ಫೆ.26-28: ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರಾಮಹೋತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಮಾಯಿಲಕೋಟೆ ಅಂಜನಾದ್ರಿಯ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ಕಾಲಾವಧಿ ಜಾತ್ರಾಮಹೋತ್ಸವದ ಪ್ರಯುಕ್ತ ಶ್ರೀ ಗುಳಿಗದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವವು ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.26ರಿಂದ ಫೆ.28ರವರೆಗೆ ಜರುಗಲಿದೆ.

ಫೆ.19ರಂದು ಮುಹೂರ್ತದ ಗೊನೆ ಕಡಿಯಲಿದ್ದು, ಫೆ.26ರಂದು ಸ್ಥಳಶುದ್ಧಿ , ಶುದ್ಧಿಕಲಶ, ಗಣಪತಿ ಹವನ, ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ ನಡೆಯಲಿದ್ದು, ಬಳಿಕ ಹಸಿರುವಾಣಿ ಸಮರ್ಪಣೆಯೊಂದಿಗೆ ಉಗ್ರಾಣ ಮುಹೂರ್ತ ನಡೆಯಲಿದೆ.
ಮಧ್ಯಾಹ್ನ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಕಲಾಕೇಸರಿ ನೃತ್ಯ ತಂಡದಿಂದ ನೃತ್ಯ ಸಂಭ್ರಮ ನಡೆಯಲಿದ್ದು, ರಾತ್ರಿ ಶ್ರೀ ಆಂಜನೇಯ ಸ್ವಾಮಿಗೆ ರಂಗಪೂಜೆ, ಅನ್ನಸಂತರ್ಪಣೆ ಜರುಗಲಿದೆ.
ಫೆ.27ರಂದು ಬೆಳಿಗ್ಗೆ ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ನಡೆಯಲಿದ್ದು, ದೀಪ ಪ್ರತಿಷ್ಠೆಯೊಂದಿಗೆ ಆಹ್ವಾನಿತ ತಂಡಗಳಿಂದ ಅಹ:ಪೂರ್ಣ ಭಜನಾ ಕಾರ್ಯಕ್ರಮ ನೆರವೇರಲಿದೆ.
ಪೂರ್ವಾಹ್ನ ಶ್ರೀ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲ ಸೇವೆ, ಶ್ರೀ ದೇವರಿಗೆ ಮಹಾಪೂಜೆ, ಬ್ರಹ್ಮಸಂತರ್ಪಣೆ, ಅನ್ನದಾನ ನಡೆಯಲಿದೆ.

ಅಪರಾಹ್ನ ಇಳಂತಾಜೆ ತರವಾಡಿನಲ್ಲಿ ವೀಳ್ಯ ನೀಡಿ ಹನುಮ ದೈವದ ಭಂಡಾರ ತರಲಾಗುವುದು. ಸಂಜೆ ಭಜನಾ ಕಾರ್ಯಕ್ರಮದ ಮಗಳಂ ನಡೆಯಲಿದೆ. ರಾತ್ರಿ ಗುಳಿಗರಾಜ ದೈವದ ಭಂಡಾರ ತೆಗೆದು ಶ್ರೀ ಆಂಜನೇಯ ಸ್ವಾಮಿಯ ಅಂಗಣಪ್ರವೇಶ, ಶ್ರೀ ಹನುಮ ನೇಮೋತ್ಸವ ನಡೆಯಲಿದೆ. ಬಳಿಕ ಗುಳಿಗರಾಜ ದೈವದ ಕೋಲ, ಶ್ರೀ ದೇವರಿಗೆ ಅಲಂಕಾರ ಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ಕಟ್ಟೆಪೂಜೆ, ದರ್ಶನಬಲಿ, ದೈವ – ದೇವರ ಭೇಟಿ, ಬಟ್ಟಲುಕಾಣಿಕೆ, ಶ್ರೀಮುಡಿ ಗಂಧಪ್ರಸಾದ ವಿತರಣೆ ಜರುಗಲಿದೆ.
ಫೆ.28ರಂದು ಬೆಳಿಗ್ಗೆ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಎಳನೀರು ಅಭಿಷೇಕ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ,ಅನ್ನಸಂತರ್ಪಣೆಯೊಂದಿಗೆ ಜಾತ್ರಾಮಹೋತ್ಸವವು ಸಂಪನ್ನಗೊಳ್ಳಲಿದೆ.