ಸುಳ್ಯ ಸುಗ್ರಾಮವಾಗಲು ಡಾ.ಕುರುಂಜಿ ಕಾರಣ – ಅವರ ಸ್ಮರಣೆ ನಿರಂತರ : ರಾಜೇಂದ್ರ ಭಟ್
“ಅತ್ಯಂತ ಹಿಂದುಳಿದ ಪ್ರದೇಶವಾದ ಸುಳ್ಯದಲ್ಲಿ 30 ಕ್ಕೂ ಅಧಿಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ, ಸುಳ್ಯ ಸುಗ್ರಾಮವಾಗಲು ಕಾರಣರಾದವರು ಡಾ.ಕುರುಂಜಿ ವೆಂಕಟ್ರಮಣ ಗೌಡರು. ಅವರ ಸ್ಮರಣೆ ನಿರಂತರವಾಗಿರಬೇಕು. ಕುರುಂಜಿ ಶಕೆ ಸುಳ್ಯದಲ್ಲಿ ಆರಂಭವಾಗದೇ ಇರುತಿದ್ದರೆ ಸುಳ್ಯ ಹೇಗಿರುತಿತ್ತು ಯೋಚಿಸೋಣ. ಆದ್ದರಿಂದ ಸುಳ್ಯವನ್ನು ಬೆಳಗಿದ ಅವರಿಗೆ ನಾವು ಋಣಿಯಾಗಿರಬೇಕು ಎಂದು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಹೇಳಿದರು.
ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 95 ನೇ ಜಯಂತ್ಯೋತ್ಸವ – ಕೆ.ವಿ.ಜಿ. ಸುಳ್ಯ ಹಬ್ಬದಲ್ಲಿ ಆರು ಮಂದಿ ಯುವ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.
” ಕುರುಂಜಿಯವರು ಶ್ರೇಷ್ಠ ಸಾಧಕ. 8 ನೇ ತರಗತಿ ಓದಿದ ವ್ಯಕ್ತಿ ಮೆಡಿಕಲ್ ಕಾಲೇಜು ಕಟ್ಟಿದ್ದಾರೆ ಎಂದರೆ ಅದೊಂದು ಗಿನ್ನೆಸ್ ದಾಖಲೆ. ಭಾರತರತ್ನ ಗೌರವಕ್ಕೆ ಸಮಾನವಾದ ಸಾಧನೆಯನ್ನು ಕುರುಂಜಿ ಯವರು ಸುಳ್ಯ ತಾಲೂಕಿನಲ್ಲಿ ಮಾಡಿದ್ದಾರೆ” ಎಂದು ಅವರು ಬಣ್ಣಿಸಿದರಲ್ಲದೇ, ಕೃಷಿ ಮೂಲಕ ಮೆಡಿಕಲ್ ಕಾಲೇಜ್ ಕಟ್ಟಬಹುದೆಂದು ಜಗತ್ತಿಗೆ ತೋರಿಸಿದವರು ಕುರುಂಜಿಯವರು ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿದರು.
ಸಮಿತಿಯ ಕೋಶಾಧಿಕಾರಿ ಜನಾರ್ದನ ನಾಯ್ಕ್, ಪ್ರಧಾನ ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು ವೇದಿಕೆಯಲ್ಲಿದ್ದರು.
ಅಭಿನಂದನೆ : ಸಮಾರಂಭದಲ್ಲಿ ಆರು ಮಂದಿ ಯುವ ಸಾಧಕರಾದ ಡಾ.ನಿತೀನ್ ಪ್ರಭು (ಪಶುವೈದ್ಯಕೀಯ), ಅರವಿಂದ ಚೊಕ್ಕಾಡಿ (ಶಿಕ್ಷಣ ಮತ್ತು ಸಾಹಿತ್ಯ), ಹರಿಕೃಷ್ಣ ರೈ (ಇಂಜಿನಿಯರಿಂಗ್ ಕ್ಷೇತ್ರ), ಎಸ್.ಆರ್.ಕೇಶವ (ಉದ್ಯಮ), ತೇಜಸ್ವಿ ಕಡಪಳ (ಸಾಂಸ್ಕೃತಿಕ ಸಂಘಟನೆ), ಡಾ.ತಾರಾ ನಂದನ್ (ವೈದ್ಯಕೀಯ) ರನ್ನು ಅಭಿನಂದಿಸಲಾಯಿತು.
ಶ್ರೀಲಯ ಮಧುವನ ಪ್ರಾರ್ಥಿಸಿದರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಸಂಚಾಲಕ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು.
ಶ್ರೀಮತಿ ಉಷಾ ಚಂದ್ರಶೇಖರ್ ಪೇರಾಲು, ಶ್ರೀಮತಿ ಚಂದ್ರಾಕ್ಷಿ ಜೆ.ರೈ, ಶ್ರೀಮತಿ ಚಿತ್ರಲೇಖ ಮಡಪ್ಪಾಡಿ, ಶ್ರೀಮತಿ ಲತಾಶ್ರೀ ಸುಪ್ರೀತ್, ಡಾ.ಕೆ.ಟಿ.ವಿಶ್ವನಾಥ್, ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಯುವ ಸಾಧಕರನ್ನು ಪರಿಚಯಿಸಿದರು.
ಕು.ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.