ಸುಳ್ಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವವು ಫೆ.25 ರಿಂದ ಮೊದಲ್ಗೊಂಡು ಫೆ.28 ರ ತನಕ ನಡೆಯಲಿದ್ದು ಈಗಾಗಲೇ ಉಪ ಸಮಿತಿಗಳ ಸಭೆಯನ್ನು ಕರೆದು ಸಂಚಾಲಕರಿಗೆ ಜವಬ್ದಾರಿ ಹಂಚಿಕೆ ಮಾಡಲಾಗಿದ್ದು ತ್ವರಿತ ಗತಿಯಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಯು ನಡೆಯುತ್ತಿದೆ.
ಬ್ರಹ್ಮಶ್ರೀ ವೇದಮೂರ್ತಿ ಮಧೂರು ರಾಜೇಶ್ ಸರಳಾಯ ರವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ,ಶ್ರೀ ಮೂಕಾಂಬಿಕಾ, ಶ್ರೀ ಸೀತಾ ಲಕ್ಷ್ಮಣ ಆಂಜನೇಯ ಸಮೇತ ಶ್ರೀ ರಾಮ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಭಜನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿರುವುದು.
ಫೆ.25 ರಂದು ಆರಂಭದಲ್ಲಿ ಗಣಪತಿ ಹವನವಾಗಿ ಉಗ್ರಾಣ ತುಂಬುವುದು, ಬೆಳಗ್ಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹಸಿರುವಾಣಿ ಮೆರವಣಿಗೆ ಮುಖ್ಯ ರಸ್ತೆಯ ಮೂಲಕ ಸಾಗಿ ಬರಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಾಗೂ ದಾಸ ಭಕ್ತಿ ಗಾನ ಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೆ.26 ರಂದು ಬೆಳಗ್ಗೆ ದೇವರ ಪ್ರತಿಷ್ಠಾ ಕಾರ್ಯ, ಬ್ರಹ್ಕಲಾಶಭೀಷೇಕ ನಡೆಯಲಿದೆ.
ಸಂಜೆ ಗಂಟೆ 5.00 ರಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಎದುರಿನಿಂದ ತಾಲೂಕಿನ ವಿವಿಧ ಭಜನಾ ಮಂಡಳಿಯವರಿಂದ ಆಕರ್ಷಕ ಕುಣಿತ ಭಜನೆಯೊಂದಿಗೆ ಅದ್ದೂರಿಯ ಭಜನಾ ಮೆರವಣಿಗೆಯು ಮಂದಿರದ ತನಕ ಮುಖ್ಯ ರಸ್ತೆಯಲ್ಲಿ ಸಾಗಿ ಬರಲಿದೆ. ಸಂಜೆ ವಿಶೇಷವಾಗಿ ವಿಭಿನ್ನ ಶೈಲಿಯ ಯಕ್ಷ- ಗಾನ- ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ಫೆ.27 ರಂದು ಬೆಳಗ್ಗೆ 48 ತೆಂಗಿನಕಾಯಿ ಗಣಪತಿ ಹವನ, ಬಳಿಕ ಚಂಡಿಕಾಯಾಗ ,ಲಕ್ಷ ತುಳಸಿ ಅರ್ಚನೆಯಾಗಲಿರುವುದು. ಸಂಜೆ ಸಮಾರೋಪ ಸಮಾರಂಭ, ರಾತ್ರಿ ಖ್ಯಾತ ಕಲಾವಿದರಿಂದ ಭಕ್ತಿ ಗಾನಾ ಸುಧೆ ಹಾಗೂ ವಾದ್ಯ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿರುವುದು. ಮರುದಿನ ಪ್ರಾತ:ಕಾಲ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಕಾರ್ಯಕ್ರಮದ ವಿವರ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ತಿಳಿಸಿದರು.
ಈಗಾಗಲೇ ಅದ್ದೂರಿಯ ಬ್ರಹ್ಮಕಲಶೋತ್ಸವದ ಸಿದ್ಧತಾ ಕಾರ್ಯವು ಭರದಿಂದ ನಡೆಯುತ್ತಿದೆ. ಆಗಮಿಸುವ ಭಕ್ತಾದಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಮಂದಿರದ ಎಡ ಭಾಗದಲ್ಲಿ ಸಮತಟ್ಟು ಜಾಗವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ದ ವೇದಿಕೆ ನಿರ್ಮಿಸಲಾಗುತ್ತಿದೆ. ಆಗಮಿಸಿದ ಭಕ್ತಾದಿಗಳಿಗೆ ಉತ್ಸವದ ಸಂದರ್ಭದಲ್ಲಿ ನಿರಂತರವಾಗಿ ಅನ್ನ ಸಂತರ್ಪಣೆಯು ನಡೆಯಲಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ಅರಂಬೂರು ತಿಳಿಸಿದರು.