ಡಿ 31: ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಪುರುಷರ 62 ಕೆಜಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

0

ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ

ಸುಳ್ಯ ತಾಲೂಕು ಕೊಡಿಯಾಲ ಕಲ್ಪಡ ‘ನಮ್ಮೂರ ನಮ್ಮ ಕನಸು’ ಜನಸೇವಾ ಟ್ರಸ್ಟ್ ರಿ. ಹಾಗೂ ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ರಿ. ಇದರ ಸಹಭಾಗಿತ್ವದಲ್ಲಿ ಡಿಸೆಂಬರ್ ೩೧ ರಂದು ಕೊಡಿಯಾಲ ಕಲ್ಪಡ ಮೂವಪ್ಪೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಪುರುಷರ ೬೨ ಕೆಜಿ ಮುಕ್ತ ಮ್ಯಾಟ್ ಕಬ್ಬಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಸುಬ್ರಮಣ್ಯ ಕೆ.ಎಂ. ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಅವರು ನಮ್ಮ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಜನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ ಕಬ್ಬಡಿ ಪಂದ್ಯಾಟ ಮತ್ತು ಸಾಧಕರನ್ನು ಗುರುತಿಸುವ ಉತ್ತಮ ಕಾರ್ಯವನ್ನು ಆಯೋಜಿಸಿಕೊಂಡಿದ್ದೇವೆ.
ಡಿಸೆಂಬರ್ ೩೧ರಂದು ಬೆಳಿಗ್ಗೆ ೯:೩೦ರಿಂದ ರಾತ್ರಿ ೧೦ ರ ತನಕ ಮೂವಪ್ಪೆ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಅಧ್ಯಕ್ಷ ಮಾಧವ ಬಿ ಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಸುಬ್ರಹ್ಮಣ್ಯ ಕೆಎಮ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಎಸ್ ಸಿ ಡಿ ಸಿ ಸಿಬ್ಯಾಂಕ್ ಬೆಳ್ಳಾರೆ ಶಾಖೆ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಮರಕ್ಕಡ, ಮುಖಂಡರುಗಳಾದ ಅನಿಲ್ ರೈ ಚಾವಡಿ ಬಾಗಿಲು, ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್ ಸಿ ವಸಂತ್ ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಲಿದ್ದಾರೆ.

ಸಂಜೆ ೪:೩೦ಕ್ಕೆ ಸಮಾರೋಪ ಸಮಾರಂಭ ಸಭೆ ನಡೆಯಲಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗಿರತಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ ಆರ್ ಗಂಗಾಧರ ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಲಿದ್ದಾರೆ.

ಈ ಕಬಡ್ಡಿ ಪಂದ್ಯಾಟದ ಪ್ರಥಮ ಬಹುಮಾನ ರೂ.೧೫,೫೫೫ ನಗದು, ದ್ವಿತೀಯ ಬಹುಮಾನ ರೂ ೧೨,೨೨೨ ನಗದು, ತೃತೀಯ ಬಹುಮಾನ ರೂ ೬,೬೬೬, ಚತುರ್ಥ ಬಹುಮಾನ ರೂ. ೫,೦೦೦ ನೀಡಲಿದ್ದೇವೆ. ಅಲ್ಲದೆ ಭಾಗವಹಿಸುವ ಎಲ್ಲಾ ತಂಡಗಳಿಗೆ ಶಾಶ್ವತ ಫಲಕಗಳನ್ನು ನೀಡಲಿದ್ದೇವೆ. ಪಂದ್ಯಾಟದ ಸವ್ಯ ಸಾಚಿ ಪ್ರಶಸ್ತಿ ರೂ ೧೨೫೦, ಉತ್ತಮ ದಾಳಿಗಾರ ಪ್ರಶಸ್ತಿ ರೂ ಒಂದು ಸಾವಿರ, ಉತ್ತಮ ಹಿಡಿತಗಾರ ಪ್ರಶಸ್ತಿ ರೂ ಒಂದು ಸಾವಿರ ನೀಡಲಿದ್ದೇವೆ.


ಆದ್ದರಿಂದ ಭಾಗವಹಿಸುವ ಎಲ್ಲಾ ತಂಡಗಳು ಡಿಸೆಂಬರ್ ೨೬ ಸಂಜೆ ೪. ೩೦ ರವರೆಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು,ಈ ಪಂದ್ಯಾಟದಲ್ಲಿ ಕೇವಲ ೩೨ ತಂಡಗಳಿಗೆ ಮಾತ್ರ ಅವಕಾಶಗಳು ಇರುತ್ತವೆ ಎಂದು ಅವರು ಹೇಳಿದರು.


ಅಲ್ಲದೆ ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಇಬ್ಬರು ಸಾಧಕರಿಗೆ ನಮ್ಮೂರ ರತ್ನ ಜೀವಮಾನ ಸಾಧನ ಪ್ರಶಸ್ತಿ,ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ,ಹಾಗೂ ಅಭಿನಂದನಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸುವ ಕಾರ್ಯಕ್ರಮಗಳು ಕೂಡ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಕಾರ್ಯದರ್ಶಿ ಹರ್ಶನ್ ಕೆ ಟಿ, ವಿ ಸಿ ವಸಂತ್, ಗಣೇಶ್ ಪೆರ್ಲೋಡಿ, ಸದಸ್ಯರಾದ ಅಶ್ವನ್ ಕುಮಾರ್, ನವೀನ್ ಕೊಡಂಕಿರಿ, ಕೇಶವ ಕೆ ಪಿ, ನವೀನ್ ಖಂಡಿಗ ಉಪಸ್ಥಿತರಿದ್ದರು.