ್ಕಾಡಿ ಮೊದಲಾದ ಗ್ರಾಮೀಣ ಪ್ರದೇಶದಲ್ಲಿ ಜನತೆ ಭಕ್ತಿ ಸಡಗರದಿಂದ ಬೆಳಕಿನ ಹಬ್ಬವನ್ನು ಆಚರಿಸಿದರು. ಪ್ರತಿ ಮನೆಗಳಲ್ಲಿ ಆಕಾಶಬುಟ್ಟಿ ಹಣತೆಗಳ ಸಾಲು ಹಾಗೂ ಪಟಾಕಿಗಳ ಸದ್ದು, ದೀಪಾವಳಿಯ ಹಷವನ್ನು ತೋರ್ಪಡಿಸುತ್ತಿತ್ತು. ಕೆಲವು ಮನೆಗಳಲ್ಲಿ ಬಲೀಂದ್ರ ಕಂಬಗಳನ್ನು ನೆಟ್ಟು ವಿಶೇಷ ಪೂಜೆಗಳನ್ನು ನೆರವೇರಿಸಿದರು. ಅಲ್ಲದೆ ಗೋಪೂಜೆಯನ್ನು ಸಮರ್ಪಿಸಿದರು.