ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಗೋಪೂಜೆ

0

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಆದೇಶದ ಮೇರೆಗೆ ಗೋಪೂಜೆಯನ್ನು ಮಂಗಳವಾರ ವಿಶೇಷವಾಗಿ ಆಚರಿಸಲಾಯಿತು.ಆರಂಭದಲ್ಲಿ ದೇವಳದ ಗೋಶಾಲೆಯಲ್ಲಿದ್ದ ಗೋವುಗಳನ್ನು ಸ್ನಾನ ಮಾಡಿಸಿ ಅವುಗಳನ್ನು ಶ್ರೀ ದೇವಳಕ್ಕೆ ಕರೆತರಲಾಯಿತು.ದೇವಳದಲ್ಲಿ ಗೋಮಾತೆಯನ್ನು ಹೂವಿನಿಂದ ಅಲಂಕರಿಸಿ, ಕುಂಕುಮ ತಿಲಕನ್ನಿಟ್ಟು ಸಿಂಗರಿಸಲಾಯಿತು.ಬಳಿಕ ಶ್ರೀ ದೇವಳದ ಮುಂಭಾಗ ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯರು ಗೋಮಾತೆಗೆ ಅಕ್ಕಿ,ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು, ಗೋಗ್ರಾಸ ನೀಡಿದರು. ಬಳಿಕ ವಿವಿಧ ವೈದಿಕ ವಿದಿ ವಿಧಾನ ನೆರವೇರಿಸಿ ಗೋಮಾತೆಗೆ ಪೂಜೆ ಮಾಡಿದರು.ಬಳಿಕ ಗೋಮಾತೆಯಿಂದ ಆಶೀರ್ವಾದ ಪಡೆದರು.


ಗೋಶಾಲೆಯಲ್ಲಿ ಗೋಪೂಜೆ:
ಬಳಿಕ ಸಂಜೆಯ ವೇಳೆ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ದೇವಳದ ಅವಳಿ ಗೋಶಾಲೆಗಳಲ್ಲಿ ಗೋಪೂಜೆ ನೆರವೇರಿತು.ಆರಂಭದಲ್ಲಿ ಷಣ್ಮುಖ ಪ್ರಸಾದ ಬೋಜನ ಶಾಲೆಯ ಪಕ್ಕದ ಗೋಶಾಲೆಯಲ್ಲಿ ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿನ ಗೋಶಾಲೆಯಲ್ಲಿನ ಗೋವುಗಳಿಗೆ ಪೂಜೆ ನೆರವೇರಿತು. ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯರು ವೈದಿಕ ವಿದಿ ವಿಧಾನಗಳ ಮೂಲಕ ಗೋಪೂಜೆ ನೆರವೇರಿಸಿದರು.
ಆರಂಭದಲ್ಲಿ ಗೋಗ್ರಾಸ ನೀಡಿ ಆರತಿ ಬೆಳಗಿದರು.ಅಲ್ಲದೆ ಗೋವುಗಳಿಗೆ ಅಕ್ಕಿ,ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು, ಗೋಗ್ರಾಸ ನೀಡಿದರು.ಬಳಿಕ ಗೋಮಾತೆಗೆ ಪೂಜೆ ಮಾಡಿದರು. ಬಳಿಕ ಸರ್ವರೂ ಗೋವುಗಳಿಗೆ ಹಣ್ಣುಹಂಪಲು ನೀಡಿದರು.
ಈ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಶೋಭಾ ಗಿರಿಧರ್,ಲೋಕೇಶ್ ಮುಂಡುಕಜೆ, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಶ್ರೀ ದೇವಳದ ಪಾಟಾಳಿ ಲೋಕೇಶ್ ಎ.ಆರ್, ನಿವೃತ್ತ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶ್ರೀ ದೇವಳದ ಸಿಬ್ಬಂದಿಗಳು ಸೇರಿದಂತೆ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಶಾಸಕರ ಉಪಸ್ಥಿತಿ:
ಗೋಪೂಜಾ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದು ಗೋಪೂಜೆಯನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು.ಅಲ್ಲದೆ ಅವಳಿ ಗೋಶಾಲೆಗಳ ಗೋಪೂಜೆಯ ಬಳಿಕ ಅಲ್ಲಿದ್ದ ಗೋವುಗಳಿಗೆ ಹಣ್ಣುಹಂಪಲು ನೀಡಿ ಗೋಮಾತೆಗೆ ನಮಸ್ಕರಿಸಿ ಆಶೀರ್ವಾದ ಪಡೆದರು.