ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

0

ಹಿರಿಯ ವಿದ್ಯಾರ್ಥಿ ಸಂಘದ ನೂತನ ಲಾಂಛನ ಅನಾವರಣ

ಪುತ್ತೂರು ತಾಲೂಕಿನ ಕಾವುನಲ್ಲಿ 1998-99ರಲ್ಲಿ ಸ್ಥಾಪನೆಗೊಂಡ ಬುಶ್ರಾ ವಿದ್ಯಾಸಂಸ್ಥೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಇದರ ಪೂರ್ವಭಾವಿಯಾಗಿ ಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ. 2 ರಂದು ಶಾಲಾ ಆವರಣದಲ್ಲಿ ಆಯೋಜಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಗೋಪಾಲ್ ರಾವ್ ಹಾಗೂ ಶಾಲಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀಮತಿ ನಳಿನಿ ರೈ ಯವರು ಹಿರಿಯ ವಿದ್ಯಾರ್ಥಿ ಸಂಘದ ನೂತನ ಲಾಂಛನ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಸಂಚಾಲಕ ಜನಾಬ್ ಅಬ್ದುಲ್ ಅಝೀಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ, ಜಾನಪದ ಗೀತೆ, ಹಾಗೂ ವೀಕ್ಷಿತ್ ಕುತ್ಯಾಳ ಮತ್ತು ಬಳಗದವರಿಂದ ಕೊಳಲು ವಾದನ, ಶರ್ವನ್ ಮತ್ತು ತಂಡದಿಂದ ಹಾಡುಗಾರಿಕೆ ನಡೆಯಿತು.

ಗುರುವಂದನಾ ಕಾರ್ಯಕ್ರಮ

ಈ ಹಿಂದೆ ಶಾಲಾ ಮುಖ್ಯ ಶಿಕ್ಷಕರುಗಳಾಗಿ ಕರ್ತವ್ಯ ನಿರ್ವಹಿಸಿದ್ದ
ಗೋಪಾಲ ರಾವ್, ಪ್ರಕಾಶ್ ರಾಮಕುಂಜ, ಸುನಿತಾ ಜೆ. ರೈ, ರಂಜಿಕ ರೈ ಹಾಗೂ ಶಾಲಾ ಆಡಳಿತಾಧಿಕಾರಿಯಾಗಿದ್ದ ನಳಿನಿ ರೈ ಯವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು.

ಶಾಲಾ ಆಡಳಿತ ನಿರ್ದೇಶಕ ಬದ್ರುದ್ದೀನ್ ಹಾಗೂ ನೂರುದ್ದೀನ್, ಮಣಿಪಾಲ್ ಗ್ರೂಪ್ಸ್ ನ ಎಚ್.ಆರ್ ಮ್ಯಾನೇಜರ್ ಖಲಂದರ್ ಶಾಫಿ, ಶಾಲಾ ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷ ಮಹಮ್ಮದ್, ಶೈಕ್ಷಣಿಕ ಸಲಹೆಗಾರ ಕೃಷ್ಣಪ್ರಸಾದ್, ಮುಖ್ಯ ಶಿಕ್ಷಕಿ ಶ್ರೀಮತಿ ದೀಪಿಕಾ ಚಾಕೋಟೆ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಮೀರ್ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಹೇಮಲತಾ ಕಜೆಗದ್ದೆ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಕಾರ್ತಿಕ್ ಭಟ್, ಅಝೀಮ, ಸಿತಾರ, ರಮ್ಯಾ ಶ್ರೀ ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಎಲ್ಲ ಹಿರಿಯ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾಲಾ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಸಹಕರಿಸಿದರು.