ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ತೀರ್ಮಾನ: ಆಡಳಿತ ಸಮಿತಿ ಅಧ್ಯಕ್ಷ ಎಸ್ ಅಂಗಾರ

0

ಡಿ. 23,24,25 ರಂದು ಕ್ರೀಡಾಕೂಟ, ಜ.12, 13,14 ಸಭಾಕಾರ್ಯಕ್ರಮ,ಶೈಕ್ಷಣಿಕ ವಿಚಾರಾಗೋಷ್ಠಿ,ವಸ್ತು ಪ್ರದರ್ಶನ, ಸಾಧಕರಿಗೆ ಸನ್ಮಾನ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದೀಗ ಐವತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗಿದ್ದು ಇದೇ ಬರುವ ಜನವರಿ 12,13,14 ರಂದು ಮೂರು ದಿನಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ,ಶೈಕ್ಷಣಿಕ ವಿಚಾರಗೋಷ್ಠಿ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು,ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಚೊಕ್ಕಾಡಿ ಎಜುಕೇಶನ್ ಸೊಸೈಟಿ ರಿ. ಕುಕ್ಕುಜಡ್ಕ ಇದರ ಅಧ್ಯಕ್ಷ ಎಸ್ ಅಂಗಾರ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಅವರು’ ಐದು ದಶಕಗಳ ಹಿಂದೆ ಸುಳ್ಯ ತಾಲೂಕಿನ ಅಮರಪಡ್ನೂರು ಮತ್ತು ಅಮರಮೂಡ್ನೂರು ಗ್ರಾಮಗಳು ಜೊತೆ ಸೇರಿ ‘ಚೊಕ್ಕಾಡಿ’ ಎಂದೇ ಪ್ರಸಿದ್ಧಿ ಯಾಗಿರುವ ಊರಿನಲ್ಲಿ ಶಿಕ್ಷಣದ ಮಹತ್ವವನ್ನು ಅರಿತ ಊರ ವಿದ್ಯಾಭಿಮಾನೀ ಮುಂದಾಳುಗಳು ನಮ್ಮೂರಿನಲ್ಲಿಯೇ ಒಂದು ಪ್ರೌಢಶಾಲೆಯನ್ನು ಸ್ಥಾಪಿಸಬೇಕೆಂಬ ಯೋಚನೆಯೊಂದಿಗೆ ಸಂಘಟಿತ ಶಕ್ತಿಯಿಂದ ನಿರ್ಮಾಣವಾದ ಶಾಲೆಯಾಗಿದೆ ನಮ್ಮ ಈ ಶಾಲೆ.
ಅಂದು ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅನುದಾನಿತ ಪ್ರೌಢಶಾಲೆಯೊಂದನ್ನು ಸ್ಥಾಪಿಸಲು ಸರಕಾರದಿಂದ ಅನುಮತಿಯನ್ನು ಪಡೆದುಕೊಂಡು ಪ್ರತಿಯೊಬ್ಬ ಕೃಷಿಕನೂ ತಾನು ಬೇಳೆಸುವ ಬೆಳೆಯ ವಾರ್ಷಿಕ ಉತ್ಪನ್ನದ ಒಟ್ಟು ಮೌಲ್ಯದ ಶೇಕಡಾ ಮೂರರಷ್ಟನ್ನು ಪ್ರೌಢಶಾಲಾ ನಿರ್ಮಾಣಕ್ಕಾಗಿ ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಸಂಚಯಿಸಿಟ್ಟು ವಿವಿಧ ಸಂಘ ಸಂಸ್ಥೆಗಳು,ಪಂಚಾಯತು. ಸ್ಥಳೀಯ ಶಾಲೆ ಎಲ್ಲವೂ ಈ ಮಹೋನ್ನತ ಆಶಯವನ್ನು ಈಡೇರಿಸಲು ಕೈ ಜೋಡಿಸಿ ‘ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ’ ಎಂಬ ಮಾತೃ ಸಂಸ್ಥೆಯನ್ನು ರೂಪಿಸಿಕೊಂಡವು.

ಹಿರಿಯರು ಶಾಲೆಯ ಕುರಿತಾಗಿ ಹೊಂದಿದ್ದ ನಿರೀಕ್ಷೆಗಳು ಹುಸಿಯಾಗಿ ಸಂಸ್ಥೆಯ ಸರ್ವ ಸದಸ್ಯರ ಬೆಂಬಲ, ಗೌರವ ಶಿಕ್ಷಕರ ಹಾಗೂ ನಿಯೋಜಿತ ಶಿಕ್ಷಕರ ಕರ್ತವ್ಯ ಬದ್ಧತೆ, ಹೆತ್ತವರ ಸಹಕಾರ, ಅಧಿಕಾರಿಗೆ ಮಾರ್ಗದರ್ಶನ, ಜನಪ್ರತಿನಿಧಿಗಳ ಸ್ಪಂದನ, ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿ ಇಂದು ರಾಜ್ಯ ಮಟ್ಟದಲ್ಲೂ ಶಾಲೆ ಗುರುತಿಸಲ್ಪಟ್ಟಿದೆ.

ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ನಿರಂತರವಾಗಿ ಸಂಘಟಿಸಿದ್ದು ಮಕ್ಕಳು ರಾಷ್ಟ್ರ ಮಟ್ಟದವರೆಗೆ ಸಾಧನೆ ಮೆರೆದಿದ್ದಾರೆ.
ಸಾವಿರಕ್ಕೂ ಅಧಿಕ ಮಕ್ಕಳು ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಲು ನಮ್ಮ ಈ ಶಾಲೆ ನೆರವಾಗಿದೆ. ಪ್ರಸ್ತುತ ಹಲವಾರು ಸರಕಾರಿ ಹಾಗೂ ಖಾಸಗಿ ಶಾಲೆಗಳು ತೆರೆಯುತ್ತಿದ್ದು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆಂಗ್ಲ ಶಾಲೆಯನ್ನು ತೆರೆದಿದ್ದು ಇದೀಗ ಎಲ್.ಕೆ.ಜಿ.ಯಿಂದ 7ನೆಯವರೆಗೆ ತರಗತಿಗಳು ನಡೆಯುತ್ತಿವೆ, ಕನ್ನಡ ಮಾಧ್ಯಮದ ಪ್ರೌಢಶಾಲಾ ತರಗತಿಗಳನ್ನು ಕೈ ಬಿಡದೆ ಮುಂದುವರಿಸುವ ಸಂಕಲ್ಪದೊಂದಿಗೆ ಇನ್ನೂ ಹೆಚ್ಚು ಸುಧಾರಣೆಗಳನ್ನು ಮಾಡುವ ಉದ್ದೇಶವನ್ನು ಹೊಂದಿಕೊಂಡಿದ್ದೇವೆ.
ಈ ಕಾರಣಕ್ಕಾಗಿ ನಾವು ಅಂದಾಜು ಒಂದೂವರೆ ಕೋಟಿ ರೂಪಾಯಿಯ ಕೆಲವು ಯೋಜನೆಗಳನ್ನು ರೂಪಿಸಿಕೊಂಡಿದ್ದು ನವೀನ ಮಾದರಿಯ ಸ್ಮಾರ್ಟ್ ತರಗತಿಗಳು, ವಿದ್ಯಾರ್ಥಿ ನಿಲಯ,ವಾಹನ ನಿಲ್ದಾಣ, ಭೋಜನ ಶಾಲೆ, ಶಾಲಾ ಆವರಣ,ಈಜುಕೊಳ, ಇತ್ಯಾದಿಗಳು ಹೊಸದಾಗಿ ನಿರ್ಮಿಸಬೇಕಾಗಿದೆ. ವಾಚನಾಲಯ ಮತ್ತು ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಂಗಣ, ಸಭಾಂಗಣ, ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ, ಸಿ.ಸಿ.ಟಿ.ವಿ. ಕ್ಯಾಮರಾಗಳ ಅಳವಡಿಸುವಿಕೆ ಇತ್ಯಾದಿ ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡಿರುತ್ತೇವೆ. ಈ ಎಲ್ಲಾ ಕಾರ್ಯಗಳು ಕಾರ್ಯರೂಪಗೊಳ್ಳಲು ವಿದ್ಯಾಭಿಮಾನಿಗಳ, ಶಾಲೆಯ ಹಳೆ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು ವಿದ್ಯಾಸಂಸ್ಥೆಯ ಪ್ರಗತಿಗೆ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಕ್ರೀಡಾ ಸಮಿತಿ ಸಂಚಾಲಕ ರಜನಿಕಾಂತ್ ರವರು ಮಾತನಾಡಿ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಡಿಸೆಂಬರ್ 23 24 25 ದಿನಾಂಕಗಳಲ್ಲಿ ಹಳೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ವಯಸ್ಸಿಗನುಗುಣವಾಗಿ ಕ್ರೀಡಾಕೂಟವನ್ನು ಆಯೋಜಿಸಿದ್ದು ಎಲ್ಲರೂ ಇದರಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.
ಕಾರ್ಯಾಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಈ ಸಂದರ್ಭದಲ್ಲಿ ಮಾತನಾಡಿ ಎಲ್ಕೆಜಿಯಿಂದ ಏಳನೆಯ ತರಗತಿಯ ವರೆಗೆ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಕಲಿಸುತ್ತಿದ್ದು ಇದಕ್ಕಾಗಿ ಒಂದು ನೂತನ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಯೋಜನೆಯನ್ನು ಮಾಡಿಕೊಳ್ಳಲಾಗಿದೆ.ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಭೆಯನ್ನು ಮಾಡಿ ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಸಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ತೇಜಸ್ವಿ ಕಡಪಳ, ಶಾಲಾ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿಉಪಸ್ಥಿತರಿದ್ದರು.