ನಾಗಪಟ್ಟಣ ಅಂಗನವಾಡಿ ಕೇಂದ್ರದ ಬಳಿ ರಾಶಿ ರಾಶಿ ಕಸ- ಪಂಚಾಯತ್ ನಿಂದ ತೆರವಿನ ಭರವಸೆ

0


ಸಿ.ಸಿ ಕ್ಯಾಮೆರಾ ಅಳವಡಿಸುವ ಯೋಜನೆ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ನಾಗಪಟ್ಟಣ ಅಂಗನವಾಡಿ ಕೇಂದ್ರದ ಹಿಂಬದಿಯ ಕೆ.ಎಫ್‌ ಡಿ. ಸಿ ಯವರ ಜಾಗದಲ್ಲಿ ಕಸದ ರಾಶಿ ತುಂಬಿದ್ದು ವಿಶಾಲವಾಗಿ ಹರಡಿದೆ.
ಈ ಪರಿಸರದಲ್ಲಿ ವಾಸಿಸುವ ಕೆ.ಎಫ್.ಡಿ.ಸಿ.ನೌಕರರ ಸುಮಾರು ಮನೆಗಳಿದ್ದು ಇವರಿಗೆ ಕಸ ಹಾಕಲು ಪರ್ಯಾಯ ವ್ಯವಸ್ಥೆ ಇಲ್ಲದಿರುವ ಕಾರಣದಿಂದ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ದಿನನಿತ್ಯ ತಂದು ಮನೆಯಲ್ಲಿ ಉಳಿದ ಪ್ಲಾಸ್ಟಿಕ್ ಹಸಿ ಕಸ ಒಣ ಕಸ ಅಲ್ಲದೆ ಪ್ಯಾಂಪರ್ ಮುಂತಾದ ವಸ್ತುಗಳನ್ನು ಬಿಸಾಡಿರುವುದರಿಂದ ಕಸದ ರಾಶಿ ತುಂಬಿದೆ.


ಕಸದ ರಾಶಿಯಿಂದ
ನಾಯಿಗಳು ದನಗಳು ಕಸವನ್ನು ಎಳೆದುಕೊಂಡು ಬಂದು ಶಾಲೆಯ ಆವರಣದಲ್ಲಿ ಹಾಕುವುದರಿಂದ ಪರಿಸರದ ಸ್ವಚ್ಚತೆಗೆ ದಕ್ಕೆಯಾಗಿದೆ.
ಸಣ್ಣ ಮಕ್ಕಳಿರುವ ಶಾಲೆಯ ಪ್ರದೇಶದಲ್ಲಿ ಈ ರೀತಿಯ ಕಸವನ್ನು ಹಾಕುವುದರಿಂದ ಗಬ್ಬು ವಾಸನೆಯಂದಾಗಿ ಶಾಲೆಯಲ್ಲಿ ಕುಳಿತುಕೊಂಡು ಆಹಾರ ಸೇವಿಸಲು ತೊಂದರೆಯಾಗುತ್ತಿದೆ.


ಈ ಕುರಿತು ಸ್ಥಳೀಯರು ಸಿ.ಡಿ.ಪಿ.ಒ ಕಚೇರಿಗೆ ದೂರು ನೀಡಿದ ಮೇರೆಗೆ ಇಂದು ಸ್ಥಳಕ್ಕಾಗಮಿಸಿದ ಸಿ.ಡಿ.ಪಿ.ಒ ಶೈಲಜಾ ರವರು ಪಂಚಾಯತ್ ನವರಿಗೆ ಈ ಬಗ್ಗೆ ವಿಷಯ ತಿಳಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಕಮಲಾ, ಸದಸ್ಯ ಧರ್ಮಪಾಲ ಕೊಯಿಂಗಾಜೆ ಹಾಗೂ ಪಿ.ಡಿ.ಒ ಸೃಜನ್ ಮತ್ತು ಸಿಬ್ಬಂದಿಯವರು ಬಂದು ಕಸ ಹಾಕಿರುವ ಜಾಗವನ್ನು ವೀಕ್ಷಿಸಿದರು.


ಶಾಲೆಯ ಪರಿಸರದಲ್ಲಿ ಈ ರೀತಿಯ ಕಸ ತ್ಯಾಜ್ಯ ಗಳಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದನ್ನು ಗಮನಿಸಿ ಕಸವನ್ನು ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡಿಸುವಂತೆ ಸಿ.ಡಿ.ಪಿ.ಒ ರವರು ಪಂಚಾಯತಿನವರಲ್ಲಿ ತಿಳಿಸಿದರು.

ಆಲೆಟ್ಟಿ ಪಂಚಾಯತ್ ಗೆ ಘನತ್ಯಾಜ್ಯ ಘಟಕವಿಲ್ಲ ದಿರುವುದರಿಂದ ಕಸ ವಿಲೇವಾರಿ ವ್ಯವಸ್ಥೆ ಮಾಡಲಾಗುತ್ತಿಲ್ಲ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಮುಂದಿನ 6 ತಿಂಗಳ ಒಳಗೆ ಘನತ್ಯಾಜ್ಯ ಘಟಕ ನಿರ್ಮಾಣದ ಬಳಿಕ ಕಸ ವಿಲೇವಾರಿ ವಾಹನ ಮನೆಗಳಿಗೆ ತೆರಳಿ ಹಸಿ ಒಣ ಕಸ ಸಂಗ್ರಹ ಮಾಡುವುದಾಗಿ ಪಿ.ಡಿ.ಒ ತಿಳಿಸಿದರು.
ಈಗ ಇಲ್ಲಿ ಹಾಕಿರುವ ಕಸದ ವಿಲೇವಾರಿಯ ಕುರಿತು ತುರ್ತು ಸಭೆ ಕರೆದು ಘನತ್ಯಾಜ್ಯ ಘಟಕವಿರುವ ತಾಲೂಕಿನ ಬೇರೆಪಂಚಾಯತಿನವರೊಂದಿಗೆ ಮಾತುಕತೆ ನಡೆಸಿ ಕಸ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು. ಈ ಕುರಿತುತಾಲೂಕು ಇ.ಒ ರವರೊಂದಿಗೆ ಕಸ ವಿಲೇವಾರಿಯ ಬಗ್ಗೆ ಮಾತುಕತೆ ನಡೆಸುವುದಾಗಿ ಸಿ.ಡಿ.ಪಿ.ಒ ರವರು ತಿಳಿಸಿದರು.


ಈ ಹಿಂದೆ ಈ ಜಾಗದಲ್ಲಿ ಕಸ ಹಾಕಲು ಗುಂಡಿ ತೆಗೆಸಲಾಗಿತ್ತು.
ಇದೀಗ ಗುಂಡಿ ಮುಚ್ಚಿರುವುದರಿಂದ ಎಲ್ಲೆಂದರಲ್ಲಿ
ಕಸ ಹರಡಿದೆ.
ಕಸ ವಿಲೇವಾರಿ ಮಾಡಿದ ನಂತರ ಈ ಜಾಗದಲ್ಲಿ ಕಸ ಹಾಕದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ
ಪರಿಸರದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗುವುದು. ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಡಿ.ಒ ರವರು ತಿಳಿಸಿದರು.