ಚೆಂಬು ಗ್ರಾಮದಲ್ಲಿ ಶಾಸಕ ಪೊನ್ನಣ್ಣರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ‌.ಎಸ್. ಪೊನ್ನಣ್ಣ ಅವರು ನ.15ರಂದು ಚೆಂಬು ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಚೆಂಬು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಅವರು ಗ್ರಾಮದ ದೈವಸ್ಥಾನವಾದ ಶ್ರೀ ಕಿನ್ನಿಮಾಣಿ ಉಳ್ಳಾಕುಳು ದೈವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಕಾಲುಸಂಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕಟ್ಟಪಳ್ಳ ಆಶ್ರಮ ಶಾಲೆಯಿಂದ ಜನತಾ ಕಾಲನಿಗೆ ತೆರಳುವ ರಸ್ತೆಯ ಮೋರಿಗೆ ಕಾಲು ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ತುರ್ತಾಗಿ ಕರೆ ಬಂದ ಹಿನ್ನೆಲೆಯಲ್ಲಿ ದಬ್ಬಡ್ಕ ಮಳೆಹಾನಿ ಪ್ರದೇಶಕ್ಕೆ ಹಾಗೂ ಅರಣ್ಯ ಒತ್ತುವರಿ ಸಮಸ್ಯೆ ಸಭೆಯನ್ನು ಮುಂದೂಡಿ ಬೆಂಗಳೂರಿಗೆ ತೆರಳಿದರೆಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಡಗು ಜಿಲ್ಲಾ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಚೆಂಬು ಗ್ರಾ.ಪಂ. ಕಾಂಗ್ರೆಸ್ ಸದಸ್ಯರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಸದಸ್ಯರುಗಳು, ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು, ಗರುಡ ಯುವಕ ಸಂಘದ ಸದಸ್ಯರುಗಳು, ಗ್ರಾಮಸ್ಥರು, ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.