ಬುಶ್ರಾ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮ, ಬುವಿ ಉತ್ಸವಕ್ಕೆ ಚಾಲನೆ

0

🔅ಬುಶ್ರಾ ಆಡಿಟೋರಿಯಂ ನವೀಕೃತ ಸಭಾಂಗಣ ಉದ್ಘಾಟನೆ

🔅ಶಿಕ್ಷಣ ಸಂಸ್ಥೆ ನಡೆಸುವುದು ಸಣ್ಣ ವಿಷಯವಲ್ಲ, ಅದೊಂದು ಸಾಧನೆ- ಅಚ್ಚುತ್ತ ಮೂಡತ್ತಾಯ

🔅ಮಕ್ಕಳು ಭಗವಂತ ನಮಗೆ ನೀಡುವ ಅಮೂಲ್ಯ ಅನುಗ್ರಹ- ರೆ|ವಿಜಯ ಹಾರ್ವಿನ್

ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಮುನ್ನಡೆಸುವುದೆಂದರೆ ಅದು ಸಣ್ಣ ವಿಷಯವಲ್ಲ. 25 ವರ್ಷಗಳ ಹಿಂದೆ ಬುಶ್ರಾ ಅಝೀಝ್ ಅವರು ಕಂಡ ಕನಸು ನನಸಾಗಿ ಇಂದು ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಬುಶ್ರಾ ವಿದ್ಯಾಸಂಸ್ಥೆ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ್ತ ಮೂಡೆತ್ತಾಯ ಹೇಳಿದರು.

ಡಿ.26ರಂದು ನಡೆದ ಕಾವು ಬುಶ್ರಾ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ಬುಶ್ರಾ ಅಡಿಟೋರಿಯಂ ನವೀಕೃತ ಸಭಾಂಗಣದ ಉದ್ಘಾಟನೆ ‘ಬುವಿ ಉತ್ಸವ 2023’ ಇದರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆ ಶಾಲೆಯನ್ನು ಮೊದಲೇ ಆಯ್ಕೆ ಮಾಡುತ್ತಾರೆ. ಆ ನಿಟ್ಟಿನಲ್ಲಿ ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಉತ್ತಮ ಆಡಳಿತ ಮತ್ತು ಶಿಕ್ಷಕ ವೃಂದವಿದ್ದು ಪೋಷಕರ ಸಹಕಾರವನ್ನೂ ಸಂಸ್ಥೆ ಪಡೆಯುತ್ತಿದೆ. ಇಲ್ಲಿ ಕಲಿತ ಅದೆಷ್ಟೋ ಮಕ್ಕಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಫಲಿತಾಂಶದಲ್ಲಿ ಖಾಸಗಿ ಶಾಲೆಗಳೇ ಹೆಚ್ಚು ಮೇಲುಗೈ ಸಾಧಿಸುತ್ತಿದ್ದು ಇದರಲ್ಲಿ ಶಿಕ್ಷಕ ವೃಂದದವರ ಪಾತ್ರ ಬಹಳಷ್ಟಿದೆ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರ ನಿಸ್ವಾರ್ಥ ಸೇವೆ ಇದ್ದಾಗ ಅಂತಹ ವಿದ್ಯಾಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ನನ್ಯ ಅಚ್ಚುತ್ತ ಮೂಡೆತ್ತಾಯ ಹೇಳಿದರು.

ಮಕ್ಕಳು ಭಗವಂತ ನೀಡುವ ಅಮೂಲ್ಯ ಅನುಗ್ರಹ-ವಿಜಯ ಹಾರ್ವಿನ್
ಬುಶ್ರಾ ಅಡಿಟೋರಿಯಂ ನವೀಕೃತ ಸಭಾಂಗಣವನ್ನು ಉದ್ಘಾಟಿಸಿದ ಸುದಾನ ವಸತಿಯುತ ಪ್ರೌಢ ಶಾಲೆ ಪುತ್ತೂರು ಇದರ ಸಂಚಾಲಕ ರೇ| ವಿಜಯ ಹಾರ್ವಿನ್ ಮಾತನಾಡಿ, ಮಕ್ಕಳು ನಮಗೆ ಮತ್ತು ಈ ಸಮಾಜಕ್ಕೆ ಭಗವಂತ ಕೊಡುವ ಮೂಲ್ಯ ಅನುಗ್ರಹವಾಗಿದ್ದು ಮಕ್ಕಳಲ್ಲಿ ಪ್ರತಿಭೆಯನ್ನು ಹೊರತೆಗೆಯುವುದು ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.


ಎಲ್ಲ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಆ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಭವಿಷ್ಯದಲ್ಲಿ ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಪೊಷಕರ ಮತ್ತು ಶಿಕ್ಷಕರ ಮೇಲಿದೆ ಎಂದ ಅವರು ಬುಶ್ರಾ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬಕ್ಕೆ ಶುಭ ಹಾರೈಸಿದರು.

ಗ್ರಾಮೀಣ ಮಕ್ಕಳು ಕೂಡಾ ಆಂಗ್ಲ ಮಾಧ್ಯಮದಲ್ಲಿ ಕಲಿಯಬಹುದೆಂದು ತೋರಿಸಿಕೊಟ್ಟಿದೆ-ಸಂತೋಷ್ ಮಣಿಯಾಣಿ

ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಗ್ರಾಮೀಣ ಮಕ್ಕಳು ಕೂಡಾ ಆಂಗ್ಲ ಮಾಧ್ಯಮದಲ್ಲಿ ಕಲಿಯಬಹುದು ಎನ್ನುವುದನ್ನು ಬುಶ್ರಾ ಅಝೀಝ್ರವರು ಬುಶ್ರಾ ವಿದ್ಯಾಸಂಸ್ಥೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಉದ್ಯಮದ ಲಾಭದಲ್ಲಿ ಒಂದಂಶವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಬುಶ್ರಾ ಅಝೀಝ್ ಅವರ ನಡೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬುಶ್ರಾ ವಿದ್ಯಾಸಂಸ್ಥೆಗೆ ಅವಕಾಶವಿರುವ ಯಾವುದೇ ಸಹಕಾರವನ್ನು ನೀಡಲು ನಮ್ಮ ಗ್ರಾಮ ಪಂಚಾಯತ್ ಸಿದ್ದವಿದೆ ಎಂದು ಅವರು ಇದೇ ಭರವಸೆ ನೀಡಿದರು.

ಮಕ್ಕಳಲ್ಲಿ ಧನಾತ್ಮಕ ಭಾವನೆ ಬೆಳೆಸಬೇಕು-ಐ.ಸಿ ಕೈಲಾಸ್
ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಐ.ಸಿ ಕೈಲಾಸ್ ಮಾತನಾಡಿ, ವಿದ್ಯಾಸಂಸ್ಥೆಯ ಸಾಧನೆ ತುಲನೆ ಮಾಡಿದಾಗ ಶಿಕ್ಷಕರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಋಣಾತ್ಮಕ ಭಾವನೆ ಕಡಿಮೆ ಮಾಡಿ ಧನಾತ್ಮಕ ಭಾವನೆ ಬೆಳೆಸುವ ಪ್ರಯತ್ನ ಮಾಡಬೇಕು. ಒಳ್ಳೆಯ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು.

ಕಷ್ಟಗಳನ್ನು ಎದುರಿಸಿ ಸಂಸ್ಥೆಯನ್ನು ಕಟ್ಟಿದ್ದೇವೆ-ಅಝೀಝ್ ಬುಶ್ರಾ
ಅಧ್ಯಕ್ಷತೆ ವಹಿಸಿದ್ದ ಬುಶ್ರಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಅಝೀಝ್ ಬುಶ್ರಾ ಮಾತನಾಡಿ, ಹಲವು ಕಷ್ಟಗಳನ್ನು ಎದುರಿಸಿ ಈ ಸಂಸ್ಥೆ ಕಟ್ಟಿ ಬೆಳೆಸಿದ್ದೇವೆ. ಇದೀಗ ಒಂದು ತಿಂಗಳಿನ ಅಲ್ಪ ಸಮಯದಲ್ಲಿ ನನ್ನ ಪುತ್ರ ಬದ್ರುದ್ದೀನ್ ನೇತೃತ್ವದಲ್ಲಿ ಸುಂದರವಾದ ಆಡಿಟೋರಿಯಂ ನಿರ್ಮಾಣ ಆಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಸಮಾಜ ಅವರನ್ನು ಗುರುತಿಸುವಂತಾಗಬೇಕು ಎಂದು ಹೇಳಿದರು.

ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಪದ್ಮಶ್ರೀ ಮಹಾಲಿಂಗ ನಾಯ್ಕ(ಸುರಂಗ ಮಾರ್ಗ ತಜ್ಞರು), ಚಿತ್ತರಂಜನ್ ಬೋಳಾರ (ಸಹಕಾರ ಕ್ಷೇತ್ರ), ಕು|ಸಾಯಿಶ್ರುತಿ ಪಿಲಿಕಜೆ (ಕಲಾ ಕ್ಷೇತ್ರ), ಉಮೇಶ್ ಮಣಿಕ್ಕಾರ (ಶಿಕ್ಷಣ ಕ್ಷೇತ್ರ) ಅಜಿತ್ ಗೌಡ ಐವರ್ನಾಡು (ಜಾನಪದ ಕ್ಷೇತ್ರ), ಮೀಫ್ ಸಂಸ್ಥೆ ಪರವಾಗಿ ಉಪಾಧ್ಯಕ್ಷ ಮುಸ್ತಫಾ ಜನತಾ (ಶೈಕ್ಷಣಿಕ) ಮೊದಲಾದವರನ್ನು ಸನ್ಮಾನಿಸಲಾಯಿತು.

ನನ್ಯ ಅಚ್ಚುತ್ತ ಮೂಡತ್ತಾಯ ಅವರು ಸಾಧಕರನ್ನು ಸನ್ಮಾನಿಸಿದರು. ಬುಶ್ರಾ ವಿದ್ಯಾಸಂಸ್ಥೆಯ ಸಿಬ್ಬಂದಿ ರಶೀದ್ ಬೆಳ್ಳಾರೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಸ್ವೀಕರಿಸಿದವರ ಮಾತು
ಪದ್ಮಶ್ರೀ ಮಹಾಲಿಂಗ ನಾಯ್ಕ ಮಾತನಾಡಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದರಿಂದ ಮಾತ್ರ ದೇಶ ಕಟ್ಟಬಹುದು. ಮಕ್ಕಳಲ್ಲಿ ಸಾಧನೆ ಮಾಡುವ ಕನಸು ಬಿತ್ತಬೇಕು ಎಂದು ಹೇಳಿ ಬೆಳ್ಳಿ ಹಬ್ಬಕ್ಕೆ ಶುಭ ಹಾರೈಸಿದರು.

ಚಿತ್ತರಂಜನ್ ಬೋಳಾರ ಮಾತನಾಡಿ ಶಾಲೆ ಸ್ಥಾಪಿಸುವುದು ಸುಲಭ ನಡೆಸುವುದು ಬಹಳ ಕಷ್ಟ. ಕಷ್ಟ ಇದ್ದರೂ ಅದನ್ನು ಮುನ್ನಡೆಸುತ್ತಿರುವ ಬುಶ್ರಾ ಅಝೀಝ್ ಅವರ ಕಾರ್ಯ ಶ್ಲಾಘನೀಯ ಎಂದರು.

ಮೀಫ್ ಸಂಸ್ಥೆಯ ಉಪಾಧ್ಯಕ್ಷ ಮುಸ್ತಫಾ ಜನತಾ ಸುಳ್ಯ ಮಾತನಾಡಿ ಕಾವಿನಲ್ಲಿರುವ ಬುಶ್ರಾ ವಿದ್ಯಾಸಂಸ್ಥೆಯಿಂದಾಗಿ ಈ ಪ್ರದೇಶವೇ ಅಭಿವೃದ್ಧಿ ಆಗಿದೆ, ಉದ್ಯಮಿ, ಶಿಕ್ಷಣ ಪ್ರೇಮಿ ಬುಶ್ರಾ ಅಝೀಝ್ ಅವರ ಬದ್ಧತೆ ಮತ್ತು ಶ್ರಮ ಅಭಿನಂದನೀಯ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮನುಷ್ಯನಿಗೆ ವಿದ್ಯೆ ಅಗತ್ಯ ಎಂದು ಹೇಳಿದರು.

ಉಮೇಶ್ ಮಣಿಕ್ಕಾರ ಮಾತನಾಡಿ ಬುಶ್ರಾ ಶಾಲೆಯ ಶಿಕ್ಷಣ, ಶಿಸ್ತು ಮೆಚ್ಚುವಂತದ್ದು, ಶೈಕ್ಷಣಿಕವಾಗಿ ಚಿಕ್ಕ ಸಾಧನೆ ಮಾಡಿರುವ ನನ್ನನ್ನು ಗುರುತಿಸಿರುವುದರಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಅಜಿತ್ ಗೌಡ ಐವರ್ನಾಡು ಮಾತನಾಡಿ ಯಾವುದೇ ಜಾತಿ, ಧರ್ಮಕ್ಕೆ ಪ್ರಾಧಾನ್ಯತೆ ನೀಡದೇ ಕೇವಲ ಶಿಕ್ಷಣದ ಏಕಮಾತ್ರ ಉದ್ದೇಶದಿಂದ ಬುಶ್ರಾ ಅಝೀಝ್ರವರು ಸ್ಥಾಪಿಸಿದ ವಿದ್ಯಾಸಂಸ್ಥೆ ಇಂದು ಸಾವಿರಾರು ಮಂದಿಗೆ ವಿದ್ಯಾದಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕು| ಸಾಯಿಶೃತಿ ಪಿಲಿಕಜೆಯವರು ಮಾತನಾಡುವ ಗೊಂಬೆಯ ಮೂಲಕ ಅಭಿನಯಿಸಿ ಮನರಂಜಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಲ್ಲಿರುವ ಪ್ರತಿಭೆ ಅರಳಬೇಕಾದರೆ ಅವರಿಗೆ ಪ್ರೋತ್ಸಾಹ ಮತ್ತು ಸೂಕ್ತ ವೇದಿಕೆ ಸಿಗಬೇಕು ಎಂದು ಹೇಳಿ ಬೆಳ್ಳಿ ಹಬ್ಬ ಸಂಭ್ರಮಕ್ಕೆ ಶುಭ ಹಾರೈಸಿದರು.

ದುರ್ಗಾಕುಮಾರ್ ನಾಯರ್ ಕೆರೆ ಹಾಗೂ ಯತೀಶ್ ವರಿಗೆ ಸನ್ಮಾನ

ಬುಶ್ರಾ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಸುದ್ದಿ ಮೀಡಿಯಾ ಕ್ರಿಯೇಶನ್ ಮುಖಾಂತರ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್ ಕೆರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಕ್ಷ್ಯಚಿತ್ರ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯತೀಶ್ ವರನ್ನು ಕೂಡಾ ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಯತೀಶ್ ರವರು ಮಾತನಾಡಿ ಶುಭ ಹಾರೈಸಿದರು.