ಹಿರಿಯ ವೈದ್ಯ ಡಾ|ಬಿ.ರಘು ಸಹಿತ ಹಲವರಿಗೆ ಸಮ್ಮಾನ
ಪೆರುವಾಜೆ -ಮುಕ್ಕೂರು ಮೊಗೇರ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಡಿ.10 ರಂದು ಮುಕ್ಕೂರು ಶಾಲಾ ವಠಾರದಲ್ಲಿ 8 ನೇ ವರ್ಷದ ಮೊಗೇರ ಸ್ವಜಾತಿ ಬಾಂಧವರ ಅಂತರ್ ರಾಜ್ಯಮಟ್ಟದ ಕ್ರೀಡಾಕೂಟ, ಸಭಾ ಕಾರ್ಯಕ್ರಮ ಮತ್ತು ಸಮ್ಮಾನ ಸಮಾರಂಭ ನಡೆಯಿತು.
ನಿವೃತ್ತ ಸೈನಿಕ ವಿಜಯ ಕುಮಾರ್ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಉಪತಹಶೀಲ್ದಾರ್ ವಿಜಯ ವಿಕ್ರಮ್ ಜಿ.ರಾಮಕುಂಜ ಮಾತನಾಡಿ, ದ.ಕ., ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭಗೊಂಡ ಮೊದಲ ಮೊಗೇರ ಸಂಘಕ್ಕೆ 2024 ಕ್ಕೆ ಐವತ್ತು ವರ್ಷ ತುಂಬಲಿದೆ. ಈ ಸುವರ್ಣ ಸಂಭ್ರಮವನ್ನು ಮೊಗೇರ ಸಮುದಾಯ ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ಯೋಜನೆ ರೂಪಿಸಬೇಕು ಎಂದರು.
ಸಂಘಟನೆಯ ಶಕ್ತಿ ಉತ್ತಮವಾಗಿದ್ದರೆ ಅದರಿಂದ ಫಲಿತಾಂಶವೂ ಒಳ್ಳೆಯದಿರುತ್ತದೆ ಅನ್ನುವುದಕ್ಕೆ ಮುಕ್ಕೂರು-ಪೆರುವಾಜೆ ಮೊಗೇರ ಗ್ರಾಮ ಸಮಿತಿಯ ಚಟುವಟಿಕೆಗಳು ಒಂದು ಉದಾಹರಣೆ. ಇಲ್ಲಿ ಸಮುದಾಯದ ತೆರೆಮರೆಯ ಸಾಧಕರನ್ನು ಗುರುತಿಸುವ ಮಹತ್ವದ ಕಾರ್ಯ ನಡೆದಿದೆ ಎಂದ ಅವರು, ಮೊಗೇರ ಚರಿತೆಯು ಯಕ್ಷಗಾನ, ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು ಭವಿಷ್ಯದಲ್ಲಿ ಚಲನಚಿತ್ರ ರೂಪದಲ್ಲಿಯು ಬಿತ್ತರವಾಗಲಿ ಎಂದರು.
ಅಡ್ಯನಡ್ಕ ಜನತಾ ಪ.ಪೂ.ಕಾಲೇಜಿನ ಸೋಮಶೇಖರ ಎಚ್ ಮಾತನಾಡಿ, ಸುಳ್ಯ ತಾಲೂಕಿನಲ್ಲಿ ಮುಕ್ಕೂರಿನ ಮೊಗೇರ ಗ್ರಾಮ ಸಮಿತಿ ಅತ್ಯಂತ ಕ್ರಿಯಾಶೀಲವಾಗಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದೆ ಎಂದ ಅವರು ಮೊಗೇರ ಸಮುದಾಯದವರು ಅತಿ ಹೆಚ್ಚು ಪ್ರತಿಭಾವಂತರು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ-ಮುಕ್ಕೂರು ಮೊಗೇರ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಕಾನಾವು ಮಾತನಾಡಿ, ಸಮುದಾಯದ ಬೆಳವಣಿಗೆಗೆ ಇಂತಹ ಕಾರ್ಯಚಟುವಟಿಕೆಗಳು ಅಗತ್ಯ ಇದೆ ಅನ್ನುವ ನೆಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮ್ಮಾನ ಸಮಾರಂಭ
ಈ ಸಂದರ್ಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ|ಬಿ.ರಘು, ರಾಷ್ಟ್ರಮಟ್ಟದ ಹಿರಿಯ ಕ್ರೀಡಾಪಟು ಆನಂದ ಕೆ ಅವರನ್ನು ಸಮ್ಮಾನಿಸಲಾಯಿತು. ರಾಜ್ಯಮಟ್ಟದ ಕಬಡ್ಡಿ ಆಟಗಾರರಾದ ಸುಮಂತ್ ಕೊಡಿಯಾಲ, ವಸಂತ ಬಿ ಬೂಡು, ಶೈಕ್ಷಣಿಕ ಸಾಧಕರಾದ ಸೌಮ್ಯ ಪಾಟಾಜೆ, ಲಿಖಿತ ಪೆರುವಾಜೆ ಅವರನ್ನು ಅಭಿನಂದಿಸಲಾಯಿತು. ದ.ಕ.ಜಿಲ್ಲಾ ಮೊಗೇರ ಸಂಘದ ಕೋಶಾಧಿಕಾರಿ ಶರತ್ ಕೆ.ವಿ.ಅಭಿನಂದನಾ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ತುಮಕೂರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ|ಕೇಶವ, ಸುಳ್ಯ ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಕನ್ನಡ ಚಿತ್ರರಂಗದ ಸಹ ನಿರ್ದೇಶಕ ಜಿ.ಎಸ್.ಮಣಿ ಉಜಾರ್, ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಹಿಂದಿ ಶಿಕ್ಷಕ ಶಂಕರ್ ನೆಲ್ಯಾಡಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷ ಶಶಿಧರ್ ಕೆ ಮಾವಿನಕಟ್ಟೆ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ಸವಿತಾ ಮುಂಡಾಜೆ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಕರಾಟೆ ಶಿಕ್ಷಕ ಶೇಖರ ಮಾಡಾವು, ಪ್ರವೀಣ್ ಪುತ್ತೂರು, ಬಳ್ಪ ಕೊನ್ನಡ್ಕ ಶ್ರೀ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಕಿರಣ್ ಕೊನ್ನಡ್ಕ, ಪೆರುವಾಜೆ-ಮುಕ್ಕೂರು ಮೊಗೇರ ಗ್ರಾಮ ಸಮಿತಿ ಉಪಾಧ್ಯಕ್ಷ ಶೀನ ಅನವುಗುಂಡಿ, ಪೆರುವಾಜೆ ಗ್ರಾ.ಪಂ.ಸದಸ್ಯೆ ಚಂದ್ರಾವತಿ ಇಟ್ರಾಡಿ, ಚಿದಾನಂದ ಅರಂತೋಡು ಉಪಸ್ಥಿತರಿದ್ದರು. ಪುರುಷರ ವಿಭಾಗದಲ್ಲಿ ವಾಲಿಬಾಲ್, ಲಗೋರಿ, ಮಹಿಳೆಯರ ವಿಭಾಗದಲ್ಲಿ ಲಗೋರಿ, ತ್ರೋಬಾಲ್ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.