ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ರಾಮ ತಾರಕ ಯಜ್ಞ – ಹತ್ತು ಮಂದಿ ಕರಸೇವಕರಿಗೆ ಸನ್ಮಾನ
ಬಾಲರಾಮನ ವೇಷಧರಿಸಿದ ಪುಟಾಣಿ ಮಕ್ಕಳು
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆಯಾದ ಹಿನ್ನೆಲೆಯಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಯಜ್ಞ ಹಾಗೂ ಗ್ರಾಮದ ಹತ್ತು ಮಂದಿ ಅಯೋಧ್ಯೆ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮವು ಜ.22ರಂದು ಮಧ್ಯಾಹ್ನ ಜರುಗಿತು.
ದೇವಸ್ಥಾನದ ಅರ್ಚಕ ಶ್ರೀವರ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಶ್ರೀರಾಮ ತಾರಕ ಯಜ್ಞ ನಡೆದು ಮಧ್ಯಾಹ್ನ ಮಹಾಮಂಗಳಾರತಿ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಬೆಳಿಗ್ಗೆ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬಾಲರಾಮನ ವೇಷ ಧರಿಸಿ ದೇವಸ್ಥಾನಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ 1990 ಹಾಗೂ 1992ರಲ್ಲಿ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಕರಸೇವಕರಾಗಿ ದುಡಿದ ಗಂಗಾಧರ ಕಾಳಮನೆ, ನ. ಸೀತಾರಾಮ, ಉಪೇಂದ್ರ ಕಾಮತ್ ವಿನೋಬನಗರ, ಶ್ರೀಮತಿ ಪದ್ಮಾವತಿ ಕಾಮತ್ ವಿನೋಬನಗರ, ಜಯರಾಮ ರೈ ಜಾಲ್ಸೂರು, ಸೊಕ್ಕಲಿಂಗಂ ಸೋಣಂಗೇರಿ, ಜನಾರ್ದನ ಜಾಲ್ಸೂರು, ಕಮಲಾಕ್ಷ ವಿನೋಬನಗರ, ಗಂಗಾಧರ ವಿನೋಬಗರ, ವಾಸುದೇವ ಅರ್ಭಡ್ಕ ಹಾಗೂ ರಾಧಾಕೃಷ್ಣ ಕುಕ್ಕಂದೂರು ಅವರನ್ನು ರಾಮನ ಭಾವಚಿತ್ರವಿರುವ ಪದಕವನ್ನು ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಇದೇ ವೇಳೆಗೆ ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠೆಯ ನೇರಪ್ರಸಾರವನ್ನು ಸೇರಿದ್ದ ಸಾವಿರಾರು ಮಂದಿ ಎಇಡಿ ಪರದೆಯ ಮೂಲಕ ವೀಕ್ಷಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ, ಶರತ್ ಅಡ್ಕಾರು ಸೇರಿದಂತೆ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು , ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.