ಚುನಾವಣೆ ಸಂದರ್ಭದ ಭರವಸೆ ಬಳಿಕ ಹಿಂತಿರುಗಿಯೂ ನೋಡದ ಜನಪ್ರತಿನಿಧಿಗಳು

0

ವಿಧಾನ ಸಭಾ ಚುನಾವಣೆಯ ಬಳಿಕವಾದರೂ ಅನುದಾನ ಬಂದು ಕಾಮಗಾರಿ ಆಗಬಹುದೆಂದು ನಿರೀಕ್ಷೆಯಲ್ಲಿದ್ದ ದುಗ್ಗಲಡ್ಕ- ಕೊಡಿಯಾಲಬೈಲ್-ಸುಳ್ಯ ರಸ್ತೆಯ ಹೋರಾಟ ಸಮಿತಿಯವರು ಇಂದು ಮತ್ತೆ ಸಭೆ ಸೇರಿ ಮುಂದಿನ ದಾರಿಯ ಬಗ್ಗೆ ಚರ್ಚೆ ನಡೆಸಿದರು. ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ಮುಖಾಂತರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಇದರ ಅಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ನಿರಂತರ ಹೋರಾಟವನ್ನು ಆ ಭಾಗದ ನಾಗರಿಕರು ಮಾಡಿ ಕೊಂಡು ಬಂದಿದ್ದಾರೆ. ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಹಲವು ಬಾರಿ ಮನವಿ ಕೊಟ್ಟರೂ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳ್ಳಲಿಲ್ಲ. ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ, ಬಿಕ್ಷಾಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ.ಸಚಿವರಾದ ಎಸ್. ಅಂಗಾರರವರ ಅನುದಾನದಲ್ಲಿ ಎರಡು- ಮೂರು ಕಡೆ ಕಾಂಕ್ರೀಟೀಕರಣಗೊಂಡರೂ ರಸ್ತೆ ಸಂಪೂರ್ಣ ಹಾಳಾಗಿದ್ದುದರಿಂದ ಸಂಚಾರಕ್ಕೆ ತೊಂದರೆ ತಪ್ಪಲಿಲ್ಲ. ಚುನಾವಣೆ ಘೋಷಣೆಗೆ ಒಂದು ವಾರ ಮೊದಲು ಕಾಂಕ್ರೀಟೀಕರಣಕ್ಕೆ ಅನುದಾನ ಇರುವುದಾಗಿ ಹೇಳಿ ಸುಮಾರು 200 ಮೀಟರ್ ರಸ್ತೆಯ ಇದ್ದ ಡಾಮರನ್ನು ತೆಗೆದು ಹಾಕಲಾಗಿದ್ದು, ಅಲ್ಲಿ ಸಂಚಾರ ಮತ್ತಷ್ಟು ದುಸ್ತರಗೊಂಡಿದೆ. ಆ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾದುದರಿಂದ ಚುನಾವಣೆ ಬಹಿಷ್ಕಾರ ಮಾಡುವುದಾಗಿ ನಿರ್ಧರಿಸಿದರಾದರೂ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯರವರ ಭರವಸೆಯ ಮೇರೆಗೆ ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಂಡರು. ಆ ಬಳಿಕ ಯಾವುದೇ ಸಭೆ ನಡೆದಿರಲಿಲ್ಲ.

ಈಗ ರಸ್ತೆ ಮತ್ತಷ್ಟು ದುಸ್ತರವಾಗಿದ್ದು, ವಾಹನಸಂಚಾರ ಸಾಧ್ಯವೇ ಇಲ್ಲದ ಪರಿಸ್ಥಿತಿಗೆ ಬಂದಿದೆ. ಇಂದು ಸಭೆ ಸೇರಿದ ನಾಗರಿಕರು ಮುಂದಿನ ಹಾದಿಯ ಬಗ್ಗೆ ಚರ್ಚೆ ನಡೆಸಿದರು. ಪ್ರತಿಭಟನೆ, ಮನವಿಯ ಬದಲು ಜನಪ್ರತಿನಿಧಿಗಳು, ಪಕ್ಷದ ನಾಯಕರ ಮುಖಾಂತರ ಸಂಬಂಧಿಸಿದ ಇಲಾಖೆಯನ್ನೇ ಸಂಪರ್ಕಿಸಿ ಅನುದಾನ ತರಿಸುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸುರೇಶ್ಚಂದ್ರ ಕಮಿಲ, ಶಂಭಯ್ಯ ಪಾರೆ, ಸಿಎ ಗಣೇಶ್ ಭಟ್, ಡಾ.ಅಶೋಕ್ ಕಮಿಲ, ಸೀತಾನಂದ ಬೇರ್ಪಡ್ಕ, ಮನೋಜ್ ಪಾನತ್ತಿಲ, ಇಬ್ರಾಹಿಂ ನೀರಬಿದಿರೆ, ಮನೋಜ್ ವಕೀಲರು, ಮೋಹನ್ ಬೇರ್ಪಡ್ಕ, ರಾಧಾಕೃಷ್ಣ ಬೇರ್ಪಡ್ಕ,ವೆಂಕಟ್ರಮಣ ಬೇರ್ಪಡ್ಕ, ಈಶ್ವರ ಕುಮಾರ್, ಲಿಂಗಪ್ಪ ಗೌಡ ಮಡಪ್ಪಾಡಿ, ಪುಟ್ಟಣ್ಣ ಗೌಡ , ದೀಕ್ಷಿತ್ ಪಾನತ್ತಿಲ,ಅಪ್ಪಯ್ಯ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.