ಸ್ವೀಪ್ ಹಾಗೂ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಸ್ಪರ್ಧೆಗಳ ಉದ್ಘಾಟನೆ
ಮತದಾನವು ಪ್ರತಿ ಪ್ರಜೆಯ ಅತ್ಯಂತ ಪವಿತ್ರವಾದ ಕರ್ತವ್ಯ.ಪ್ರತಿಯೊಬ್ಬರೂ ಚುನಾವಣೆಯಲ್ಲಿ ಮತಹಾಕುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು.ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಮತದಾನದ ಜಾಗೃತಿ ಮೂಡಿಸಲು ಮತದಾರ ಜಾಗೃತ ಸಂಘವು ಹೆಚ್ಚಿನ ಕಾರ್ಯಗಳನ್ನು ನಡೆಸುತ್ತಿದೆ.ಈ ಕಾರ್ಯಗಳು ವಿದ್ಯಾರ್ಥಿಗಳಿಗೆ ಮತದಾನದ ಶ್ರೇಷ್ಠತೆಯನ್ನು ಅರಿಯಲು ಸಹಕಾರಿಯಾಗಿದೆ.ಯುವ ಜನಾಂಗವು ಮತದಾನವನ್ನು ತಮ್ಮ ಬದುಕಿನ ಶ್ರೇಷ್ಠ ಕರ್ತವ್ಯ ಎಂದು ಭಾವಿಸಬೇಕು. ತನ್ನ ಒಂದು ಮತವು ರಾಷ್ಟ್ರಾಭ್ಯುದಯಕ್ಕೆ ಬೆನ್ನೆಲುಬು ಎಂಬ ಅರಿವು ಯುವ ಜನಾಂಗ ತಿಳಿದುಕೊಳ್ಳಬೇಕು ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.
ಸ್ವೀಪ್,ಇಎಲ್‌ಸಿ ಹಾಗೂ ಮತದಾರರ ಸಾಕ್ಷರತಾ ಸಂಘದ ಆಶ್ರಯದಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಸಹಯೋಗದೊಂದಿಗೆ ಬುಧವಾರ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕಾಲೇಜು ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಎಳವೆಯಲ್ಲಿಯೇ ಮತದಾನದ ಪ್ರಾಮುಖ್ಯತೆಯನ್ನು ಅರಿತು ಇತರರಿಗೆ ಜಾಗೃತಿ ಮೂಡಿಸುವಂತಾಗಬೇಕು.ಯುವ ಪ್ರಜೆಗಳು ಮತದಾನದಿಂದ ತಪ್ಪಿಸಿಕೊಳ್ಳದೆ ಅದು ದೇಶಕ್ಕಾಗಿ ನಾನು ನೀಡಬಹುದಾದ ದೊಡ್ಡ ಕೊಡುಗೆ ಎಂದು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು.
ಕಡಬ ತಾಲೂಕು ಸ್ವೀಪ್‌ನ ನೋಡೆಲ್ ಅಧಿಕಾರಿ ಮತ್ತು ಕಾಲೇಜಿನ ಉಪನ್ಯಾಸಕಿ ಜಯಶ್ರೀ.ವಿ.ದಂಬೆಕೋಡಿ ವೇದಿಕೆಯಲ್ಲಿದ್ದರು.ವಿದ್ಯಾರ್ಥಿನಿ ಸಂಖ್ಯಾ ಸ್ವಾಗತಿಸಿದರು.ಪ್ರಜ್ಞಶ್ರೀ ವಂದಿಸಿದರು.ವಿದ್ಯಾರ್ಥಿ ಗಗನ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಕನ್ನಡ ಪ್ರಬಂಧ ಮತ್ತು ಮತದಾನ ಜಾಗೃತಿಯ ಬಿತ್ತಿಪತ್ರ ರಚನಾ ಸ್ಪರ್ಧೆ ನಡೆಯಿತು.ಕಡಬ ತಾಲೂಕಿನ ಸುಬ್ರಹ್ಮಣ್ಯ, ರಾಮಕುಂಜ, ನೂಜಿಬಾಳ್ತಿಲ, ಸವಣೂರು, ಪಂಜ, ಕಡಬ ಪರಿಸರದ ಕಾಲೇಜುಗಳ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಆಲಂಕಾರಿನ ದುರ್ಗಾಂಬ ಪದವಿಪೂರ್ವ ಕಾಲೇಜಿನ ಮಹಮ್ಮದ್ ಅಫ್‌ವಾಲ್ ಮತ್ತು ಪ್ರಜ್ವಲ್(ಪ್ರಥಮ), ಎಸ್‌ಎಸ್‌ಪಿಯು ಕಾಲೇಜಿನ ಸಿಂಚನಾ.ಬಿ ಮತ್ತು ಸಂಖ್ಯಾ ಜಿ.ಸಿ(ದ್ವಿತೀಯ), ಕಾಣಿಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಅಂಕಿತಾ ಎ.ಕೆ ಮತ್ತು ಪವಿತ್ರಾ.ಕೆ(ತೃತೀಯ) ಸ್ಥಾನ ಪಡೆದರು.ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಚೇತನ್.ಪಿ(ಪ್ರಥಮ), ಎಸ್‌ಎಸ್‌ಪಿಯು ಕಾಲೇಜಿನ ಸಿಂಚನಾ.ಬಿ (ದ್ವಿತೀಯ), ಕುಮಾರಸ್ವಾಮಿ ವಿದ್ಯಾಲಯದ ತೃಪ್ತಿ ಎಂ.ಪಿ(ತೃತೀಯ) ಸ್ಥಾನ ಪಡೆದರು. ಮತದಾನ ಜಾಗೃತಿಯ ಬಿತ್ತಿಪತ್ರ ರಚನಾ ಸ್ಪರ್ಧೆ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಅನನ್ಯಾ ಪಿ.ಬಿ(ಪ್ರಥಮ), ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಶ್ರದ್ಧಾ ಜೆ.ಪಿ (ದ್ವಿತೀಯ), ಎಸ್‌ಎಸ್‌ಪಿಯು ಕಾಲೇಜಿನ ದೀಕ್ಷಾ ಎಂ.ಕೆ (ತೃತೀಯ) ಸ್ಥಾನ ಪಡೆದರು.